ನಗರಸಭೆ ಚುನಾವಣೆಗೆ ಸಿದ್ಧತೆ ಪ್ರಕ್ರಿಯೆ ಬಿರುಸು

7
ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಮಹಿಳಾ ಮತದಾರರೆ ಹೆಚ್ಚು; ‘ಇವಿಎಂ’ನಲ್ಲಿ ಅಭ್ಯರ್ಥಿ ಭಾವಚಿತ್ರ

ನಗರಸಭೆ ಚುನಾವಣೆಗೆ ಸಿದ್ಧತೆ ಪ್ರಕ್ರಿಯೆ ಬಿರುಸು

Published:
Updated:
Deccan Herald

ಕಾರವಾರ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಘೋಷಣೆಗೊಂಡು ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ಇಲ್ಲಿನ ನಗರಸಭೆಯ ಚುನಾವಣೆಗೆ ಸಿದ್ಧತೆ ಪ್ರಕ್ರಿಯೆಗಳು ಬಿರುಸುಗೊಂಡಿವೆ.

ನಗರಸಭೆಯ ಅಧ್ಯಕ್ಷರ ಕೊಠಡಿ, ಸಭಾಂಗಣ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಉಪವಿಭಾಗಾಧಿಕಾರಿ ಕಚೇರಿ, ಒಟ್ಟು ನಾಲ್ಕು ಕೊಠಡಿಗಳನ್ನು ಚುನಾವಣಾ ಅಧಿಕಾರಿ ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಅಲ್ಲಿ, ವಾರ್ಡ್‌ವಾರು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೊಠಡಿಗಳನ್ನು ವಾರ್ಡ್‌ವಾರು ವಿಂಗಡಿಸಲಾಗಿದೆ. ಇದರಿಂದ ಆಯಾ ವಾರ್ಡ್‌ಗೆ ನಾಮಪತ್ರ ಸಲ್ಲಿಕೆಗೆ ಬರುವವರು ಸಂಬಂಧಪಟ್ಟ ಕೊಠಡಿಗೆ ನೇರವಾಗಿ ನಾಮಪತ್ರ ಸಲ್ಲಿಸಬಹುದು ಅಥವಾ ಹಿಂದಕ್ಕೆ ಪಡೆಯಬಹುದಾಗಿದೆ.

ವಾಹನ, ಪ್ರವಾಸಿ ಮಂದಿರ ಸುಪರ್ದಿಗೆ: ನಗರಸಭೆ ಅಧ್ಯಕ್ಷರ ವಾಹನ ಸೇರಿದಂತೆ ನಗರದ ಪ್ರವಾಸಿ ಮಂದಿರವನ್ನೂ ಚುನಾವಣಾ ಅಧಿಕಾರಿ ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳು ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಆ.2ರಿಂದಲೇ ಚಾಲ್ತಿಯಲ್ಲಿವೆ.

ಮತಯಂತ್ರದಲ್ಲಿ ಅಭ್ಯರ್ಥಿ ಭಾವಚಿತ್ರ: ‘ವಿಧಾನಸಭಾ ಚುನಾವಣೆಯನ್ನು ನಡೆಸಿದಂತೆಯೇ ಈ ಬಾರಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ನಡೆಸಲಾಗುತ್ತಿದೆ. ಅದರಂತೆ, ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಕೆ ಮಾಡಲಾಗುತ್ತಿದೆ. ಇದರಲ್ಲಿ, ಅಭ್ಯರ್ಥಿಗಳ ಹೆಸರಿನ ಮುಂದೆ ಭಾವಚಿತ್ರ ಇರಲಿದೆ. ಆದರೆ, ಮತ ಖಾತ್ರಿ ಯಂತ್ರ (ವಿವಿಪ್ಯಾಟ್) ಇರುವುದಿಲ್ಲ. ಮತದಾರರಿಗೆ ಮತದಾನದ ಚೀಟಿಯನ್ನು ವಿತರಿಸಲಾಗುತ್ತಿದ್ದು, ಈ ಬಾರಿ ‘ನೋಟಾ’ವನ್ನೂ (ಯಾರಿಗೂ ಮತ ಇಲ್ಲ) ಬಳಸಲು ಅವಕಾಶ ನೀಡಲಾಗಿದೆ’ ಎಂದು ಇಲ್ಲಿನ ನಗರಸಭೆಯ ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ ಶ್ರೀದೇವಿಭಟ್ ತಿಳಿಸಿದರು.

164 ಚಿಹ್ನೆಗಳು ಸಿದ್ಧ: ‘ಸಾಮಾನ್ಯವಾಗಿ ಮಾನ್ಯತೆ ಇರುವ ಪಕ್ಷಗಳ ಅಭ್ಯರ್ಥಿಗಳು ಅವರದೇ ಪಕ್ಷದ ಚಿಹ್ನೆಯ ಅಡಿ ಸ್ಪರ್ಧಿಸಲಿದ್ದಾರೆ. ಮಾನ್ಯತೆ ಇಲ್ಲದ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗಾಗಿ ಚುನಾವಣಾ ಆಯೋಗವು 164 ಚಿಹ್ನೆಗಳನ್ನು ಸಿದ್ಧಪಡಿಸಿದೆ’ ಎಂದೂ ಅವರು ತಿಳಿಸಿದರು.

ಮಹಿಳಾ ಮತದಾರರೆ ಹೆಚ್ಚು: ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ 26,371 ಮಹಿಳಾ ಮತದಾರರಿದ್ದು, 25,933 ಪುರುಷ ಮತದಾರರು ಇದ್ದಾರೆ. ಒಟ್ಟು 52,304 -ಮತದಾರರು ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ. 67 ಪಿ.ಆರ್.ಒ, 67 ಎ.ಪಿ.ಆರ್.ಒ ಹಾಗೂ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 400 ಸಿಬ್ಬಂದಿ ಈ ನಗರಸಭೆಯ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ನಾಮಪತ್ರ ಸಲ್ಲಿಸಲು ‘ಅಮಾವಾಸ್ಯೆ’: ನಾಮಪತ್ರ ಸಲ್ಲಿಕೆಗೆ ಆ.10ರಿಂದ ಅವಕಾಶ ನೀಡಲಾಗಿತ್ತು. ಎರಡನೇ ಶನಿವಾರದ ರಜೆ ಇದ್ದರೂ ಸಹ ಆ.11ರಂದೂ ನಾಮಪತ್ರಗಳನ್ನು ಸ್ವೀಕರಿಸಲು ಅಧಿಕಾರಿಗಳು ಕಚೇರಿಗೆ ಬಂದಿದ್ದರು. ಆದರೆ, ‘ಶನಿವಾರದ ಅಮಾವಾಸ್ಯೆ ಕಳೆದ ಬಳಿಕ ನಾಮಪತ್ರ ಸಲ್ಲಿಸುತ್ತೇವೆ’ ಎಂದು ಸ್ಪರ್ಧೆ ಬಯಸಿರುವ ಅಭ್ಯರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಆ.12 ಹಾಗೂ 15ರಂದು ರಜೆ ಇದ್ದು, ಆ.17 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ಉಂಗುರ ಬೆರಳಿಗೆ ಶಾಯಿ...

‘ವಿಧಾನಸಭಾ ಚುನಾವಣೆ, ಅನೇಕ ಸಹಕಾರಿ ಸಂಘ– ಸಂಸ್ಥೆಗಳ ಚುನಾವಣೆಗಳೂ ಇತ್ತೀಚಿಗಷ್ಟೇ ನಡೆದಿರುವುದರಿಂದ ಮತದಾರರ ಎಡಗೈನ ತೋರುಬೆರಳಿಗೆ ಹಾಕಿರುವ ಶಾಯಿ (ಮಸಿ) ಹಾಗೆಯೇ ಉಳಿದುಕೊಂಡಿರಬಹುದು. ಹೀಗಾಗಿ, ಆ ಬೆರಳಿನ ಬದಲಿಗೆ ಉಂಗುರ ಬೆರಳಿಗೆ ಸಾಯಿ ಹಾಕಲು ಚುನಾವಣಾ ಆಯೋಗ ನಿರ್ಧರಿಸಿದೆ’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.

31 - ನಗರಸಭೆಯ ವಾರ್ಡ್‌ಗಳ ಸಂಖ್ಯೆ
55 - ಮತಗಟ್ಟೆಗಳು

 

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !