ಮಂಗಳವಾರ, ಅಕ್ಟೋಬರ್ 22, 2019
21 °C
ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡದ ಜಯದ ರೂವಾರಿಯಾಗಿದ್ದ ಸ್ಪಿನ್ನರ್

ಬೌಲಿಂಗ್‌ನ ಭರವಸೆ ಅಥರ್ವ ಅಂಕೋಲೆಕರ್

Published:
Updated:
Prajavani

ಕಾರವಾರ: ಅಥರ್ವ ಅಂಕೋಲೆಕರ್... 19 ವರ್ಷದ ಒಳಗಿನವರ ಏಷ್ಯಾಕಪ್ ಟೂರ್ನಿಯಲ್ಲಿ ಮಿಂಚು ಹರಿಸಿ ಕ್ರಿಕೆಟ್ ಪ್ರಿಯರ ಮನಗೆದ್ದಿರುವ ಯುವ ಆಟಗಾರ. 18 ವರ್ಷದ ಎಡಗೈ ಸ್ಪಿನ್ನರ್‌ಗೆ ಕಾರವಾರದೊಂದಿಗೆ ಅನ್ಯೋನ್ಯ ಸಂಬಂಧವಿದೆ.

ಹುಟ್ಟಿದ್ದು, ಬೆಳೆದಿದ್ದು ಮುಂಬೈನಲ್ಲೇ ಆದರೂ ಅವರ ತಂದೆಯ ಮೂಲಮನೆ ಇಲ್ಲಿನ ಕೋಡಿಬಾಗದಲ್ಲಿದೆ. ಅವರ ತಾಯಿ ವೈದೇಹಿ ಅವರೊಂದಿಗೆ ವರ್ಷಕ್ಕೊಮ್ಮೆ ಬಂದು ನಾಲ್ಕೈದು ದಿನ ಇಲ್ಲಿದ್ದು ಹೋಗುತ್ತಾರೆ.

ತಂದೆ ವಿನೋದ್ ಅವರ ಪ್ರೋತ್ಸಾಹದಿಂದ ಎಳವೆಯಲ್ಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಂಡ ಅಥರ್ವ, ಎರಡನೇ ತರಗತಿಯಲ್ಲಿದ್ದಾಗಲೇ ತರಬೇತಿ ಆರಂಭಿಸಿದರು. ಬಳಿಕ ಶಾಲಾ ತಂಡದಲ್ಲಿ, 14, 16 ವರ್ಷದ ಒಳಗಿನವರ ಮುಂಬೈ ತಂಡಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಕಳೆದ ವರ್ಷ 23 ವರ್ಷದ ಒಳಗಿನವರ ತಂಡದಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. 

ಪರಿಶ್ರಮಕ್ಕೆ ಬೆಲೆ ಎಂಬಂತೆ, ಸೆ.5ರಿಂದ ಸೆ.14ರವರೆಗೆ ಶ್ರೀಲಂಕಾದಲ್ಲಿ ನಡೆದ ‘ಏಷ್ಯಾ ಯೂಥ್ ಕ‍ಪ್’ ಟೂರ್ನಿಯ ಭಾರತೀಯ ತಂಡದಲ್ಲಿ ಸ್ಥಾನ ಪಡೆದರು. ಆಯ್ಕೆಗಾರರ ಭರವಸೆಯನ್ನು ಹುಸಿ ಮಾಡದೇ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರು. ಬಾಂಗ್ಲಾದೇಶದ ವಿರುದ್ಧ ನಡೆದ ಫೈನಲ್‌ನಲ್ಲಿ ಐದು ವಿಕೆಟ್ ಗಳಿಸಿ ಭಾರತವು ಏಳನೇ ಬಾರಿಗೆ ಟ್ರೋಫಿ ಗೆಲ್ಲಲು ಶ್ರಮಿಸಿದರು.

ಬಸ್ ನಿರ್ವಾಹಕಿಯ ಪುತ್ರ: ‘ನನ್ನ ಮಗ ರಾಷ್ಟ್ರೀಯ ತಂಡದ ಸಮವಸ್ತ್ರ ಧರಿಸಿದ್ದು ಅತ್ಯಂತ ಹೆಮ್ಮೆಯ ಕ್ಷಣ. ಇದು ಎಲ್ಲರಿಗೂ ಸಿಗದ ಅವಕಾಶ. ಅವನು ಏಷ್ಯಾ ಕಪ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾನೆ’ ಎಂದು ಅಥರ್ವನ ತಾಯಿ ವೈದೇಹಿ ಅಂಕೋಲೆಕರ್ ‘ಪ್ರಜಾವಾಣಿ’ಗೆ ಸಂಭ್ರಮದಿಂದ ಪ್ರತಿಕ್ರಿಯಿಸಿದರು.

ಪ್ರಸ್ತುತ ಬೃಹನ್ಮುಂಬೈ ವಿದ್ಯುತ್ ಪೂರೈಕೆ ಮತ್ತು ಸಾರಿಗೆಯಲ್ಲಿ (BEST) ನಿರ್ವಾಹಕಿಯಾಗಿರುವ ಅವರು, ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅದೇ ಸಂಸ್ಥೆಯಲ್ಲಿ ನಿರ್ವಾಹಕರಾಗಿದ್ದ ಪತಿ ವಿನೋದ್,  2010ರಲ್ಲಿ ನಿಧನರಾದರು. ಬಳಿಕ ಅವರ ಹುದ್ದೆಯನ್ನು ವೈದೇಹಿ ಅವರಿಗೆ ನೀಡಲಾಯಿತು. 

‘ನನ್ನ ಮಗನ ಸಾಧನೆ ನನಗೊಬ್ಬಳಿಗೇ ಸಂಭ್ರಮ ತಂದಿಲ್ಲ. ನಮ್ಮ ಸಂಸ್ಥೆಯ ಸಹೋದ್ಯೋಗಿಗಳು, ಸಂಬಂಧಿಕರು, ಪರಿಚಿತರು ಹೀಗೆ ನೂರಾರು ಮಂದಿ ಸಂದೇಶ ಕಳುಹಿಸಿದರು. ಕರೆ ಮಾಡಿ ಅಭಿನಂದಿಸಿದರು. ಇದು ಅತ್ಯಂತ ಹೆಮ್ಮೆಯ ಸಂಗತಿ’ ಎಂದು ಅವರು ಪ್ರತಿಕ್ರಿಯಿಸಿದರು.

ಅಥರ್ವ ಅವರ ಸಾಧನೆಯ ಮುಡಿಗೆ ಸದಾ ನೆನಪಿನಲ್ಲಿ ಇರುವ ಗರಿ ಮೂಡಿದ್ದು 2010ರಲ್ಲಿ. ಆಗ ಅವರಿಗೆ 10 ವರ್ಷ. ಮುಂಬೈನಲ್ಲಿ ನಡೆದ ಪ್ರಾಕ್ಟೀಸ್ ಪಂದ್ಯವೊಂದರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಔಟ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಸಚಿನ್ ತಮ್ಮ ಕೈಗವಸುಗಳಿಗೆ  ಸಹಿ ಮಾಡಿ ಉಡುಗೊರೆ ನೀಡಿ ಶುಭಾಶಯ ಕೋರಿದ್ದರು.

ಬಳಿಕ ನಿರಂತರ ಪರಿಶ್ರಮ, ಮನೆಯಲ್ಲಿ ತಾಯಿಯ ಬೆಂಬಲ, ಕಾಲೇಜಿನಲ್ಲಿ ಪ್ರೋತ್ಸಾಹದ ಫಲವಾಗಿ ಈಗ ಅಥರ್ವ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡುವತ್ತ ಸಾಗುತ್ತಿದ್ದಾರೆ. ದೇಶದ ತಂಡಕ್ಕೆ ಅತ್ಯುತ್ತಮ ಸ್ಪಿನ್ನರ್ ಅವರಾಗಲಿ ಎಂದು ಕ್ರಿಕೆಟ್ ಪ್ರಿಯರು, ಕಾರವಾರದ ಅವರ ಪರಿಚಿತರು ಹಾರೈಸುತ್ತಿದ್ದಾರೆ.

ಏಷ್ಯಾ ಕಪ್‌ನಲ್ಲಿ ಅಥರ್ವ ಸಾಧನೆ

ವಿಕೆಟ್; ವಿರುದ್ಧ

5; ಬಾಂಗ್ಲಾದೇಶ

4; ಆಫ್ಗಾನಿಸ್ತಾನ

3; ಪಾಕಿಸ್ತಾನ

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)