ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ 2026ಕ್ಕೆ ಪೂರ್ಣಗೊಳಿಸುವ ಗುರಿ

ಕೈಗಾ 5 ಮತ್ತು 6ನೇ ಘಟಕಗಳ ಸ್ಥಾಪನೆ ಸಂಬಂಧ ಪರಿಸರ ಪರಿಣಾಮದ ವರದಿ
Last Updated 5 ನವೆಂಬರ್ 2018, 16:45 IST
ಅಕ್ಷರ ಗಾತ್ರ

ಕಾರವಾರ:ಭಾರತೀಯ ಅಣು ವಿದ್ಯುತ್ ನಿಗಮವು (ಎನ್‌ಪಿಸಿಐಎಲ್) ಕೈಗಾ ಅಣು ವಿದ್ಯುತ್ ಸ್ಥಾವರದ ಆವರಣದಲ್ಲಿ ಐದು ಮತ್ತು ಆರನೇ ಘಟಕಗಳ ಸ್ಥಾಪನೆ ಕಾರ್ಯವನ್ನು 2026ಕ್ಕೆ ಪೂರ್ಣಗೊಳಿಸುವ ಗುರಿ ಹೊಂದಿದೆ. ಇದಕ್ಕಾಗಿ ಅಂದಾಜು ₹ 21 ಸಾವಿರ ಕೋಟಿ ವೆಚ್ಚವಾಗಲಿದೆ. ನಿಗಮವು ಮೆಕಾನ್ ಸಂಸ್ಥೆಯ ಮೂಲಕ ಪ್ರಕಟಿಸಿರುವ ಪರಿಸರ ಪರಿಣಾಮದ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ.

ತಲಾ 700 ಮೆಗಾವಾಟ್ ಸಾಮರ್ಥ್ಯದ ಎರಡು ಘಟಕಗಳ ಸ್ಥಾಪನೆಗೆ ಕೇಂದ್ರ ಸರ್ಕಾರವು ಒಂದು ವರ್ಷದ ಹಿಂದೆಯೇ ಅನುಮತಿ ನೀಡಿತ್ತು. ಈ ಸಂಬಂಧ ಪರಿಸರದ ಮೇಲಾಗಬಹುದಾದ ಪರಿಣಾಮಗಳ ಕುರಿತು ಸಮೀಕ್ಷೆ ನಡೆಸಲಾಗಿದೆ. ಘಟಕಗಳ ಸ್ಥಾಪನೆಗೆ ಅಗತ್ಯವಿರುವ ಮತ್ತು ಲಭ್ಯವಿರುವ ಜಾಗ, ಕೆಲಸ ನಿರ್ವಹಿಸಲು ಬೇಕಾಗುವ ಸಿಬ್ಬಂದಿ, ಅವರಿಗೆ ವಸತಿ ಸೌಕರ್ಯ, ಸಾರಿಗೆ ಸೌಲಭ್ಯ ಮುಂತಾದ ಅಂಶಗಳನ್ನು ಸಮೀಕ್ಷೆಯ ಸಂದರ್ಭ ಪರಿಗಣಿಸಲಾಗಿದೆ.

ಕಾರ್ಮಿಕರೆಷ್ಟು?: ಘಟಕಗಳ ನಿರ್ಮಾಣ ಹಂತದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಕಾರ್ಮಿಕರ ಅಗತ್ಯವಿದೆ. ಕಾರ್ಯಾಚರಣೆ ಮತ್ತು ನಿರ್ವಹಣೆಯ ಹಂತದಲ್ಲಿ ಅಂದಾಜು 789 ಸಿಬ್ಬಂದಿ ಬೇಕಾಗಬಹುದು. ನಿರ್ಮಾಣದ ಅವಧಿಯಲ್ಲಿ ಅಂದಾಜು 10 ಮೆಗಾವಾಟ್ ವಿದ್ಯುತ್ ಬೇಕಾಗಲಿದ್ದು, ಅದನ್ನು ಕೈಗಾದ ಒಂದು ಮತ್ತು ಎರಡನೇ ಘಟಕಗಳಿಂದ ಪೂರೈಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.

ಕೈಗಾದ ಸಿಬ್ಬಂದಿಗೆ ವಸತಿ ಸಂಕೀರ್ಣಗಳಿಗಾಗಿ 95.91 ಹೆಕ್ಟೇರ್ ಪ್ರದೇಶ ಜಮೀನು ಮೀಸಲಿದೆ. ಮಲ್ಲಾಪುರ– ವಿರ್ಜೆಯಲ್ಲಿ ನೂತನ ಘಟಕಗಳ ಸಿಬ್ಬಂದಿಗೂ ವಸತಿ ಸೌಕರ್ಯ ನೀಡಲಾಗುವುದು. ಇದಕ್ಕಾಗಿ 28.73 ಹೆಕ್ಟೇರ್ ಜಮೀನು ಬಳಕೆಯಾಗಲಿದೆ. ಘಟಕಗಳ ಕಾರ್ಯಾಚರಣೆಗೆ ಅಂದಾಜು 2.6 ಕ್ಯುಸೆಕ್ ನೀರು ಬೇಕಾಗಲಿದೆ. ಅದನ್ನು ಕಾಳಿ ನದಿಗೆ ಕಟ್ಟಲಾಗಿರುವ ಕದ್ರಾ ಅಣೆಕಟ್ಟಿನಿಂದ ಪೂರೈಸಲಾಗುತ್ತದೆ. ಅಲ್ಲದೇ ತ್ಯಾಜ್ಯ ನೀರಿನ ಗರಿಷ್ಠ ಮರುಬಳಕೆಗೂ ಯೋಜಿಸಲಾಗಿದೆ.

ಯೋಜನಾ ಪ್ರದೇಶದ ಒಟ್ಟು 30 ಹೆಕ್ಟೇರ್ ಪ್ರದೇಶದಲ್ಲಿ‘ಹಸಿರು ಬೆಲ್ಟ್’ (ನೆಡುತೋಪು) ಬೆಳೆಸಲಾಗುವುದು. ಈ ಮೂಲಕ ರಾತ್ರಿ ವೇಳೆ ಪ್ರಾಣಿ, ಪಕ್ಷಿಗಳಿಗೆ ಪ್ರಖರ ಬೆಳಕಿನಿಂದ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗುವುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರಿ ವಾಹನಗಳ ಸಂಚಾರ: ಕಾಮಗಾರಿಗೆ ಅಗತ್ಯವಾಗಿರುವ ಬೃಹತ್ ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು ಬೃಹತ್ ವಾಹನದಲ್ಲಿ ತರಲಾಗುವುದು. ಅದು ದಿನಕ್ಕೆ ಒಂದೇ ಬಾರಿ ರಾತ್ರಿ 10ರಿಂದ ಬೆಳಿಗ್ಗೆ 5ರ ಅವಧಿಯಲ್ಲಿ ಮಾತ್ರ ಸಂಚರಿಸಲಿದೆ. ಇದರಿಂದ ಸಾರ್ವಜನಿಕರಿಗೆ ಕನಿಷ್ಠ ತೊಂದರೆಯಾಗಲಿದೆ.ಕಾಮಗಾರಿಯ ಸಂದರ್ಭ ನೀರು, ಗಾಳಿ, ಶಬ್ದ ಮಾಲಿನ್ಯ ಆಗಬಹುದು. ಆದರೆ, ಅದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಡಿ.15ರಂದು ಸಾರ್ವಜನಿಕ ಸಭೆ:ಐದು ಮತ್ತು ಆರನೇ ಘಟಕಗಳ ಸ್ಥಾಪನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ಮತ್ತು ಸಾರ್ವಜನಿಕರ ಅಹವಾಲುಗಳನ್ನು ತಿಳಿದುಕೊಳ್ಳಲು ಮುಂದಿನ ತಿಂಗಳು 15ರಂದು ಸಭೆ ಆಯೋಜಿಸಲಾಗಿದೆ. ಕೈಗಾದ ಟೌನ್‌ಶಿಪ್ ಪ್ರದೇಶದಲ್ಲಿ ಸಭೆ ನಡೆಯಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

––––

ಕೈಗಾ ಅಣು ವಿದ್ಯುತ್ ಸ್ಥಾವರ: ಅಂಕಿ ಅಂಶ

1,665 ಹೆಕ್ಟೇರ್

ಎನ್‌ಪಿಸಿಐಎಲ್ ವಶದಲ್ಲಿರುವ ಜಮೀನು

829 ಹೆಕ್ಟೇರ್

ಕದ್ರಾ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆ

120 ಹೆಕ್ಟೇರ್

ನಾಲ್ಕು ಘಟಕಗಳು, ವಸತಿ, ರಸ್ತೆಗೆ ಬಳಕೆ

54.09 ಹೆಕ್ಟೇರ್

5, 6ನೇ ಘಟಕ ಸ್ಥಾಪನೆಗೆ ಮೀಸಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT