ನೈಸರ್ಗಿಕ ಸೌಂದರ್ಯದ ಮಡಿಲಲ್ಲಿ ‘ಓಶಿಯನ್ ಡೆಕ್’

7
ವರಮಾನ ತಂದುಕೊಟ್ಟ ಕಾಳಿ– ಅರಬ್ಬಿ ಸಂಗಮ ಪ್ರದೇಶ; ಹೋಂ ಸ್ಟೇ ಪ್ರಾರಂಭಿಸಿ ಯಶಸ್ವಿಯಾದ ಉದ್ಯಮಿ

ನೈಸರ್ಗಿಕ ಸೌಂದರ್ಯದ ಮಡಿಲಲ್ಲಿ ‘ಓಶಿಯನ್ ಡೆಕ್’

Published:
Updated:
Deccan Herald

ಕಾರವಾರ: ಜಿಲ್ಲೆಯಲ್ಲಿರುವ ನೈಸರ್ಗಿಕ ಸೌಲಭ್ಯಗಳನ್ನೇ ಬಳಸಿಕೊಂಡು ಪ್ರವಾಸೋದ್ಯಮ ಚಟುವಟಿಕೆ ಪ್ರಾರಂಭಿಸುವ ಮೂಲಕ ಯಶಸ್ವಿ ಉದ್ಯಮವನ್ನು ಕಂಡುಕೊಳ್ಳಬಹುದು ಎಂದು ಇಲ್ಲಿನ ‘ಓಶಿಯನ್ ಡೆಕ್’ ಹೋಂ ಸ್ಟೇ ಮಾಲೀಕ ವಿನಯ ನಾಯ್ಕ ತೋರಿಸಿಕೊಟ್ಟಿದ್ದಾರೆ.

ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರುವ ಅವರು, ಪ್ರವಾಸೋದ್ಯಮ ಚಟುವಟಿಕೆಯ ಭಾಗವಾದ ಹೋಂ ಸ್ಟೇ ಅನ್ನು ನಾಲ್ಕೂವರೆ ವರ್ಷಗಳ ಹಿಂದೆ ಪ್ರಾರಂಭಿಸಿದರು. ಅದೀಗ ಅವರನ್ನು ನಗರದ ಯಶಸ್ವಿ ಯುವ ಉದ್ಯಮಿಗಳ ಸಾಲಿನಲ್ಲಿ ಸೇರುವಂತೆ ಮಾಡಿದೆ.

ನಿಸರ್ಗವೇ ವರಮಾನ:

‘ಗೋವಾದ ಸಮುದ್ರ, ನದಿ ತೀರಗಳಲ್ಲಿ ಮನೆಗಳನ್ನು ನಿರ್ಮಿಸಿ, ಮಾರಾಟ ಮಾಡುವ ಕನ್ಸ್‌ಟ್ರಕ್ಷನ್ ಕಂಪನಿಯಲ್ಲಿ ಈ ಮೊದಲು ಕೆಲಸ ಮಾಡುತ್ತಿದ್ದೆ. ಆ ಮನೆಗಳಿಗೆ ಉದ್ಯಮಿಗಳು ಕೋಟ್ಯಾಂತರ ರೂಪಾಯಿ ಕೊಟ್ಟು ಖರೀದಿ ಮಾಡುತ್ತಿದ್ದರು. ಅಲ್ಲಿನ ಸಮುದ್ರ ಹಾಗೂ ನದಿಗಳ ವಿಹಂಗಮ ನೋಟ ಆ ಮನೆಗಳಿಗೆ ಅಷ್ಟೊಂದು ಬೆಲೆ ತಂದುಕೊಡುತ್ತಿದ್ದವು’ ಎಂದು ವಿನಯ ನಾಯ್ಕ ಹೇಳಿದರು.

‘ನಮ್ಮಲ್ಲಿಯೂ ನದಿ, ಸಮುದ್ರಗಳಿವೆ. ಅದನ್ನು ಈ ರೀತಿ ಬಳಸಿಕೊಳ್ಳುವವರು ಯಾರೂ ಇಲ್ಲವೆಂದು ಬೇಸರ ಎನಿಸಿತು. ಗೋವಾ ರಾಜ್ಯಕ್ಕಿಂತ ಸುಂದರ ಪ್ರದೇಶಗಳೂ ನಮ್ಮಲ್ಲಿ ಇವೆ. ನಾವ್ಯಾಕೆ ಅವರಂತೆ ಯೋಚಿಸಬಾರದು ಅಂದುಕೊಂಡ ನನಗೆ ಹೊಳೆದಿದ್ದು ಹೋಂ ಸ್ಟೇ’ ಎಂದು ತಮ್ಮ ಉದ್ಯಮದ ಹಿಂದಿನ ನೆನಪುಗಳನ್ನು ‘ಪ್ರಜಾವಾಣಿ’ ಜತೆ ಬಿಚ್ಚಿಟ್ಟರು.

ಯಶಸ್ಸಿಗೆ ಪೂರಕವಾದ ಸಂಗಮ ಪ್ರದೇಶ:

 ‘ಕಾಳಿ ನದಿ ಹಾಗೂ ಅರಬ್ಬಿ ಸಮುದ್ರ ಸೇರುವ ಸಂಗಮ ಪ್ರದೇಶವಾದ ಸದಾಶಿವಗಡದ ದೇವಬಾಗದಲ್ಲಿ ಹೋಂ ಸ್ಟೇ ಪ್ರಾರಂಭಿಸಿದೆ. ಇದು ನನ್ನ ಯಶಸ್ಸಿಗೆ ಕಾರಣವಾಯಿತು. ಐದು ಕೊಠಡಿಗಳನ್ನು ತೆರೆದು, ಬರುವ ಪ್ರವಾಸಿಗರಿಗೆ ಕರಾವಳಿಯ ಮೀನಿನ ಖಾದ್ಯಗಳನ್ನು ಉಣ ಬಡಿಸಿದೆ. ನಮ್ಮಲ್ಲಿನ ಮೀನು ಊಟ ಸವಿದವರು ಇನ್ನೊಮ್ಮೆ ಬರೋವಾಗ ಮತ್ತೆರಡು ಪ್ರವಾಸಿಗರನ್ನು ಕರೆದುಕೊಂಡು ಬರಲು ಪ್ರಾರಂಭಿಸಿದರು. ಅವರು ಮತ್ತಿಬ್ಬರುನ್ನು, ಹೀಗೆ ಪ್ರವಾಸಿಗರಿಂದಲೇ ನನ್ನ ಉದ್ಯಮದ ಪ್ರಚಾರವಾಯಿತು’ ಎನ್ನುತ್ತಾರೆ ಅವರು.

ಮನೆಯ ಕಲ್ಪನೆ: 

‘ಹೋಂ ಸ್ಟೇ ಎಂದರೆ ಪ್ರವಾಸಿಗರಿಗೆ ಮನೆಯ ಕಲ್ಪನೆ ಮೂಡಿಸುವುದು. ಮನೆಗೆ ನೆಂಟರು ಬಂದರೆ ಹೇಗೆ ಉಪಚರಿಸುತ್ತೇವೆಯೋ, ಹಾಗೆ ನಮ್ಮಲ್ಲಿ ನೋಡಿಕೊಳ್ಳಲಾಗುತ್ತದೆ. ಹೋಂ ಸ್ಟೇಗೆ ಬಂದವರಿಗೆ ಮೊದಲು ಸ್ವಾಗತ ಪಾನೀಯಗಳನ್ನು, ಬಳಿಕ ಬೆಳಿಗ್ಗಿನ ಉಪಹಾರ, ಮಧ್ಯಾಹ್ನ, ರಾತ್ರಿಯ ಊಟ ನೀಡಲಾಗುವುದು. ಚಾರಣ, ಬೋಟಿಂಗ್, ಕಯಾಕ್, ಡಾಲ್ಫಿನ್ ಬೋಟಿಂಗ್ ಹೀಗೆ ಅನೇಕ ಸೌಲಭ್ಯಗಳನ್ಉ ನಮ್ಮಲ್ಲಿ ಅಳವಡಿಸಿಕೊಂಡೆವು. ಈವರೆಗೆ 15 ಸಾವಿರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ, ನಮ್ಮ ಸೇವೆಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.
 

‘ಗೋಲ್ಡನ್ ಕ್ಯಾಟಗರಿ’ ಗರಿಮೆ

ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಹೋಂ ಸ್ಟೇಗಳು ಇವೆ. ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಪ್ರತಿನಿಧಿಗಳು ಜಿಲ್ಲೆಗೆ ಭೇಟಿ ನೀಡಿ ಅವುಗಳೆಲ್ಲವನ್ನೂ ಪರಿಶೀಲಿಸಿದ್ದಾರೆ. ಅದರಲ್ಲಿ ಮೂರು ಹೋಂ ಸ್ಟೇಗಳನ್ನು ‘ಗೋಲ್ಡನ್ ಕ್ಯಾಟಗರಿ’ಯಲ್ಲಿ ಸೇರಿಸಿದ್ದಾರೆ. ನಮ್ಮದೂ ಕೂಡ ಆ ಮೂರರಲ್ಲಿ ಒಂದಾಗಿದೆ ಎಂದು ಹೇಳಲು ಖುಷಿಯಾಗುತ್ತದೆ ಎನ್ನುತ್ತಾರೆ ವಿನಯ ನಾಯ್ಕ.

ಕಾಂಡ್ಲಾ ನೆಡುವ ಪ್ರವಾಸಿಗರು

ಬಾಯಿ ಮಾತಲ್ಲಿ ಎಲ್ಲರೂ ಅರಣ್ಯ ಬೆಳೆಸಬೇಕು ಎನ್ನುತ್ತಾರೆ. ಆದರೆ, ಯಾರೂ ಅದನ್ನು ಕಾರ್ಯರೂಪಕ್ಕೆ ತರುವುದಿಲ್ಲ. ಅಮೂಲ್ಯವಾಗಿರುವ ಕಾಂಡ್ಲಾ ಸಸಿಗಳನ್ನು ನಮ್ಮ ಹೋಂ ಸ್ಟೇನಲ್ಲಿ ನಡೆಲಾಗುತ್ತದೆ. ಅದೂ ಕೂಡ ಪ್ರವಾಸಿಗರ ಕೈಯಿಂದಲೇ ನೆಡಿಸುವ ಮೂಲಕ ಅವರಿಗೆ ಕಾಂಡ್ಯಾ ಸಸಿಗಳ ಮಾಹಿತಿ ನೀಡಲಾಗುತ್ತಿದೆ ಎಂದು ವಿನಯ ನಾಯ್ಕ ತಿಳಿಸಿದರು.

 ಪ್ರವಾಸೋದ್ಯಮ ಚಟುವಟಿಕೆಗಳನ್ನು ಪ್ರಾರಂಭಿಸಲು ಜಿಲ್ಲೆಯಲ್ಲಿ ವಿಪುಲ ಅವಕಾಶಗಳಿವೆ. ಪ್ರವಾಸಿಗರಿಗೆ ಉತ್ತಮ ಸೇವೆ ನೀಡಿದರೆ ಉದ್ಯಮ ಎತ್ತರಕ್ಕೇರಲಿದೆ
ವಿನಯ ನಾಯ್ಕ, ‘ಓಶಿಯನ್ ಡೆಕ್’ ಹೋಂ ಸ್ಟೇ ಮಾಲೀಕ

94 ಕಿ.ಮೀ.- ಗೋವಾ ವಿಮಾನ ನಿಲ್ದಾಣದಿಂದ
14 ಕಿ.ಮೀ. - ಶಿರವಾಡ ರೈಲು ನಿಲ್ದಾಣದಿಂದ
6 ಕಿ.ಮೀ.- ಕಾರವಾರ ಬಸ್ ನಿಲ್ದಾಣದಿಂದ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !