ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲಾಮೆ ಮರಿ ನೀರಿಗೆ ಕಳುಹಿಸಿದ ವಿಶೇಷ ಮಕ್ಕಳ ಸಂಭ್ರಮ

Last Updated 3 ಏಪ್ರಿಲ್ 2019, 14:32 IST
ಅಕ್ಷರ ಗಾತ್ರ

ಕುಮಟಾ:ತಾಲ್ಲೂಕಿನ ಧಾರೇಶ್ವರ ಸಮುದ್ರ ತೀರದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತುಸಿಬ್ಬಂದಿ ‘ಒಲಿವ್ ರಿಡ್ಲೆ’ ಜಾತಿಯ ಕಡಲಾಮೆಯಸುಮಾರು 60 ಮರಿಗಳನ್ನು ಬುಧವಾರ ನೀರಿಗೆ ಬಿಟ್ಟರು. ತಾಲ್ಲೂಕಿನ ದಯಾನಿಲಯ ವಿಶೇಷ ಶಾಲೆಯ ಮಕ್ಕಳು ಈ ಕಾರ್ಯಕ್ರಮದಲ್ಲಿಭಾಗವಹಿಸಿದ್ದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಿರಣಕುಮಾರ ಅವರು ಕಡಲಾಮೆ ಮರಿಗಳನ್ನು ಒಂದೊಂದಾಗಿ ಮಕ್ಕಳ ಕೈಗಿಟ್ಟು ಸಮುದ್ರಕ್ಕೆ ಬಿಡಲು ಪ್ರೋತ್ಸಾಹಿಸಿದರು.ಕುಮಟಾ ವಲಯ ಅರಣ್ಯಾಧಿಕಾರಿ ವರದ ರಂಗನಾಥ, ಕಡಲಾಮೆಯ ಕುತೂಹಲಕಾರಿ ಮಾಹಿತಿಗಳನ್ನು ನೀಡಿದರು.

‘ಕಡಲಾಮೆ ಮೊಟ್ಟೆಗಳನ್ನು ಉಸುಕಿನಲ್ಲಿ ಸುಮಾರು 45 ಸೆಂ.ಮೀ. ಆಳದಲ್ಲಿ 52ರಿಂದ 55 ದಿವಸಗಳ ಕಾಲ ಹೂತಿಟ್ಟು ಮರಿಯಾಗಲು ಕಾಯಲಾಗುತ್ತದೆ. ಅದಕ್ಕೆ ಅಲ್ಲಿ 29 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಉಷ್ಣತೆ ದೊರೆತರೆ ಮೊಟ್ಟೆಯಿಂದ ಹೊರ ಬರುವ ಮರಿಗಳು ಹೆಣ್ಣಾಗುತ್ತವೆ. ಕಡಿಮೆ ಉಷ್ಣತೆ ದೊರೆತರೆ ಗಂಡು ಮರಿಗಳು ಹೊರಬರುತ್ತವೆಎನ್ನುವುದು ವಿಚಿತ್ರ ಸತ್ಯ’ಎಂದು ವಿವರಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಿರಣಕುಮಾರ, ‘ನೀರಿಗೆ ಬಿಡುವ ಸಾವಿರ ಮರಿಗಳಲ್ಲಿ ಸಾಮಾನ್ಯವಾಗಿ ಒಂದು ಮಾತ್ರ ಜೀವಂತ ಉಳಿದು ದೊಡ್ಡದಾಗಿ ಮುಂದೆ ವಂಶಾಭಿವೃದ್ಧಿ ಮಾಡುತ್ತದೆ. ಉಳಿದವುತಿಮಿಂಗಿಲ, ದೊಡ್ಡ ಮೀನುಗಳು, ಮೀನುಗಾರರ ಬಲೆಗೆ ಸಿಕ್ಕಿ ಸಾವನ್ನಪ್ಪುತ್ತವೆ. ಕಳೆದ ಸೆಪ್ಟಂಬರ್‌ನಿಂದಈ ವರ್ಷ ಮಾರ್ಚ್ ಅಂತ್ಯದವರೆಗೆ ಧಾರೇಶ್ವರ ಕಡಲ ತೀರದಲ್ಲಿ 2,400 ಕಡಲಾಮೆ ಮೊಟ್ಟೆಗಳನ್ನು ಸಂಗ್ರಹಿಸಿ ಗೂಡಿನಲ್ಲಿ ಸಂರಕ್ಷಿಸಲಾಗಿದೆ. ಅವುಗಳಲ್ಲಿ ಮೊಟ್ಟೆಯೊಡೆದು ಹೊರ ಬಂದ 580 ಮರಿಗಳನ್ನು ಸಮುದ್ರಕ್ಕೆ ಬಿಡಲಾಗಿದೆ’ ಎಂದು ತಿಳಿಸಿದರು.

ಗೂಡಿನಲ್ಲಿದ್ದ ಉಳಿದ ಮೊಟ್ಟೆಗಳಿಂದ ಹಂತ ಹಂತವಾಗಿ ಹೊರ ಬರುವ ಮರಿಗಳನ್ನು ನೀರಿಗೆ ಬಿಡಲಾಗುವುದು. ಧಾರೇಶ್ವರದಲ್ಲಿ ಸ್ಥಳೀಯರಾದ ಶಂಕರ ನಾಯ್ಕ ಹಾಗೂ ಉಮೇಶ ನಾಯ್ಕ ಅವರಿಗೆ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸುವ ಜವಾಬ್ದಾರಿ ವಹಿಸಲಾಗಿದೆ ಎಂದರು.

ದಯಾನಿಲಯ ಬುದ್ಧಿಮಾಂದ್ಯ ಶಾಲೆಯ ಮಕ್ಕಳು ಕಡಲಾಮೆ ಮರಿಗಳನ್ನು ನೀರಿಗೆ ಬಿಟ್ಟು ಖುಷಿಪಟ್ಟರು. ಶಾಲೆಯ ಮುಖ್ಯ ಶಿಕ್ಷಕಿ ಲವೀನಾ ಲೊಪೀಸ್, ಸಹನಾ ಪೀಟರ್, ಚಂದ್ರಕಲಾ ಹರ್ಮಲಕರ್, ಪೂಜಾ ಹರಿಕಾಂತ, ಪುರುಷೋತ್ತಮ ಗಾಂವ್ಕರ್ ಹಾಗೂ ಬಾಲಕೃಷ್ಣ ಕೋರೆಗಾಂವ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT