ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತೆಯ ಸಹಾಯಕ್ಕೆ ಬರುತ್ತಾಳೆ ‘ಸಖಿ’

ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾದವರಿಗೆ ಒಂದೇ ಸೂರಿನಡಿ ಅಗತ್ಯ ನೆರವು
Last Updated 19 ಜುಲೈ 2019, 19:30 IST
ಅಕ್ಷರ ಗಾತ್ರ

ಕಾರವಾರ:ಲೈಂಗಿಕ ದೌರ್ಜನ್ಯ, ಅತ್ಯಾಚಾರದ ಆಘಾತಕ್ಕೆ ಒಳಗಾವರಿಗೆ, ‘ಪೊಕ್ಸೊ’ ಪ್ರಕರಣದ ಸಂತ್ರಸ್ತ ಬಾಲಕಿಯರಿಗೆ, ಮಾನಸಿಕ ಸ್ಥಿಮಿತ ಕಳೆದುಕೊಂಡ ಮಹಿಳೆಯರಿಗೆ ಇನ್ನುಮುಂದೆ ‘ಸಖಿ’ ನೆರವು ನೀಡಲಿದ್ದಾಳೆ. ಕಾನೂನು, ವೈದ್ಯಕೀಯ, ಕೌನ್ಸೆಲಿಂಗ್, ತಾತ್ಕಾಲಿಕ ವಸತಿ ಮುಂತಾದ ಎಲ್ಲ ಸೌಕರ್ಯಗಳನ್ನೂ ಒದಗಿಸಲಿದ್ದಾಳೆ.

ಹೌದು, ಈ ಯೋಜನೆಯ ಫಲವು ಜಿಲ್ಲಾ ಕೇಂದ್ರದಲ್ಲಿ ಇನ್ನು ಆರು ತಿಂಗಳ ಅವಧಿಯಲ್ಲಿ ಪರಿಪೂರ್ಣವಾಗಿ ಲಭಿಸುವ ನಿರೀಕ್ಷೆಯಿದೆ. ‘ಸಖಿ’ ಕಟ್ಟಡದ ನಿರ್ಮಾಣಕ್ಕಾಗಿಕೇಂದ್ರ ಸರ್ಕಾರದಿಂದ₹ 44.95 ಲಕ್ಷಅನುದಾನ ಬಿಡುಗಡೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕಾಮಗಾರಿಗೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಈಗಾಗಲೇ ಚಾಲನೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆದಿದ್ದ ‘ನಿರ್ಭಯಾ’ ಪ್ರಕರಣದ ನಂತರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಹಾಯ ಕೇಂದ್ರವನ್ನು ಆರಂಭಿಸುವಂತೆ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ವಿವರವನ್ನು ಗೋಪ್ಯವಾಗಿ ಇಡುವ ನಿಟ್ಟಿನಲ್ಲಿ ಕೇಂದ್ರದ ವಿನ್ಯಾಸ ಇರಬೇಕು. ಜಿಲ್ಲಾ ಆಸ್ಪತ್ರೆಯ ಸನಿಹದಲ್ಲೇ ಕಟ್ಟಡವನ್ನು ನಿರ್ಮಾಣ ಮಾಡಬೇಕು. ಸಂತ್ರಸ್ತರಿಗೆ ಕಾನೂನು, ವೈದ್ಯಕೀಯ, ಆಪ್ತ ಸಲಹೆ ಸೇರಿದಂತೆ ಎಲ್ಲ ಅಗತ್ಯ ನೆರವನ್ನೂ ನೀಡಬೇಕು. ಮುಖ್ಯವಾಗಿ ಅವರ ಮಾನಸಿಕ ಸ್ಥೈರ್ಯ ಕುಂದದಂತೆ ನೋಡಿಕೊಳ್ಳಬೇಕು ಎಂಬ ಆಶಯ ಈ ಕೇಂದ್ರ ನಿರ್ಮಾಣದ ಹಿಂದಿದೆ.

‘ದೌರ್ಜನ್ಯಕ್ಕೆ ಒಳಗಾದ ಕೂಡಲೇ ಸಂತ್ರಸ್ತೆಯನ್ನು ಈ ಕೇಂದ್ರಕ್ಕೇ ಕರೆದುಕೊಂಡು ಬರಲಾಗುತ್ತದೆ.ಆಕೆಯ ಮಾಹಿತಿ ಹೊರಗೆ ತಿಳಿಯಬಾರದು ಎಂಬ ಕಾರಣಕ್ಕಾಗಿ ಆಸ್ಪತ್ರೆಯ ಆವರಣದಲ್ಲೇ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಕೇಂದ್ರಕ್ಕೆ ಒಬ್ಬರು ಆಡಳಿತಾಧಿಕಾರಿ, ಆಪ್ತ ಸಲಹೆಗಾರರು ಅಥವಾ ವೈದ್ಯಕೀಯ ಸಲಹೆಗಾರರು, ವಕೀಲರನ್ನು ನೇಮಕ ಮಾಡಲಾಗುತ್ತದೆ. ಕಟ್ಟಡದಲ್ಲಿ ಮೂರು ಕೊಠಡಿಗಳು ಇರಲಿದ್ದು, ವಿಡಿಯೊ ಕಾನ್ಫರೆನ್ಸ್ ಸೌಲಭ್ಯವೂ ಸಿಗಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜೇಂದ್ರ ಬೇಕಲ್ ಮಾಹಿತಿ ನೀಡಿದರು.

‘ಕೇಂದ್ರದ ಅಗತ್ಯವಿದೆ’:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದಲೇ ‘ಸಖಿ’ ಕೇಂದ್ರದನಿರ್ವಹಣೆ ಮಾಡಲಾಗುತ್ತದೆ. ಉಡುಪಿಯಲ್ಲಿ ಈಗಾಗಲೇ ಈ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.ಲೈಂಗಿಕ ದೌರ್ಜನ್ಯದಿಂದ ತೀವ್ರ ಆಘಾತಕ್ಕೆ ಒಳಗಾದ ಮಹಿಳೆಯರ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕೇಂದ್ರ ತೀರಾ ಅಗತ್ಯವಿದೆಎಂದು ರಾಜೇಂದ್ರ ಬೇಕಲ್ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT