ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ

₹ 80 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಘಟಕ
Last Updated 9 ಮೇ 2021, 19:30 IST
ಅಕ್ಷರ ಗಾತ್ರ

ಯಲ್ಲಾಪುರ: ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗುವಂತೆ ಯಲ್ಲಾಪುರ ತಾಲ್ಲೂಕು ಆಸ್ಪತ್ರೆ ಆವರಣದಲ್ಲೇ ಆಮ್ಲಜನಕ ಉತ್ಪಾದನೆ ಆರಂಭಿಸಲಾಗುತ್ತಿದೆ. ಜಿಲ್ಲೆಯ ಮೊದಲ ಘಟಕ ಇದಾಗಲಿದ್ದು, ಮೂರು ದಿನಗಳಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ.

ಸುಮಾರು ₹ 80 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ. ಟ್ಯಾಂಕ್ ಮತ್ತು ಯಂತ್ರಗಳನ್ನು ಅಳವಡಿಸಲಾಗಿದೆ. ಚಿಕ್ಕಪುಟ್ಟ ಸಲಕರಣೆಗಳ ಅಳವಡಿಕೆಗಳು ಉಳಿದಿದ್ದು, ಅವುಗಳನ್ನು ಪೂರೈಸಲು ಕೆಲಸಗಾರರು ಈಗಾಗಲೇ ಬಂದಿದ್ದಾರೆ. ಸ್ಥಗಿತಗೊಂಡಿದ್ದ ಕೆಲಸ ಭಾನುವಾರದಿಂದ ಪುನರಾರಂಭಗೊಂಡಿದ್ದು, ಮಂಗಳವಾರದ ವೇಳೆಗೆ ಘಟಕ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಈ ಘಟಕವು ಗಾಳಿಯಲ್ಲಿರುವ ಆಮ್ಲಜನಕವನ್ನು ಬೇರ್ಪಡಿಸಿ, ಪೈಪ್‌ಲೈನ್ ಮೂಲಕ ರೋಗಿಗಳ ಹಾಸಿಗೆಗಳಿಗೆ ಕಳುಹಿಸಲಿದೆ. ಈ ಘಟಕವು ನಿಮಿಷಕ್ಕೆ 100ರಿಂದ 120 ಲೀಟರ್ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಇದನ್ನು ಸಿಲಿಂಡರ್‌ಗಳಲ್ಲಿ ತುಂಬಲು ಸಾಧ್ಯವಿಲ್ಲ. ಬದಲಾಗಿ ಇದೇ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಮಾತ್ರ ನೀಡಬಹುದಾಗಿದೆ.

‘ಪಿ.ಎಂ.ಕೇರ್’ ನಿಧಿಯ ಮೂಲಕ ಈ ಘಟಕದ ಸಲಕರಣೆಗಳು ಮಂಜೂರಾಗಿವೆ. ಕೆ.ಎಚ್.ಆರ್.ಡಿ.ಪಿ. ಮೂಲಕ ಕಾಮಗಾರಿ ಅನುಷ್ಠಾನಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರ ವಿಶೇಷ ಪ್ರಯತ್ನದ ಮೂಲಕ ಯಲ್ಲಾಪುರದಲ್ಲಿ ಪ್ರಥಮವಾಗಿ ಕಾರ್ಯಾರಂಭ ಮಾಡಲಿದೆ. ಇದೇ ಮಾದರಿಯಲ್ಲಿ ಕಾರವಾರದ ಜಿಲ್ಲಾ ಆಸ್ಪತ್ರೆ, ಶಿರಸಿ ಪಂಡಿತ್ ಜನರಲ್ ಆಸ್ಪತ್ರೆ ಹಾಗೂ ಭಟ್ಕಳ ತಾಲ್ಲೂಕು ಆಸ್ಪತ್ರೆಗಳಲ್ಲೂ ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ.

ಸಾಮಾನ್ಯವಾಗಿ ಗಾಳಿಯಲ್ಲಿರುವ ಆಮ್ಲಜನಕದ ಪ್ರಮಾಣ ಶೇ 20ರಿಂದ 25ರಷ್ಟು ಇದ್ದರೆ, ಈ ಘಟಕದಲ್ಲಿ ತಯಾರಾಗುವ ಅನಿಲದಲ್ಲಿ ಆಮ್ಲಜನಕದ ಪ್ರಮಾಣ ಶೇ 85ರಿಂದ ರಿಂದ 90ರಷ್ಟಿರುತ್ತದೆ ಎಂದು ಘಟಕದ ತಂತ್ರಜ್ಞರು ತಿಳಿಸಿದ್ದಾರೆ.

‘ಎಲ್ಲ ಹಾಸಿಗೆಗೂ ಪೂರೈಕೆ’

‘ಯಲ್ಲಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಮಾಡಬಹುದಾದ ಹಾಸಿಗೆಗಳ ಸಂಖ್ಯೆ 50 ಇವೆ. ಈ ಘಟಕ ಆರಂಭವಾದರೆ ಎಲ್ಲ ಹಾಸಿಗೆಗಳಿಗೆ ನಿರಂತರ ಆಮ್ಲಜನಕ ಪೂರೈಸಬಹುದಾಗಿದೆ. ಇದರ ಹೊರತಾಗಿ 20 ಜಂಬೊ ಸಿಲಿಂಡರ್‌ಗಳು ಹಾಗೂ ಒಂದು ದೊಡ್ಡ ದ್ರವೀಕೃತ ಆಮ್ಲಜನಕ ಟ್ಯಾಂಕ್ ಇದೆ. ಹಾಗಾಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಾಗಲು ಸಾಧ್ಯವಿಲ್ಲ’ ಎನ್ನುತ್ತಾರೆ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ. ರಾಮ ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT