ಸೋಮವಾರ, ಡಿಸೆಂಬರ್ 9, 2019
20 °C
ಯುವ ಮತದಾರರನ್ನು ತಲುಪಲು ಕಾಂಗ್ರೆಸ್–ಬಿಜೆಪಿ ಸುಲಭ ತಂತ್ರ

ಉಪಚುನಾವಣೆ: ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಬಿಜೆಪಿ–ಕಾಂಗ್ರೆಸ್‌ ಪೈಪೋಟಿ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

ಶಿರಸಿ: ಸಾಮಾಜಿಕ ಜಾಲತಾಣದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ರಂಗೇರಿದೆ. ವಾಟ್ಸ್‌ಆ್ಯಪ್, ಫೇಸ್‌ಬುಕ್ ಬಳಕೆಯಲ್ಲಿ ಕಾಂಗ್ರೆಸ್, ಬಿಜೆಪಿಗೆ ಪೈಪೋಟಿ ನೀಡುತ್ತಿದೆ.

ಪ್ರತಿ ಬಾರಿ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಬಿಜೆಪಿ ಮುಂಚೂಣಿಯಲ್ಲಿರುತ್ತಿದ್ದರೆ, ಈ ಬಾರಿ ಬಿಜೆಪಿಯಷ್ಟೇ ಕಾಂಗ್ರೆಸ್‌ ಕೂಡ ಕ್ರಿಯಾಶೀಲವಾಗಿದೆ.

ಬಿಜೆಪಿ ಕಳೆದ ಚುನಾವಣೆಗಳಂತೆ ಈ ಬಾರಿ ಕೂಡ ಶಕ್ತಿ ಕೇಂದ್ರ ವ್ಯಾಪ್ತಿಯ ಎಲ್ಲ ಪಂಚಾಯ್ತಿಗಳಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದೆ. ಆಯಾ ಪಂಚಾಯ್ತಿಗೆ ಸೇರಿರುವ ಮತದಾರರನ್ನು ಗ್ರೂಪ್‌ಗಳ ಸದಸ್ಯರನ್ನಾಗಿ ಮಾಡಿಕೊಂಡು, ಕೇಂದ್ರ, ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನು ತಿಳಿಸುತ್ತಿದೆ. ಪ್ರತಿ ಪಂಚಾಯ್ತಿಯ ಗ್ರೂಪ್‌ನಲ್ಲಿ ಸಕಾಲಕ್ಕೆ ಮಾಹಿತಿ ನೀಡುವ ಜವಾಬ್ದಾರಿಯನ್ನು ಎಡ್ಮಿನ್‌ಗಳು ನಿರ್ವಹಿಸುತ್ತಿದ್ದಾರೆ.

‘ಈ ಬಾರಿ ಹೊಸದಾಗಿ ಅಭ್ಯರ್ಥಿಯ ಲೈವ್ ಕಾರ್ಯಕ್ರಮ, ಉಪಚುನಾವಣೆ ನಡೆಯುವ ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹವನ್ನು ಬಿಜೆಪಿ, ಫೇಸ್‌ಬುಕ್‌ನಲ್ಲಿ ಪರಿಚಯಿಸಿದೆ. ಯುವಜನರನ್ನು, ಹೊರ ಊರುಗಳಲ್ಲಿ ಉದ್ಯೋಗದಲ್ಲಿರುವ ಕ್ಷೇತ್ರದ ಮತದಾರರನ್ನು ತಲುಪಲು ಈ ಮಾರ್ಗ ಅನುಕೂಲವಾಗಿದೆ’ ಎನ್ನುತ್ತಾರೆ ಇದರ ನಿರ್ವಹಣೆ ಮಾಡುತ್ತಿರುವ, ಯುವ ಮೋರ್ಚಾ ಯಲ್ಲಾಪುರ ಘಟಕದ ಅಧ್ಯಕ್ಷ ಪ್ರಸಾದ ಹೆಗಡೆ.

ಸಾಮಾಜಿಕ ಜಾಲತಾಣ ನಿರ್ವಹಣೆಯಲ್ಲೇ ಹಿರಿಯರೇ ಹೆಚ್ಚಿರುತ್ತಿದ್ದ ಕಾಂಗ್ರೆಸ್‌ನಲ್ಲಿ ಈಗ ಯುವಜನರು ಹೆಚ್ಚು ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಪಾಠ ಕಲಿತಿರುವ ಕಾಂಗ್ರೆಸ್, ಈ ಬಾರಿ ವ್ಯವಸ್ಥಿತವಾಗಿ ಇದರ ನಿರ್ವಹಣೆ ಮಾಡುತ್ತಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ, ಸಮ್ಮಿಶ್ರ ಸರ್ಕಾರ ಕೈಗೊಂಡಿರುವ ಯೋಜನೆಗಳ ಪೋಸ್ಟರ್‌ಗಳನ್ನು ಫೇಸ್‌ಬುಕ್‌ ಖಾತೆಯಲ್ಲಿ ಕಾಂಗ್ರೆಸ್ ನಿಯಮಿತವಾಗಿ ಪ್ರಕಟಿಸುತ್ತಿದೆ. ಅಲ್ಲದೇ, ಅಭ್ಯರ್ಥಿ ಭಾಗವಹಿಸುವ ಕಾರ್ಯಕ್ರಮಗಳು ಈ ಪುಟದಲ್ಲಿ ಕಾಣುತ್ತಿವೆ.

‘ಕಾಂಗ್ರೆಸ್‌ನಲ್ಲಿರುವ ಶೇ 90ರಷ್ಟು ಯುವಕರು ಈ ಬಾರಿ ಪಕ್ಷದ ಸಾಮಾಜಿಕ ಜಾಲತಾಣ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ. ನಮ್ಮ ಪೋಸ್ಟ್‌ಗಳಿಗೆ ತಿರುಗೇಟು ನೀಡುತ್ತಿದ್ದ ಬಿಜೆಪಿಗರು ಶಾಂತರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವಾಗ ತುಂಬ ಎಚ್ಚರಿಕೆ ವಹಿಸುತ್ತೇವೆ. ಯಾವುದೇ ಆರೋಪ ಹೊರಿಸಿದರೆ, ದಾಖಲೆ ಸಮೇತ ಅದನ್ನು ನಿರಾಕರಿಸುತ್ತೇವೆ. ನಮ್ಮ ಪೋಸ್ಟ್‌ಗಳು ಹೆಚ್ಚು ಹಂಚಿಕೆಯಾಗುತ್ತಿವೆ’ ಎನ್ನುತ್ತಾರೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಯೋಜಕ ಪ್ರವೀಣ ಶೆಟ್ಟಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು