ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಲಾಕ್‌ಡೌನ್ ಜಾರಿ: ಛಾಯಾಗ್ರಾಹಕರ ಬದುಕಿಗೆ ಬರೆ

ಸಾಲ ಮಾಡಿ ಖರೀದಿಸಿದ ಕ್ಯಾಮೆರಾದ ಬಡ್ಡಿ ಹಣವೂ ಕೈಗೆ ಸಿಕ್ಕಿದ ಪರಿಸ್ಥಿತಿ
Last Updated 16 ಏಪ್ರಿಲ್ 2020, 2:16 IST
ಅಕ್ಷರ ಗಾತ್ರ

ಶಿರಸಿ: ಕೊರೊನಾ ವೈರಸ್‌ ಸೋಂಕಿನ ಭೀತಿ, ಛಾಯಾಗ್ರಾಹಕರ ಬದುಕಿಗೆ ಬರೆ ಎಳೆದಿದೆ. ಮಾರ್ಚ್‌ನಿಂದ ಮೇವರೆಗೆ ಬಿಡುವಿಲ್ಲದ ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದ ಅವರು ಈಗ ಬರಿಗೈಯಲ್ಲಿ ಕುಳಿತಿದ್ದಾರೆ. ನವದಂಪತಿಯ ಪ್ರಣಯದ ಕ್ಷಣಗಳನ್ನು ಸೆರೆ ಹಿಡಿಯುತ್ತಿದ್ದ ನೂರಾರು ಕ್ಯಾಮೆರಾಗಳು, ಬಿಂಬವನ್ನು ಬದಿಗಿಟ್ಟು ಶಾಲು ಹೊದ್ದು ಬ್ಯಾಗಿನಲ್ಲಿ ಬೆಚ್ಚಗೆ ಮಲಗಿವೆ !

ಸಾಮಾನ್ಯವಾಗಿ ಮಾರ್ಚ್‌ನಿಂದ ಮೇವರೆಗೆ ಎಲ್ಲ ಕಡೆಗಳಲ್ಲಿ ಮದುವೆ, ಗೃಹಪ್ರವೇಶ, ಉಪನಯನದಂತಹ ಕೌಟುಂಬಿಕ ಸಂಭ್ರಮದ ಕಾರ್ಯಗಳು ನಡೆಯುತ್ತವೆ. ಇತ್ತೀಚಿನ ವರ್ಷಗಳಲ್ಲಿ ಯುವಜನರಲ್ಲಿ ಫೋಟೊಶೂಟ್ ಆಸಕ್ತಿ ಹೆಚ್ಚಾಗಿರುವ ಕಾರಣ, ಕಲಾತ್ಮಕ ಛಾಯಾಗ್ರಾಹಣಕ್ಕೆ ಬೇಡಿಕೆಯೂ ಹೆಚ್ಚಿದೆ. ಆದರೆ, ಕೋವಿಡ್ 19 ಕಾಯಿಲೆ ನಿಯಂತ್ರಿಸುವ ನಿಟ್ಟಿನಲ್ಲಿ, ದೇಶದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಲಾಕ್‌ಡೌನ್ ಇರುವುದರಿಂದ ಮದುವೆ, ಗೃಹಪ್ರವೇಶದಂತಹ ಶುಭ ಸಮಾರಂಭಗಳು ರದ್ದಾಗಿವೆ. ಕೆಲವರು ಮುಹೂರ್ತ ತಪ್ಪಿಸಬಾರದೆಂಬ ಕಾರಣಕ್ಕೆ ಸರಳವಾಗಿ ಮದುವೆ ಕಾರ್ಯ ನಡೆಸಿದ್ದಾರೆ.

‘ಛಾಯಾಗ್ರಾಹಕರಿಗೆ ಇಡೀ ವರ್ಷದ ಆದಾಯ ತಂದುಕೊಡುವುದೇ ಈ ಮೂರು ತಿಂಗಳು. ಅದಕ್ಕಾಗಿ ಬಹುತೇಕರು ಮಾರ್ಚ್ ವೇಳೆಗೆ ಹೊಸ ಕ್ಯಾಮೆರಾ ಖರೀದಿಸುತ್ತಾರೆ. ಈ ವೃತ್ತಿಗೆ ಹೆಚ್ಚು ಬಂಡವಾಳ ಬೇಕು. ಮದುವೆ ಛಾಯಾಗ್ರಹಣಕ್ಕೆ ಹೋಗುವುದಾದರೆ, ಕನಿಷ್ಠ ₹ 1.25 ಲಕ್ಷದಿಂದ ₹ 3.50 ಲಕ್ಷದವರೆಗಿನ ಕ್ಯಾಮೆರಾ ಖರೀದಿಸಬೇಕು. ಕಾರ್ಯಕ್ರಮಗಳ ಮುಂಗಡ ಬುಕಿಂಗ್ ಆಧರಿಸಿ, ಛಾಯಾಗ್ರಾಹಕರು ಕ್ಯಾಮೆರಾ ಖರೀದಿಸುತ್ತಾರೆ. ಈಗ ಖರೀದಿಸಿರುವ ಕ್ಯಾಮೆರಾಗಳು ಬಳಕೆಯಾಗುವ ಮುನ್ನವೇ, ಲಾಕ್‌ಡೌನ್ ಘೋಷಣೆಯಾಗಿದೆ’ ಎನ್ನುತ್ತಾರೆ ಕರ್ನಾಟಕ ಫೋಟೊಗ್ರಾಫರ್ಸ್‌ ಅಸೋಸಿಯೇಷನ್‌ ಪಶ್ಚಿಮ ವಲಯದ ಅಧ್ಯಕ್ಷ ಲಕ್ಷ್ಮೀನಾರಾಯಣ ಭಟ್ಟ.

‘ಗುಣಮಟ್ಟದ ಚಿತ್ರ ಸೆರೆ ಹಿಡಿಯಲು ಕ್ಯಾಮೆರಾ ಬದಲಿಸಬೇಕಾಗುತ್ತದೆ. ಎರಡು ವರ್ಷಕ್ಕೊಮ್ಮೆ ಕ್ಯಾಮೆರಾ ಬದಲಿಸುವ ಸಂದರ್ಭ ಬರುತ್ತದೆ. ಈ ವರ್ಷ ಬಹಳಷ್ಟು ಛಾಯಾಗ್ರಾಹಕರು ಹೊಸ ಕ್ಯಾಮೆರಾ ಖರೀದಿಸಿದ್ದರು. ಈಗ ಅವರಿಗೆ ಸಾಲದ ಕಂತು ಪಾವತಿಸಲು ಸಹ ಕಷ್ಟವಾಗಿದೆ. ಎಲ್ಲ ಆರ್ಡರ್‌ಗಳು ರದ್ದಾಗಿವೆ. ಲಾಕ್‌ಡೌನ್ ಮುಗಿದರೂ, ಇನ್ನು ಮದುವೆಯಂತಹ ಸಮಾರಂಭಗಳು ಸದ್ಯ ನಡೆಯುವುದು ಅನುಮಾನ. ಛಾಯಾಗ್ರಾಹಕರ ಆರ್ಥಿಕ ಸ್ಥಿತಿ ಗಂಭೀರವಾಗಿದೆ’ ಎಂದು ಅವರು ಹೇಳಿದರು.

‘ಕೊರೊನಾ ಪೂರ್ವದಲ್ಲಿ ನಡೆದ ಕಾರ್ಯಕ್ರಮಗಳ ಚಿತ್ರಗಳು ಛಾಯಾಗ್ರಾಹಕರ ಬಳಿಯೇ ಉಳಿದುಕೊಂಡಿವೆ. ಇದನ್ನು ಮುದ್ರಣಕ್ಕೆಕಳುಹಿಸಲೂ ಆಗುತ್ತಿಲ್ಲ. ವಿಳಂಬವಾದರೆ, ಹಣ ಬರುವ ವಿಶ್ವಾಸವೂ ಇರುವುದಿಲ್ಲ. ಸಾಮೂಹಿಕ ಸಂಕಟದಲ್ಲಿ ಛಾಯಾಗ್ರಾಹಕರಿಗೆ ಒಂದು ಬರೆ ಹೆಚ್ಚು ಎಂಬಂತಾಗಿದೆ. ಛಾಯಾಗ್ರಾಹಕ ಇನ್ನಷ್ಟು ಸಾಲದಲ್ಲಿ ಬೀಳುವ ಆತಂಕ ಎದುರಾಗಿದೆ’ ಎಂದು ಅವರು ಕಷ್ಟ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT