ಭಾನುವಾರ, ನವೆಂಬರ್ 29, 2020
19 °C
‘ರಾಷ್ಟ್ರೀಯ ಸುರಕ್ಷತೆ’ಯ ಯೋಜನೆಗೆ ಅಂಕೋಲಾ ತಾಲ್ಲೂಕಿನ 3,453 ಎಕರೆ ಸಮೀಕ್ಷೆಗೆ ಆದೇಶ

PV Web Exclusive: ಮತ್ತೆ ಮತ್ತೆ ಕಾಡುವ ಭೂ ಸ್ವಾಧೀನವೆಂಬ ‘ಗುಮ್ಮ’

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕಡಲು, ಬೃಹತ್ ಯೋಜನೆಗಳು, ಭೂ ಸ್ವಾಧೀನ... ಈ ಮೂರು ಶಬ್ದಗಳು ಕಾರವಾರ ಮತ್ತು ಅಂಕೋಲಾ ತಾಲ್ಲೂಕಿನ ಕಡಲಕಿನಾರೆಯ ಜನರನ್ನು ಪದೇಪದೇ ಕಾಡುತ್ತಿರುತ್ತವೆ. ‘ರಾಷ್ಟ್ರೀಯ ಸುರಕ್ಷತೆ ಮತ್ತು ದೇಶದ ಯೋಜನೆ’ಯೊಂದಕ್ಕೆ ಭೂಸ್ವಾಧೀನ ಸಂಬಂಧ ಸಮೀಕ್ಷೆಗೆ ಆದೇಶವಾಗಿರುವುದು ಈ ಪಟ್ಟಿಯಲ್ಲಿ ಹೊಸ ಸೇರ್ಪಡೆಯಾಗಿದೆ.

ಕಾರವಾರ ನೌಕಾನೆಲೆ ಕಾರ್ಯಾಲಯದ ವಿಶೇಷ ಭೂ ಸ್ವಾಧೀನಾಧಿಕಾರಿಯು, ಅಂಕೋಲಾ ತಹಶೀಲ್ದಾರ್, ಭೂ ದಾಖಲೆಗಳ ಕಚೇರಿಯ ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮತ್ತು ಅಂಕೋಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಈ ಬಗ್ಗೆ ಅ.14ರಂದು ಆದೇಶಿಸಿದ್ದಾರೆ.

ಅಂಕೋಲಾ ತಾಲ್ಲೂಕಿನ ಆರು ಗ್ರಾಮಗಳಾದ ಬಿಳಿಹೊಂಯ್ಗಿ, ಬಾಸಗೋಡು, ಮಂಜಗುಣಿ, ಸಿಂಗನಮಕ್ಕಿ, ವಾಡಿಬೊಗ್ರಿ ಮತ್ತು ಹೊನ್ನೆಬೈಲ್‌ ಗ್ರಾಮಗಳ ವ್ಯಾಪ್ತಿಯಲ್ಲಿ 3,453 ಎಕರೆ ಭೂ ಸ್ವಾಧೀನ ಕುರಿತು ಸಮೀಕ್ಷೆ ನಡೆಯಲಿದೆ. ಇದಕ್ಕೆ ಸಂಬಂಧಿಸಿದ ಆದೇಶ ಪತ್ರವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

‘ಸೀಬರ್ಡ್ ನೌಕಾನೆಲೆ ಬಂದಾಗ ಕಾರವಾರ ಮತ್ತು ಅಂಕೋಲಾ ತಾಲ್ಲೂಕಿನ ಸಾವಿರಾರು ಮಂದಿ ಜಮೀನು ಕಳೆದುಕೊಂಡರು. ದೇಶದ ಭದ್ರತೆಯ ಬೃಹತ್ ಯೋಜನೆಯೊಂದು ನಮ್ಮ ನೆಲದಲ್ಲಿ ಆರಂಭವಾದ ಹೆಮ್ಮೆ ನಮಗಿದೆ. ಈ ನಡುವೆ ಕೊಂಕಣ ರೈಲು ಮಾರ್ಗಕ್ಕೆಂದು ಭೂಸ್ವಾಧೀನವಾಯ್ತು. ಅದಾದ ಬಳಿಕ ಹೆದ್ದಾರಿ ವಿಸ್ತರಣೆ ಮಾಡಿ ಚತುಷ್ಪಥ ಮಾಡಲೆಂದು ಜಮೀನು ಕಳೆದುಕೊಂಡೆವು’ ಎನ್ನುತ್ತ ಮಾತಿಗಿಳಿದವರು ಬಡಗೇರಿಯ ಮಹೇಶ ಗೌಡ.

‘ನೌಕಾನೆಲೆಯಲ್ಲಿ ನಿರ್ಮಾಣವಾಗುವ ವಿಮಾನ ನಿಲ್ದಾಣವನ್ನು ನಾಗರಿಕ ವಿಮಾನಯಾನಕ್ಕೂ ಬಳಸಿಕೊಳ್ಳುವ ಮಾತುಗಳು ಕೇಳಿಬಂದವು. ಅದಕ್ಕೆ ಸುಮಾರು 97 ಎಕರೆ ಜಮೀನು ಬೇಕಿದ್ದು, ಸರ್ವೆ ಕಾರ್ಯ ಈಗಾಗಲೇ ಮುಕ್ತಾಯವಾಗಿದೆ. ಅಂಕೋಲಾ ತಾಲ್ಲೂಕಿನ ಅಲಗೇರಿ, ಬೇಲೆಕೇರಿ ಭಾಗದಲ್ಲಿ ಹಲವರು ಜಮೀನು ಕಳೆದುಕೊಳ್ಳುತ್ತಾರೆ. ಈಗ ಬೇರೆಯದೇ ಯೋಜನೆಗೆ ಸಮೀಕ್ಷೆ ನಡೆಸಲು ಆದೇಶವಾಗಿದೆ. ಇದು ನಮ್ಮ ಚಿಂತೆಗೆ ಕಾರಣವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಅಂಕೋಲಾ ತಾಲ್ಲೂಕಿನ ಅಲಗೇರಿ ನಾಗರಿಕ ವಿಮಾನ ನಿಲ್ದಾಣವನ್ನು ವಿರೋಧಿಸಿ ಹೋರಾಟದ ಮುಂಚೂಣಿಯಲ್ಲಿದ್ದವರಲ್ಲಿ ಇವರೂ ಒಬ್ಬರು. ಆದರೆ, ಹೋರಾಟ ಸಮಿತಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹಿಂದೆ ಸರಿದರು.

‘ಕರಾವಳಿಯಲ್ಲಿ ನಾವು ಮೂರು ಬಾರಿ ನಿರಾಶ್ರಿತರಾಗಿದ್ದೇವೆ. ಇಲ್ಲಿ ಇರುವ ಎಲ್ಲರೂ ರೈತಾಪಿ ವರ್ಗದವರೇ. ಈಗ ನಾವು ವಾಸ್ತವ್ಯ ಇರುವ ಪಿತ್ರಾರ್ಜಿತ ಜಮೀನಿನಲ್ಲಿ ಕೃಷಿ ಸಲುವಾಗಿ ವರ್ಷಪೂರ್ತಿ ಕೆಲಸವಿದೆ. ನಾವು ಬೇರೆ ಕಡೆ ಕೆಲಸಕ್ಕೆ ಹೋಗುವ ಪರಿಸ್ಥಿತಿಯಿಲ್ಲ. ಈ ಜಮೀನಿಗೆ ಪರಿಹಾರವಾಗಿ ಅದೆಷ್ಟು ಹಣವನ್ನು ಕೊಟ್ಟರೂ ಉಳಿತಾಯವಾಗುವುದಿಲ್ಲ. ನೌಕಾನೆಲೆಯ ಕಾರಣದಿಂದ ನಿರಾಶ್ರಿತರಾದ ನೂರಾರು ಮಂದಿಗೆ ಲಕ್ಷಾಂತರ ರೂಪಾಯಿ ಪರಿಹಾರ ಸಿಕ್ಕಿತು. ಆದರೆ, ಆ ಹಣದಿಂದಾಗಿ ಸಂಬಂಧಗಳೇ ಹಾಳಾದವು. ಒಂದು ಗುಂಟೆಯಷ್ಟಾದರೂ ಜಮೀನನ್ನು ಬೇರೆ ಕಡೆ ಖರೀದಿಸಿ ನೆಲೆ ನಿಂತವರಿಲ್ಲ. ಸಂಬಂಧಗಳು, ಜನಜೀವನ ಹಾಳಾಗುವ ಕಾರಣ ಈ ಯೋಜನೆಗಳು ಇಲ್ಲಿಗೆ ಬೇಡವಾಗಿತ್ತು’ ಎಂದು ಸಮಸ್ಯೆಯ ಮತ್ತೊಂದು ಮಗ್ಗುಲನ್ನು ವಿವರಿಸಿದರು.

ಸಮೀಕ್ಷೆಗೆ ಆದೇಶವಾಗಿರುವ ಬೆಳಂಬಾರದ ಹನುಮಂತ ಗೌಡ ಕೂಡ ಇದೇ ಮಾತುಗಳನ್ನಾಡುತ್ತಾರೆ. ಹೊನ್ನೆಬೈಲ ದೇವಸ್ಥಾನ ಸಮಿತಿ ಅಧ್ಯಕ್ಷರೂ ಆಗಿರುವ ಅವರು, ಯಾವುದೇ ಕಾರಣಕ್ಕೂ ಜಮೀನು ಬಿಟ್ಟುಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ.

‘ಸೀಬರ್ಡ್ ನೌಕಾನೆಲೆ ಯೋಜನೆಗೆ ಮುದಗಾ ಮತ್ತು ಕೊಡಾರದಲ್ಲಿ ವಶಪಡಿಸಿಕೊಂಡಿರುವ ಜಮೀನಿನಲ್ಲಿ ಏನೂ ಕೆಲಸಗಳಾಗಿಲ್ಲ. ಕಟ್ಟಿರುವ ಹಲವು ಕಟ್ಟಡಗಳು ಬಳಕೆಯಾಗುತ್ತಿಲ್ಲ. ಮುಂದೆ ಬಳಕೆಯಾಗಬಹುದೋ ಏನೋ ಗೊತ್ತಿಲ್ಲ. ಈ ಭಾಗದಲ್ಲಿ 20 ವರ್ಷಗಳಿಂದ ಏನೂ ಕೆಲಸವಾಗಿಲ್ಲ. ಬೃಹತ್ ಯೋಜನೆಗಳೆಂದು ಸಾವಿರಾರು ಎಕರೆ ಜಮೀನು ವಶಪಡಿಸಿಕೊಳ್ಳುವ ಬದಲು, ಜಪಾನ್‌ನಂಥ ಸಣ್ಣ ದೇಶಗಳು ಹೊಂದಿರುವ ರೀತಿಯಲ್ಲಿ ಆಧುನಿಕ ವ್ಯವಸ್ಥೆ ಸ್ಥಾಪನೆ ಸಾಧ್ಯವಿಲ್ಲವೇ’ ಎಂಬ ಪ್ರಶ್ನೆ ಅವರದ್ದು. 

‘ಈಗಾಗಲೇ ಜಮೀನು ಕೊಟ್ಟವರು ಮೊದಲು ನಿರಾಶ್ರಿತರಾಗಿದ್ದರು. ಈಗ ನಿರ್ಗತಿಕರಾಗಿದ್ದಾರೆ. ನಾವು ನಮ್ಮ ಜಮೀನನ್ನು ಬಿಟ್ಟುಕೊಡಲು ಖಂಡಿತಾ ಸಿದ್ಧರಿಲ್ಲ. ಇದೊಂದು ಸ್ವಾತಂತ್ರ್ಯ ಹೋರಾಟವೆಂದೇ ಪರಿಗಣಿಸಿದ್ದೇವೆ’ ಎಂದು ಅವರು ದೃಢವಾಗಿ ಹೇಳುತ್ತಾರೆ.

ಅಧಿಕಾರಿಗಳು ಏನು ಹೇಳುತ್ತಾರೆ?:

ಸೀಬರ್ಡ್‌ ನೌಕಾನೆಲೆಯ ವಿಸ್ತರಣೆಯ ಅಂಗವಾಗಿ ಈ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಜನರು ಭಾವಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಪ್ರತಿಕ್ರಿಯಿಸಿದ್ದು, ನೌಕಾನೆಲೆಯ ವಿಸ್ತರಣೆಯ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.

‘ಸೀಬರ್ಡ್ ಯೋಜನೆಯ ವಿಸ್ತರಣೆಗೆ ಸಂಬಂಧಿಸಿ ಯಾವುದೇ ಯೋಜನೆಗಳಿಲ್ಲ ಎಂದು ನೌಕಾನೆಲೆಯ ಅಧಿಕಾರಿಗಳು ಹೇಳಿದ್ದಾರೆ. ಸೀಬರ್ಡ್‌ನ ಮೂರು ಮತ್ತು ನಾಲ್ಕನೇ ಹಂತಗಳ ಅಧಿಕಾರಿಗಳ ಮಟ್ಟದಲ್ಲಿ ಯಾವ ವಿಚಾರ ಚರ್ಚೆಯಲ್ಲಿದೆ ಎಂಬ ಬಗ್ಗೆ ಮಾಹಿತಿಯಿಲ್ಲ. ಸಮೀಕ್ಷೆಗಳು ಹಲವು ಆಗುತ್ತಿರುತ್ತವೆ. ಹಾಗೆಂದ ಮಾತ್ರಕ್ಕೇ ಇಂಥದ್ದೇ ಎಂದು ಹೇಳುವುದು ಕಷ್ಟ. ನಿರ್ದಿಷ್ಟವಾಗಿ ಯಾವುದೇ ಸಂವಹನ ಆಗಿಲ್ಲ’ ಎಂದು ಹೇಳಿದ್ದಾರೆ.

‘ನೌಕಾನೆಲೆಗೆ ಸಂಬಂಧವಿಲ್ಲ’:

‘ಸೀಬರ್ಡ್ ಯೋಜನೆಗೂ ಈ ಸಮೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಸೀಬರ್ಡ್ ಯೋಜನೆಯ ಅಧಿಕಾರಿಗಳೇ ತಿಳಿಸಿದ್ದಾರೆ’ ಎಂದು ನೌಕಾನೆಲೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕ್ಯಾಪ್ಟನ್ ಅಜಯ್ ಕಪೂರ್ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು