ಅನ್ವಯಿಸದ ರೈತರ ಸಾಲಮನ್ನಾ ಯೋಜನೆ: ಸಾಲವಸೂಲಿಯ ಚಿಂತೆಯಲ್ಲಿ ‘ಪಿಕಾರ್ಡ್’ ಬ್ಯಾಂಕ್

7
ಮರುಪಾವತಿಗೆ ಸಾಲಗಾರರ ನಿರಾಕರಣೆ

ಅನ್ವಯಿಸದ ರೈತರ ಸಾಲಮನ್ನಾ ಯೋಜನೆ: ಸಾಲವಸೂಲಿಯ ಚಿಂತೆಯಲ್ಲಿ ‘ಪಿಕಾರ್ಡ್’ ಬ್ಯಾಂಕ್

Published:
Updated:
Deccan Herald

ಕಾರವಾರ: ರಾಜ್ಯದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳಿಗೆ (ಪಿಕಾರ್ಡ್ ಬ್ಯಾಂಕ್) ಸರ್ಕಾರದ ಸಾಲಮನ್ನಾ ಯೋಜನೆ ಅನ್ವಯವಾಗುವುದಿಲ್ಲ. ಆದರೆ, ಇದರ ಮಾಹಿತಿಯಿಲ್ಲದ ರೈತರು ಸಾಲ ಮರುಪಾವತಿ ಮಾಡಲು ನಿರಾಕರಿಸುತ್ತಿದ್ದಾರೆ. ಇದರಿಂದ ಸಾಲ ವಸೂಲಿ ಮಾಡುವುದು ಹೇಗೆ ಎಂಬ ಚಿಂತೆ ಬ್ಯಾಂಕ್‌ಗಳ ಪ್ರಮುಖರದ್ದಾಗಿದೆ.

ಈ ಬಗ್ಗೆ ಜಿಲ್ಲೆ 11 ಪಿಕಾರ್ಡ್‌ ಬ್ಯಾಂಕ್‌ಗಳ ಮುಖ್ಯಸ್ಥರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು.

ಬ್ಯಾಂಕ್‌ನ ರಾಜ್ಯ ಉಪಾಧ್ಯಕ್ಷ ಈಶ್ವರ ನಾರಾಯಣ ನಾಯ್ಕ ಮಾತನಾಡಿ, ‘ಸಾಲಮನ್ನಾ ಯೋಜನೆಯು ವ್ಯವಸಾಯ ಸೇವಾ ಸಹಕಾರ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದ ಬೆಳೆ ಸಾಲಕ್ಕೆ ಮಾತ್ರ ಅನ್ವಯವಾಗುತ್ತದೆ. ಆದರೆ, ಪಿಕಾರ್ಡ್ ಬ್ಯಾಂಕ್‌ಗಳಿಂದ ಸಾಲ ಪಡೆದ ರೈತರು ಮರುಪಾವತಿ ಮಾಡದೇ ಸುಸ್ತಿದಾರರಾಗಿದ್ದಾರೆ. ಇದು ಬ್ಯಾಂಕ್‌ಗಳ ಮೇಲೆ ಆರ್ಥಿಕ ಹೊರೆ ಹೊರಿಸುತ್ತಿದೆ’ ಎಂದು ವಿವರಿಸಿದರು.

ನಬಾರ್ಡ್‌ನಿಂದ ಸಾಲ ಹಂಚಿಕೆಯಾಗಲು ಶೇ 70ರಷ್ಟು ಮರುಪಾವತಿ ಕಡ್ಡಾಯವಾಗಿದೆ. ಆದರೆ, ಸರ್ಕಾರದ ಆದೇಶದ ಪ್ರಕಾರ ಸಾಲ ವಸೂಲಿಗೆ ರೈತರಿಗೆ ನೋಟಿಸ್ ನೀಡುವಂತಿಲ್ಲ, ಅವರನ್ನು ಒತ್ತಾಯಿಸುವಂತಿಲ್ಲ. ಇದರಿಂದ ಪಿಕಾರ್ಡ್ ಬ್ಯಾಂಕ್‌ಗಳಿಗೆ ಸಾಲ ವಸೂಲಿ ಮಾಡಲಾಗುತ್ತಿಲ್ಲ. ಹೊಸದಾಗಿ ಸಾಲ ವಿತರಣೆಗೂ ಸಾಧ್ಯವಾಗದೇ ಚಿಂತೆಗೆ ಕಾರಣವಾಗಿದೆ ಎಂದು ಹೇಳಿದರು.

ಸರ್ಕಾರಿ ಈ ನಿಟ್ಟಿನಲ್ಲಿ ಸ್ಪಷ್ಟ ನಿರ್ದೇಶನ ನೀಡಬೇಕು. ಇದರಲ್ಲಿ ರೈತರ ಹಿತವೂ ಅಡಗಿದೆ. ರಾಜ್ಯದ 177 ಪಿಕಾರ್ಡ್‌ ಬ್ಯಾಂಕ್‌ಗಳೂ ಅಡಕತ್ತರಿಯ ಸನ್ನಿವೇಶದಲ್ಲಿವೆ. ಅವುಗಳ ಮತ್ತು ಸಿಬ್ಬಂದಿಯ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.

‘ಯಾವುದಾದರೂ ಒಂದಕ್ಕೆ ಅವಕಾಶ ನೀಡಿ’: ರೈತರು ಮತ್ತು ಬ್ಯಾಂಕ್‌ ಅಧಿಕಾರಿಗಳ ನಡುವಿನ ಎಲ್ಲ ಗೊಂದಲಗಳನ್ನೂ ನಿವಾರಣೆ ಮಾಡಲು ಜಿಲ್ಲೆಯ  ಪಿಕಾರ್ಡ್ ಬ್ಯಾಂಕ್‌ಗಳ ಅಧ್ಯಕ್ಷರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮೂರು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಯಾವುದಾದರೂ ಒಂದಕ್ಕ ಅವಕಾಶ ನೀಡಿ ಒಂದು ಒತ್ತಾಯಿಸಿದ್ದಾರೆ.

1. ಇತರ ಬ್ಯಾಂಕ್‌ಗಳಲ್ಲಿ ರೈತರ ಸಾಲಮನ್ನಾ ಮಾಡಿದ ರೀತಿಯಲ್ಲೇ ಪಿಕಾರ್ಡ್ ಬ್ಯಾಂಕ್‌ಗಳಲ್ಲೂ ಮಾಡಿ. ಇದರಿಂದ ಸರ್ಕಾರದ ಮೇಲೆ ಜಿಲ್ಲೆಯಿಂದ ಕೇವಲ ₹ 6 ಕೋಟಿ ಹೊರೆಯಾಗಲಿದೆ.

2. ಅದು ಸಾಧ್ಯವಿಲ್ಲದಿದ್ದರೆ ಸಾಲ ವಸೂಲಿಗೆ ನೋಟಿಸ್ ಜಾರಿ ಮಾಡಲು ಅವಕಾಶ ಕೊಡಿ.

3. ಈ ಎರಡೂ ಅಸಾಧ್ಯ ಎಂದಾದರೆ ಈ ಹಿಂದಿನ ಸಾಲಿನಲ್ಲಿ ಮಾಡಿದಂತೆ ‘ಸಾಲದ ಅಸಲು ಮೊತ್ತವನ್ನು ಕಟ್ಟಿದರೆ ಬಡ್ಡಿ ಮನ್ನಾ’ ಎಂದಾದರೂ ಪ್ರಕಟಿಸಿ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿವಿಧ ತಾಲ್ಲೂಕುಗಳ ಬ್ಯಾಂಕ್‌ಗಳ ಅಧ್ಯಕ್ಷರಾದ ಭುವನ್ ಭಾಗ್ವತ್, ಯೋಗೇಶ್ ರಾಯ್ಕರ್, ಶ್ರೀಪಾದ ರೈಯರ್, ಎಂ.ಆರ್.ಹೆಗಡೆ, ಎ.ಬಿ.ಪೋಕಳೆ ಇದ್ದರು.

ಜಿಲ್ಲೆಯ ಅಂಕಿ ಅಂಶಗಳು

* 15 11 ಪಿಕಾರ್ಡ್ ಬ್ಯಾಂಕ್‌ಗಳ ಶಾಖೆಗಳು

* ₹ 8.93 ಕೋಟಿ ರೈತರ ಕಟ್ಟುಬಾಕಿ ಮೊತ್ತ

* 91,889 ಜಿಲ್ಲೆಯಲ್ಲಿರುವ ಸದಸ್ಯರು

* 61,444 ಸಾಲ ಪಡೆದ ಸದಸ್ಯರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !