ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 75 ಲಕ್ಷ ಮೌಲ್ಯದ ಸ್ವತ್ತು ಹಸ್ತಾಂತರ

18 ಕೊಲೆ ಪ್ರಕರಣಗಳ ಆರೋಪಿಗಳ ಬಂಧನ, 204 ಸುಲಿಗೆ ದಾವೆಗಳಲ್ಲಿ 97 ಪತ್ತೆ
Last Updated 6 ಡಿಸೆಂಬರ್ 2021, 9:59 IST
ಅಕ್ಷರ ಗಾತ್ರ

ಕಾರವಾರ: ವಿವಿಧ ಕಳವು ಪ್ರಕರಣಗಳಲ್ಲಿ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದ ಸಾರ್ವಜನಿಕರು ಸೋಮವಾರ ತುಸು ನಿಟ್ಟುಸಿರು ಬಿಟ್ಟರು. ಆರೋಪಿಗಳಿಂದ ಜಪ್ತಿ ಮಾಡಿಕೊಂಡಿದ್ದ ಒಟ್ಟು ₹ 75 ಲಕ್ಷ ಮೌಲ್ಯದ ನಗ, ನಗದು, ವಾಹನಗಳನ್ನು ಪೊಲೀಸರು ಪುನಃ ಅವುಗಳ ಮಾಲೀಕರಿಗೆ ತಲುಪಿಸಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ಅವುಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಈ ವರ್ಷ 18 ಕೊಲೆ ಪ್ರಕರಣಗಳಲ್ಲಿ ಎಲ್ಲ ಆರೋಪಿಗಳನ್ನೂ ಬಂಧಿಸಲಾಗಿದೆ. ಆಸ್ತಿಗೆ ಸಂಬಂಧಿಸಿದ 204 ಪ್ರಕರಣಗಳಾಗಿದ್ದು, 97 ಪತ್ತೆಯಾಗಿವೆ. ಅಂದರೆ, ಶೇ 50ರ ಸಮೀಪದಲ್ಲಿ ವಸ್ತು ಜಪ್ತಿ ಪ್ರಮಾಣವಿದೆ. ಅವುಗಳಲ್ಲಿ ಕೆಲವು ಪ್ರಕರಣಗಳಲ್ಲಿ ವಸ್ತುಗಳ ಮಾಲೀಕರಿಗೆ ಸಾಂಕೇತಿಕವಾಗಿ ಹಸ್ತಾಂತರಿಸಲಾಗಿದೆ. ಉಳಿದಂತೆ, ಆಯಾ ಪೊಲೀಸ್ ಉಪ ವಿಭಾಗಗಳಲ್ಲಿ ಮಾಲೀಕರಿಗೆ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಇವುಗಳಲ್ಲಿ ಈ ವರ್ಷ ಮುಂಡಗೋಡದಲ್ಲಿ ನಡೆದ ₹ 22.50 ಲಕ್ಷ ದರೋಡೆಯೂ ಸೇರಿದ್ದು, ಆರೋಪಿಗಳ ಬಂಧನವಾಗಿದೆ. ಹಣವೂ ಜಪ್ತಿಯಾಗಿದೆ’ ಎಂದು ತಿಳಿಸಿದರು.

‘36 ಹಗಲು ಹಾಗೂ ರಾತ್ರಿ ಕಳವು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ಸುಮಾರು ₹ 34 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ’ ಎಂದರು.

‘ಈ ವರ್ಷ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣದಲ್ಲಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು 18 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಸುಮಾರು ₹ 12 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. 12 ವಾಹನ ಕಳವು, 21 ಸಾದಾ ಕಳವು ಪ್ರಕರಣಗಳನ್ನೂ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

ಸಿಬ್ಬಂದಿಗೆ ಪ್ರಶಂಸೆ, ಬಹುಮಾನ:

ಈ ವರ್ಷ ಜಿಲ್ಲೆಯಲ್ಲಿ ಮುದ್ದೆ ಮಾಲು, ಕಡತ ನಿರ್ವಹಣೆಯನ್ನು ಉತ್ತಮ ಪ್ರಗತಿ ತೋರಿದ ಸಿಬ್ಬಂದಿಗೆ ಪ್ರಶಂಸಾ ಪತ್ರ ಹಾಗೂ ನಗದು ಬಹುಮಾನಗಳನ್ನು ಡಾ.ಸುಮನ್ ಪೆನ್ನೇಕರ್ ವಿತರಿಸಿದರು. ಸಿದ್ದಾಪುರ ಪೊಲೀಸ್ ಠಾಣೆಯನಾರಾಯಣ ಜೋಗಿ ಮಡಿವಾಳ, ರಾಮಾ ಎಂ.ಕುದ್ರಗಿ, ಕರಬಸಪ್ಪ ಇಂಗಳಸೂರ, ರಮೇಶ ಕೂಡಲ, ಯಶ್ವಂತ ಬೀಳಗಿ, ಮೋಹನ ಗಾವಡಿ ಬಹುಮಾನ ಸ್ವೀಕರಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ ಇದ್ದರು. ಕಳವಾದ ತಮ್ಮ ಆಭರಣವನ್ನು ಪಡೆದುಕೊಂಡ ಹೊನ್ನಾವರದ ಬಾಲಚಂದ್ರ ಹೆಗಡೆ ಮಾತನಾಡಿ ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು. ಕಾರವಾರ ನಗರ ಠಾಣೆ ಇನ್‌ಸ್ಪೆಕ್ಟರ್ ಸಂತೋಷ ಕುಮಾರ್ ವಂದಿಸಿದರು.

ಹಳೆಯ ‘ಪೋಸ್ಟ್’ ವೈರಲ್:

ಮುರುಡೇಶ್ವರದ ಶಿವನ ವಿಗ್ರಹದ ಚಿತ್ರವನ್ನು ವಿರೂಪಗೊಳಿಸಿದ ಪ್ರಕರಣ ಕುರಿತು ಮಾಹಿತಿ ನೀಡಿದ ಡಾ.ಸುಮನ್ ಪೆನ್ನೇಕರ್, ‘ವಿರೂಪಗೊಳಿಸಿದ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹೊಸದಾಗಿ ಪ್ರಕಟವಾಗಿದ್ದಲ್ಲ. ಅದನ್ನು ಈ ವರ್ಷ ಜೂನ್‌ನಲ್ಲಿ ಫೇಸ್‌ಬುಕ್‌ನಲ್ಲಿ ಮೊದಲು ಶೇರ್ ಮಾಡಿದ್ದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದ್ದಾರೆ.

‘ನಂತರ ಸಂಬಂಧಿತ ಖಾತೆಯನ್ನು ಲಾಕ್ ಮಾಡಲಾಗಿತ್ತು. ಅದನ್ನು ಇತ್ತೀಚಿಗೆ ಮತ್ಯಾರೋ ಶೇರ್ ಮಾಡಿದ್ದರಿಂದ ಪುನಃ ವೈರಲ್ ಆಗಿದೆ. ಉಗ್ರ ಸಂಘಟನೆ ಐ.ಎಸ್.ಐ.ಎಸ್.ನ ‘ವಾಯ್ಸ್ ಆಫ್ ಹಿಂದ್’ನಲ್ಲಿ ಕೂಡ ಮುರುಡೇಶ್ವರಕ್ಕೆ ಸಂಬಂಧಿಸಿದ ಮಾಹಿತಿಯಿಲ್ಲ. ಅದರಲ್ಲಿ ಕೇವಲ ವಿರೂಪಗೊಳಿಸಿದ ಶಿವನ ಚಿತ್ರವನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ. ಸ್ಥಳೀಯರು ಭಯ ಪಡುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT