ಭಾನುವಾರ, ಸೆಪ್ಟೆಂಬರ್ 22, 2019
22 °C
ಮೀನು ವರ್ತಕರ ಚಿಂತೆ

ಮತ್ಸ್ಯಕ್ಷಾಮ: ಒಣಮೀನು ದರ ಏರಿಕೆ, ಕಾರವಾರದ ಮಾರುಕಟ್ಟೆಯಲ್ಲಿ ವ್ಯಾಪಾರ ಕುಂಠಿತ

Published:
Updated:
Prajavani

ಕಾರವಾರ: ಈ ಬಾರಿ ಮೀನುಗಾರಿಕೆಯ ಆರಂಭದಲ್ಲಿ ಭರವಸೆ ಮೂಡಿಸಿದ್ದ ಮೀನುಬೇಟೆ, ಏಪ್ರಿಲ್ ತಿಂಗಳಿನಲ್ಲಿ ಕ್ಷಾಮ ಕಂಡಿದೆ. ಇದರಿಂದ ಈಗಾಗಲೇ ಒಣಮೀನಿನ ಧಾರಣೆಯಲ್ಲಿ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ ₹ 50ರಿಂದ ₹ 100ವರೆಗೂ ಹೆಚ್ಚಳವಾಗಿದೆ.

ಜೂನ್‌ನಿಂದ ಆಗಸ್ಟ್‌ವರೆಗೆ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧವಿರುತ್ತದೆ. ಹಾಗಾಗಿ ಆಗ ಮೀನು ಖಾದ್ಯ ಪ್ರಿಯರು ಒಣಮೀನನ್ನು ಅಡುಗೆಗೆ ಬಳಸುತ್ತಾರೆ. ಮಳೆಗಾಲದಲ್ಲಿ ಬಳಸಲು ‌ಏಪ್ರಿಲ್, ಮೇ ತಿಂಗಳಲ್ಲಿ ಒಣಮೀನು ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ.

ಈ ಬಾರಿ ಸಮುದ್ರದಲ್ಲಿ ಮೀನುಗಾರರ ಬಲೆಗೆ ಕಡಿಮೆ ಮೀನುಗಳು ಸಿಗುತ್ತಿವೆ. ಹಾಗಾಗಿ ಮಾರುಕಟ್ಟೆಯಲ್ಲಿ ಒಣಮೀನಿನ ದರ ಏರಿಕೆಯಾಗಿದೆ. ದೋಡಿ ₹ 100, ದೊಡ್ಡ ಸೆಟ್ಲೆ ಎರಡು ಪಾವಿಗೆ ₹ 100, ಮರಿ ಸೆಟ್ಲೆ ನಾಲ್ಕು ಪಾವಿಗೆ ₹ 100, ಮೋರಿ ಜಾತಿಯ ಎರಡು ಮೀನಿಗೆ ₹ 1,000ದಿಂದ ₹ 1,400, ಪೇಡಿ ಬುಟ್ಟಿಗೆ ₹ 200, ಡೈನಾ ಬುಟ್ಟಿಗೆ ₹ 150, ಬೆಳ್ಳಂಜಿ ಬುಟ್ಟಿಗೆ ₹ 500, ಬಂಗುಡೆ ಐದಕ್ಕೆ ₹ 100, 100ಕ್ಕೆ ₹ 1,500ರಿಂದ  ₹ 1,800ರಂತೆ ಮಾರಾಟವಾಗುತ್ತಿವೆ.

ಕಳೆದ ಬಾರಿ ಬಂಗುಡೆ ಮೀನಿಗೆ ₹ 800ರಿಂದ ₹ 1,000ವಿತ್ತು. ಉಳಿದ ಜಾತಿಯ ಮೀನುಗಳ ಬೆಲೆ ಕೂಡಾ ಸರಾಸರಿ ₹ 50ರಿಂದ ₹ 100 ಏರಿಕೆ ಆಗಿದೆ ಎನ್ನುತ್ತಾರೆ ಮೀನು ಮಾರಾಟಗಾರರು.

ಒಣ ಮೀನು ಲಾಭವಲ್ಲ

‘ಸಾಮಾನ್ಯವಾಗಿ ಏಪ್ರಿಲ್ ತಿಂಗಳ ಅಂತ್ಯದಲ್ಲಿ ಒಣ ಮೀನಿಗೆ ಬೇಡಿಕೆ ಹೆಚ್ಚಿರುತ್ತದೆ. ಆದರೆ, ಈ ವರ್ಷ ಮಾರ್ಚ್ ತಿಂಗಳ ಅಂತ್ಯದಿಂದಲೇ ಇದರ ವಹಿವಾಟು ನಡೆಯುತ್ತಿದೆ. ಹಸಿ ಮೀನನ್ನು ಖರೀದಿಸಿ ಒಣಗಿಸಿದರೆ ಹೆಚ್ಚಿನ ತೂಕವಿರುವುದಿಲ್ಲ. ಸಾವಿರಾರು ರೂಪಾಯಿಗೆ ಖರೀದಿಸಿದ ಹಸಿ ಮೀನನ್ನು ಒಣಗಿಸಿ ಹೆಚ್ಚಿನ ದರಕ್ಕೆ ಮಾರಬೇಕು. ಆದರೆ, ದರ ಹೆಚ್ಚಾಯ್ತು ಎಂದು ಯಾರೂ ಖರೀದಿಸುವುದಿಲ್ಲ. ಇದರಿಂದ ನಷ್ಟವೇ ಹೆಚ್ಚು ಎನ್ನುವುದು ಅವರ ಅಭಿಪ್ರಾಯ.

ಒಣಮೀನು ತಯಾರಿ

ಸಮುದ್ರದಿಂದ ಹಿಡಿದು ತಂದ ಮೀನನ್ನು ಸಮುದ್ರದ ನೀರಿನಲ್ಲೇ ಸ್ವಚ್ಛವಾಗಿ ತೊಳೆಯಲಾಗುತ್ತದೆ. ಬಳಿಕ ಎರಡು ಮೂರು ದಿನ ಉಪ್ಪು ಹಾಕಿ ಇಡಲಾಗುತ್ತದೆ. ಬಳಿಕ ಮೀನನ್ನು ನಾಲ್ಕೈದು ದಿನ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಈ ಮೀನು ಆರು ತಿಂಗಳವರೆಗೂ ಹಾಳಾಗುವುದಿಲ್ಲ. ಬಹುತೇಕ ಎಲ್ಲ ಜಾತಿಯ ಮೀನುಗಳನ್ನೂ ಈ ಪ್ರಕ್ರಿಯೆಯಲ್ಲಿ ಬಳಸಬಹುದು.

ಒಣಗಿಸಲು ಸ್ಥಳವಿಲ್ಲ

‘ಮೀನು ಒಣಗಿಸಲು ಕೂಡಾ ಸೂಕ್ತವಾದ ಸ್ಥಳವಿಲ್ಲ. ಸೀಬರ್ಡ್ ನೌಕಾನೆಲೆ, ವಾಣಿಜ್ಯ ಬಂದರು ಮುಂತಾದ ಯೋಜನೆಗಳಿಂದ ಸ್ಥಳಾಭಾವ ಆಗಿದೆ. ಬೈತಖೋಲ್ ಮೀನುಗಾರಿಕಾ ಬಂದರಿನಲ್ಲಿ ಮಾತ್ರ ಸ್ವಲ್ಪ ಸ್ಥಳಾವಕಾಶವಿದೆ. ಬೇಲೆಕೇರಿಯಲ್ಲಿ ಅದಿರು ಸಾಗಣೆ ಆರಂಭಿಸಿದ ಬಳಿಕ ಅಲ್ಲಿಯೂ ಮೀನುಗಾರರಿಗೆ ಸ್ಥಳಾವಕಾಶ ಇಲ್ಲದಂತಾಯಿತು ಒಣಮೀನು ವ್ಯಾಪಾರಿ ಬೇಬಿ ಕುಡ್ತಳಕರ್ ಸಮಸ್ಯೆಯನ್ನು ವಿವರಿಸಿದರು.

Post Comments (+)