ಮಂಗಳವಾರ, ಆಗಸ್ಟ್ 16, 2022
20 °C
ವೃಕ್ಞಲಕ್ಷ ಆಂದೋಲನ ಸಮಿತಿಯಿಂದ ಅರಣ್ಯ ಸಚಿವರು, ಅಧಿಕಾರಿಗಳ ಭೇಟಿ

ಅರಣ್ಯ ನಿರ್ವಹಣೆ ಯೋಜನೆಗೆ ಕಾರ್ಯಸೂಚಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ರಾಜ್ಯದ ಅರಣ್ಯ ನಿರ್ವಹಣೆ ಅಭಿವೃದ್ಧಿ ಯೋಜನೆಗೆ ಪರಿಸರ ತಜ್ಞರು ರೂಪಿಸಿದ ವಿವಿಧ ಕಾರ್ಯಕ್ರಮಗಳ ಶಿಫಾರಸು ವರದಿಯನ್ನು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅರಣ್ಯ ಸಚಿವ ಉಮೇಶ ಕತ್ತಿ ಅವರಿಗೆ ಈಚೆಗೆ ಸಲ್ಲಿಸಿದರು.

‘ಮಲೆನಾಡು ಹಾಗೂ ಕರಾವಳಿ ಪ್ರದೇಶದ ಹಲವೆಡೆ ಸ್ಥಳ ಮಟ್ಟದಲ್ಲಿ ಅರಣ್ಯ ಪ್ರದೇಶ ಗಡಿ ಗುರುತಿಸಿ ಪ್ರತಿ ಸರ್ವೇ ನಂಬರಿನ ಅರಣ್ಯದ ಪಹಣಿ ಪತ್ರ ರಚಿಸಬೇಕು. ಬದಲಿ ಅರಣ್ಯ ಯೋಜನೆ ಜಾರಿಗೊಳಿಸಿ ಅರಣ್ಯೀಕರಣದ ವ್ಯಾಪ್ತಿಯಲ್ಲಿ ನಿಖರವಾದ ಸಸ್ಯ ಪ್ರಭೇಧಗಳನ್ನು ಬೆಳೆಸಬೇಕು. ಬಾಂಬೂ ಮಿಶನ್ ಯೋಜನೆ ಅಡಿ ಬಿದಿರು ಬೆಳೆಯಲು ಅವಕಾಶ ನೀಡಬೇಕು’ ಎಂಬ ಅಂಶಗಳನ್ನು ಶಿಫಾರಸು ವರದಿ ಒಳಗೊಂಡಿದೆ ಎಂದು ಅಶೀಸರ ತಿಳಿಸಿದರು.

‘ಮಲೆನಾಡಿನ ಭೂಕುಸಿತ ಸಾಧ್ಯತೆಗಳಿರುವ ಪ್ರದೇಶಗಳಲ್ಲಿ ಮರಕಡಿತ ನಿಯಂತ್ರಿಸಬೇಕು. ನರ್ಸರಿಗಳಲ್ಲಿ ಸ್ಥಳೀಯ ಅರಣ್ಯ ಪ್ರಭೇದಗಳ ಸಸ್ಯಗಳನ್ನು ಬೆಳೆಸಲು ಒತ್ತು ನೀಡಬೇಕು. ರಾಜ್ಯ ವನ್ಯಜೀವಿ ಮಂಡಳಿಯ ಶಿಫಾರಸ್ಸಿನಂತೆ ಹೊಸ ವನ್ಯಜೀವಿ ತಾಣ ಗುರುತಿಸಬೇಕು. ಜನ ಸಹಭಾಗಿತ್ವದ ಬೆಟ್ಟ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಬೇಕು ಎಂಬ ಅಂಶಗಳೂ ಇವೆ’ ಎಂದರು.

‘ವಾಮನ ಆಚಾರ್ಯ, ರಾಮಕೃಷ್ಣ, ಬಿ.ಎಂ.ಕುಮಾರಸ್ವಾಮಿ, ಟಿ.ವಿ.ರಾಮಚಂದ್ರ, ಪ್ರಕಾಶ ಮೇಸ್ತ, ಕೇಶವ ಕೊರ್ಸೆ, ಬಾಲಚಂದ್ರ ಸಾಯಿಮನೆ ಮುಂತಾದ ತಜ್ಞರ ತಂಡ ಈ ಶಿಫಾರಸು ನೀಡಿದೆ’ ಎಂದರು.

‘ಪರಿಸರ ಬಜೆಟ್ ಹೆಸರಲ್ಲಿ ಮೀಸಲಿಟ್ಟಿರುವ ₹100 ಕೋಟಿ ಮೊತ್ತದಲ್ಲಿ ಕರಾವಳಿ ಹಸಿರು ಕವಚ, ರಾಂಪತ್ರೆ ಜಡ್ಡಿ, ಕಾನು ಅಭಿವೃದ್ಧಿ, ಶೋಲಾ ಕಾಡು ರಕ್ಷಣೆ ಕಾರ್ಯಗಳನ್ನು ಕೈಗೊಳ್ಳಲಿದ್ದೇವೆ ಎಂದು ಅರಣ್ಯ ಸಚಿವ ಉಮೇಶ ಕತ್ತಿ ಭರವಸೆ ನೀಡಿದ್ದಾರೆ’ ಎಂದು ಅಶೀಸರ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.