ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ–ಮಳೆ: ಮತದಾನಕ್ಕೆ ಅಡ್ಡಿ

ಧರೆಗುರುಳಿದ ಮರಗಳು, ತೆರವುಗೊಳಿಸಿದ ಪೌರ ಕಾರ್ಮಿಕರು, ವಿದ್ಯುತ್ ಕಂಬಗಳಿಗೆ ಧಕ್ಕೆ
Last Updated 23 ಏಪ್ರಿಲ್ 2019, 12:51 IST
ಅಕ್ಷರ ಗಾತ್ರ

ಶಿರಸಿ: ಮಂಗಳವಾರ ಮಧ್ಯಾಹ್ನ ತಾಲ್ಲೂಕಿನಲ್ಲಿ ಒಂದು ತಾಸು ಸುರಿದ ಭಾರೀ ಗಾಳಿ–ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿತು. ಮಕ್ಕಳ ಆಟಿಕೆಗಳು, ಬಲೂನಿನಿಂದ ಶೃಂಗರಿಸಿದ್ದ ಮಾರಿಕಾಂಬಾ ಪ್ರೌಢಶಾಲೆಯ ಮಾದರಿ ಮತಗಟ್ಟೆಯ ಶಾಮಿಯಾನ ಸಂಪೂರ್ಣ ನೆಲಕ್ಕುರುಳಿತು.

ಕೆಎಚ್‌ಬಿ ಕಾಲೊನಿಯ ಮತಗಟ್ಟೆ ಕೇಂದ್ರ 95ರ ಬಳಿ ಎರಡು ಚಿಕ್ಕ ಮರಗಳು ಧರೆಗುರುಳಿದವು. ಇದರಿಂದಾಗಿ ಚುನಾವಣೆ ಕರ್ತವ್ಯಕ್ಕೆ ಮೀಸಲಿಟ್ಟಿದ್ದ ಪೊಲೀಸ್ ವಾಹನದ ಹಿಂಭಾಗ ಜಖಂಗೊಂಡಿದೆ. ಮತ ಹಾಕಲು ಬಂದಿದ್ದ ಮತದಾರರು, ನಗರಸಭೆ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದರು.

ಬಾರ್ಕೂರ್ ಚಾಳದ ಹಿಂಭಾಗದಲ್ಲಿ ತೆಂಗಿನ ಮರ ಮುರಿದು ಬಿದ್ದು, ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಜಯನಗರದಲ್ಲಿ ತೆಂಗಿನ ಮರ ಮುರಿದು ಬಿದ್ದು, ಮನೋರಮಾ ಯಾಜಿ ಅವರ ಮನೆಯ ಕಾಂಪೌಂಡ್ ಗೋಡೆಗೆ ಧಕ್ಕೆಯಾಗಿದೆ. ಮಾರಿಗುಡಿ ಹಿಂಭಾಗದ ನಾಸಿರ್ ಅವರ ಮನೆಯ ಚಾವಣಿ ಹಾರಿ ಹೋಗಿ, ಮನೆಯಲ್ಲಿದ್ದ ಸಾಮಗ್ರಿಗಳು ಮಳೆಯಲ್ಲಿ ನೆನೆದಿವೆ. ರಾಯಪ್ಪ ಹುಲೇಕಲ್ ಶಾಲೆಯ ತಗಡು ಹಾರಿ ಹೋಗಿ ಹಾನಿಯಾಗಿದೆ. ನಗರಸಭೆಯ ಪೌರ ಕಾರ್ಮಿಕರು ತಕ್ಷಣ ಸ್ಥಳಕ್ಕೆ ನೀಡಿ, ಮುರಿದು ಬಿದ್ದ ಮರಗಳನ್ನು ತೆರವುಗೊಳಿಸಿದರು.

ಅಶ್ವಿನಿ ಸರ್ಕಲ್, ಕಾಲೇಜು ರಸ್ತೆ, ಹುಬ್ಬಳ್ಳಿ ರಸ್ತೆ, ಕೋಟೆಕೆರೆ, ಮರಾಠಿಕೊಪ್ಪದಲ್ಲಿ ಚರಂಡಿ ಉಕ್ಕಿ ಹರಿದು, ರಸ್ತೆ ತುಂಬ ತ್ಯಾಜ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮಾಸ್ತಿಕಟ್ಟೆ ರಸ್ತೆ, ವಿದ್ಯಾನಗರ ಕ್ರಾಸ್ ಬಳಿ ಮರ ಮುರಿದು ಬಿದ್ದು, ಕೆಲ ಕಾಲ ಸಂಚಾರ ವ್ಯತ್ಯಯಗೊಂಡಿತು. ಇಂದಿರಾನಗರ ರಸ್ತೆಗೆ ಅಡ್ಡಲಾಗಿ ತೆಂಗಿನ ಮರವೊಂದು ಮುರಿದು ಬಿದ್ದು, ವಾಹನ ಸವಾರರು ಸಮಸ್ಯೆ ಅನುಭವಿಸಿದರು.

ತಾಲ್ಲೂಕಿನ ನಿಡಗೋಡಿನಲ್ಲಿ ಮರವೊಂದು ಮುರಿದು ಬಿದ್ದು, ದೇವಾಲಯ ಹಾಗೂ ಎರಡು ಮನೆಗಳಿಗೆ ಧಕ್ಕೆಯಾಗಿದೆ.

ಗಮನ ಸೆಳೆದ ನೀಲಿ ಮತಗಟ್ಟೆ:ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ವಿಶೇಷವಾಗಿ ಅಲಂಕರಿಸಿದ್ದ ನೀಲಿ ಮತಗಟ್ಟೆಗೆ ಜನರು ಉತ್ಸಾಹದಿಂದ ಬಂದು ಮತಚಲಾಯಿಸುತ್ತಿದ್ದರು. ಮಧ್ಯಾಹ್ನದ ವೇಳೆಗೆ ಶೇ 43ರಷ್ಟು ಮತದಾನ ದಾಖಲಾಗಿತ್ತು. ಎಲ್ಲರನ್ನೂ ಸೆಳೆದಿದ್ದ ಈ ಮತಗಟ್ಟೆಯ ಹೊರ ಆವರಣ, ಮಳೆಗೆ ಸಿಲುಕಿ ಸಂಪೂರ್ಣ ನೆಲಕ್ಕುರುಳಿತು. ಮತಗಟ್ಟೆಗೆ ಹೋಗುವ ದಾರಿಯಲ್ಲಿಯೇ ಶಾಮಿಯಾನ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ, ಮತದಾರರು ಪರ್ಯಾಯ ಮಾರ್ಗದಲ್ಲಿ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT