ಸೋಮವಾರ, ಜೂನ್ 21, 2021
30 °C
1971ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿದ್ದ ಯೋಧ

ನಿವೃತ್ತ ಸೈನಿಕ ದೇವಿದಾಸ ಕಾಗಾಲ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಹೋರಾಡಿ ಶೌರ್ಯ ಮೆರೆದಿದ್ದ ಇಲ್ಲಿಯ ಸಮೀಪದ ಬಂಕಿಕೊಡ್ಲದ ದೇವಿದಾಸ ಕಾಗಾಲ (77) ಸ್ವಗೃಹದಲ್ಲಿ ಈಚೆಗೆ ನಿಧನರಾದರು.

ಅವರಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ದೇವಿದಾಸ ಅವರು 1965ರಲ್ಲಿ ಭಾರತೀಯ ಸೇನೆಗೆ ಸೇರಿದರು. ಅದಕ್ಕೂ ಮೊದಲು ಅವರು ಶ್ಯಾಮರಾವ್ ವಿಠ್ಠಲ ಕೋ – ಆಪರೇಟಿವ್ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೇನಾ ತರಬೇತಿ ಪಡೆದು, ಗಡಿ ಭಾಗವಾದ ಲಡಾಖ್‌ನಲ್ಲಿ ಸೇವೆಯನ್ನು ಆರಂಭಿಸಿದರು. ಬಳಿಕ ಬ್ರಿಗೇಡಿಯರ್ ಸುಖವಂತ ಸಿಂಗ್ ಅವರ ಆಪ್ತ ಸಹಾಯಕರಾಗಿ ಬಡ್ತಿ ಹೊಂದಿದರು.

1967ರಲ್ಲಿ ಸೇನಾ ವಿಭಾಗದ ಲೆಕ್ಕಪತ್ರ ಇಲಾಖೆಯ ಮುಖ್ಯಸ್ಥರಾಗಿಯೂ ಜವಾಬ್ದಾರಿ ಮೆರೆದಿದ್ದರು. ನಂತರ 1970ರಲ್ಲಿ ಪುಣೆಗೆ ವರ್ಗಾವಣೆಗೊಂಡು ಎನ್.ಸಿ.ಒ. (ನಾನ್ ಕಮಿಷನ್ಡ್ ಆಫೀಸರ್) ಅಡಿಯಲ್ಲಿ ಬಾಂಬ್ ನಿಷ್ಕ್ರಿಯಗೊಳಿಸುವ ತರಬೇತಿ ಪಡೆದರು. ಬಳಿಕ ಎಂಜಿನಿಯರಿಂಗ್ ವಿಭಾಗದ ಮುಖ್ಯ ಗುಮಾಸ್ತರಾಗಿ ಕಾರ್ಯ ನಿರ್ವಹಿಸಿದರು.

1971 ಡಿ.3ರಂದು ಪಾಕಿಸ್ತಾನ ಯುದ್ಧ ಘೋಷಣೆ ಮಾಡಿದ ಸಂದರ್ಭದಲ್ಲಿ ಪುನಃ ಜಮ್ಮು ಕಾಶ್ಮೀರಕ್ಕೆ ತೆರಳಿ ಹೋರಾಡಿದರು. ಸಿಯಾಚಿನ್ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಹಿಮದಲ್ಲಿ ಆರು ಗಂಟೆ ಕಾಲ ಹುಗಿದು ಬಿದ್ದ ಕಾರಣ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡರು. 1974ರಲ್ಲಿ ಭಾರತೀಯ ಸೇನೆಯ ಸೇವೆಯಿಂದ ನಿವೃತ್ತಿ ಪಡೆದರು.

ಹತ್ತಾರು ಗೌರವಗಳು

‘ಸೈನ್ಯ ಸೇವಾ ಪದಕ‌’, ‘ವೆಸ್ಟರ್ನ್ ಸ್ಟಾರ್’ ಮತ್ತು ‘25ನೇ ಸ್ವಾತಂತ್ರ್ಯ ದಿನದ ಪದಕ’ ಹಾಗೂ ನಗದು ಬಹುಮಾನಗಳು ಅವರನ್ನು ಅರಸಿ ಬಂದಿವೆ. ನಿವೃತ್ತಿ ನಂತರ 1988ರಲ್ಲಿ ಒಂದು ತಿಂಗಳ ಸೇವೆಗಾಗಿ ಭಾರತೀಯ ಸೇನೆಯು ಅವರನ್ನು ಆಹ್ವಾನಿಸಿತ್ತು. ಉಗ್ರರ ಅಟ್ಟಹಾಸವನ್ನು ಅಡಗಿಸಲು ಯುವ ಸೇನೆಗೆ ತರಬೇತಿ ನೀಡಿದ ಅವರು, ಬಾಂಗ್ಲಾ ವಿಮೋಚನೆ ಮತ್ತು ಭಾರತ– ಪಾಕಿಸ್ತಾನದ ಯುದ್ಧಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದರು.

ಸೇನೆಯಿಂದ ನಿವೃತ್ತಿಯಾದ ಬಳಿಕ ಸ್ವಗ್ರಾಮದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ವಿತರಣೆಯ ಹೊಣೆಯನ್ನೂ ವಹಿಸಿಕೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು