ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಮುಂಗಾರು ಹಂಗಾಮಿನ ಚಟುವಟಿಕೆ ಚುರುಕು

ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತ, ಮೆಕ್ಕೆಜೋಳ, ಗೊಬ್ಬರ ಸಂಗ್ರಹ
Last Updated 9 ಮೇ 2020, 2:15 IST
ಅಕ್ಷರ ಗಾತ್ರ

ಶಿರಸಿ: ಕೊರೊನಾ ಆತಂಕ, ಲಾಕ್‌ಡೌನ್ ನಡುವೆಯೂ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಮುಂಗಾರು ಹಂಗಾಮಿನಲ್ಲಿ ಹೊಸ ಬೆಳೆ ನಾಟಿಗೆ ರೈತ ಭೂಮಿಯನ್ನು ಹದಗೊಳಿಸುತ್ತಿದ್ದಾನೆ.

ಕೃಷಿ ಇಲಾಖೆಯು ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತ, ಮೆಕ್ಕೆಜೋಳ, ಗೊಬ್ಬರಗಳ ಸಂಗ್ರಹವನ್ನಿಟ್ಟಿದೆ. ಜಿಲ್ಲೆಯಲ್ಲಿ ಸುಮಾರು 8900 ಕ್ವಿಂಟಲ್‌ನಷ್ಟು ಬಿತ್ತನೆ ಬೀಜದ ಬೇಡಿಕೆಯಿದ್ದು, ಸದ್ಯದಲ್ಲಿ 5050 ಕ್ವಿಂಟಲ್ ಭತ್ತ, 170 ಕ್ವಿಂಟಲ್ ಹೈಬ್ರೀಡ್ ಭತ್ತ, 950 ಕ್ವಿಂಟಲ್‌ನಷ್ಟು ಮೆಕ್ಕೆಜೋಳದ ಬೀಜಗಳು ಲಭ್ಯ ಇವೆ. ಮುಂಗಾರು ಹಂಗಾಮಿನ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ 21ಸಾವಿರ ಟನ್ ಗೊಬ್ಬರಗಳ ಬೇಡಿಕೆಯಿರುತ್ತದೆ. ಪ್ರಸ್ತುತ 6320 ಮೆಟ್ರಿಕ್ ಟನ್ ಮಾತ್ರ ಸಂಗ್ರಹದಲ್ಲಿದೆ. ಮೇ ತಿಂಗಳ ಮಧ್ಯಭಾಗದಲ್ಲಿ 2600 ಮೆಟ್ರಿಕ್ ಟನ್‌ನಷ್ಟು ಗೊಬ್ಬರ ಬರಲಿದೆ ಎಂಬುದು ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ.

‘ವಿಎನ್‌ಆರ್‌ ತಳಿಯ ಹೈಬ್ರೀಡ್ ಭತ್ತವನ್ನು ಕಳೆದ ವರ್ಷ ಜಿಲ್ಲೆಗೆ ಪರಿಚಯಿಸಲಾಗಿತ್ತು. ಉತ್ತಮ ಇಳುವರಿ ಬಂದಿರುವ ಕಾರಣ ಈ ಬಾರಿ ಕರಾವಳಿ ತಾಲ್ಲೂಕುಗಳಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಬಂದಿದೆ. ಇಲಾಖೆಯಿಂದ ಸಿಗುವ ಭತ್ತಕ್ಕೆ ತಳಿಗೆ ಅನುಗುಣವಾಗಿ ₹ 28ರಿಂದ ₹ 32ರವರೆಗೆ ದರವಿದೆ. ಸಾಮಾನ್ಯ ವರ್ಗದವರಿಗೆ ಕೆ.ಜಿ.ಯೊಂದಕ್ಕೆ ₹ 8 ಹಾಗೂ ಪರಿಶಿಷ್ಟರಿಗೆ ₹ 10 ಸಹಾಯಧನ ಸಿಗುತ್ತದೆ. ಹೈಬ್ರೀಡ್ ತಳಿಯಲ್ಲಿ ಸಾಮಾನ್ಯ ವರ್ಗದವರಿಗೆ ಕೆ.ಜಿ.ಯೊಂದಕ್ಕೆ ₹ 65, ಪರಿಶಿಷ್ಟರಿಗೆ ₹ 97.5 ವಿನಾಯಿತಿಯಲ್ಲಿ ಸರ್ಕಾರ ಬೀಜ ಪೂರೈಕೆ ಮಾಡುತ್ತಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಪ್ರತಿಕ್ರಿಯಿಸಿದರು.

‘ಕೂರಿಗೆ ಬಿತ್ತನೆಗಿಂತ ಈಗ ಹೆಚ್ಚಿನ ರೈತರು ನಾಟಿಗೆ ಮೊರೆ ಹೋಗಿದ್ದಾರೆ. ಸದ್ಯ ಗೊಬ್ಬರ ಹಾಕಿ ಭೂಮಿ ಹದಗೊಳಿಸುವ ಕಾರ್ಯದಲ್ಲಿ ಚುರುಕಿನಿಂದ ನಡೆಯುತ್ತಿದೆ. ಕೊರೊನಾ ವೈರಸ್‌ ಭಯ ಇರುವ ಕಾರಣ ರೈತರು ಹೊಲದಲ್ಲಿ, ಪರಸ್ಪರ ಅಂತರ ಕಾಯ್ದುಕೊಂಡೇ ಕೆಲಸ ಮಾಡುತ್ತಾರೆ. ಬೇರೆಯವರ ಗದ್ದೆಗೆ ಕೆಲಸಕ್ಕೆ ಹೋಗಲು ಕೊಂಚ ಹಿಂದೇಟು ಹಾಕುವ ಕೃಷಿ ಕಾರ್ಮಿಕರು, ತಮ್ಮ ಹೊಲ ಹದಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ’ ಎನ್ನುತ್ತಾರೆ ರೈತ ಶಿವಾಜಿ ಬನವಾಸಿ.

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ರಸಗೊಬ್ಬರ ಸಂಗ್ರಹ (ಮೆಟ್ರಿಕ್ ಟನ್‌ಗಳಲ್ಲಿ)

ಯೂರಿಯಾ;2292.6

ಡಿಎಪಿ;1604.3

ಎಂಒಪಿ;786.6

ಕಾಂಪ್ಲೆಕ್ಸ್;1636.3

ತಾಲ್ಲೂಕು;ಬೀಜ ಸಂಗ್ರಹ (ಕ್ವಿಂಟಲ್‌ಗಳಲ್ಲಿ)

ಕಾರವಾರ;270.53

ಅಂಕೋಲಾ;719.74

ಕುಮಟಾ;617.37

ಹೊನ್ನಾವರ;512.78

ಭಟ್ಕಳ;880.37

ಶಿರಸಿ;554.81

ಸಿದ್ದಾಪುರ;88.44

ಯಲ್ಲಾಪುರ;170.83

ಮುಂಡಗೋಡ;1477.02

ಹಳಿಯಾಳ;597.66

ಜೊಯಿಡಾ;336.28

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT