ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಸಿದ್ದಿ ಸಮುದಾಯದಿಂದ ಪರಿಸರ ಪ್ರವಾಸೋದ್ಯಮ

‘ಸ್ಥಳೀಯ ಪ್ರವಾಸೋದ್ಯಮ’ ಪರಿಕಲ್ಪನೆಯಲ್ಲಿ ಯೋಜನೆ ರೂಪಿಸಿದ ಜಿಲ್ಲಾ ಪಂಚಾಯಿತಿ
Last Updated 20 ಸೆಪ್ಟೆಂಬರ್ 2022, 23:49 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯ ಸಿದ್ದಿ ಸಮುದಾಯದ ಸಾಂಸ್ಕೃತಿಕ ವೈಭವವನ್ನು ಹೊರ ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿಯು ಸ್ಥಳೀಯ ಪ್ರವಾಸೋದ್ಯಮ ಎಂಬ ಯೋಜನೆ ರೂಪಿಸಿದೆ. ಅದನ್ನು ಸಮುದಾಯದ ಮಹಿಳೆಯರ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ ತಿಳಿಸಿದ್ದಾರೆ.

‘ಪಶ್ಚಿಮಘಟ್ಟದ ಅರಣ್ಯ ಪ್ರದೇಶದಲ್ಲಿ ಸಿಗುವ ಔಷಧೀಯ ಸಸ್ಯಗಳ ಪರಿಚಯ, ಅವುಗಳ ಉಪಯೋಗ, ಬುಡಕಟ್ಟು ಸಮುದಾಯದ ಜೀವನ ಶೈಲಿ, ಆಚಾರ ವಿಚಾರ, ನಂಬಿಕೆ, ಆಚರಣೆ, ಆಹಾರ ಪದ್ಧತಿಗಳನ್ನು ಈ ಪರಿಸರ ಸ್ನೇಹಿ ಪ್ರವಾಸೋದ್ಯಮವು ಒಳಗೊಂಡಿರುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.

‘ಸಿದ್ದಿ ಸಮುದಾಯದ ಶೈಲಿಯ ಹೋಮ್ ಸ್ಟೇ ನಿರ್ಮಾಣ, ಸಾಂಪ್ರದಾಯಿಕ ಆಹಾರ ಪದಾರ್ಥಗಳ ತಯಾರಿಕೆ, ಸಮುದಾಯದ ಇತಿಹಾಸ ಪರಿಚಯ, ಅರಣ್ಯ ಜೀವನದ ಅನುಭವದ ಹಂಚಿಕೆ, ಜಲಪಾತಗಳಿಗೆ ಭೇಟಿಯಂಥ ಚಟುವಟಿಕೆಗಳೂ ಈ ಯೋಜನೆ ಒಳಗೊಂಡಿದೆ’ ಎಂದು ಹೇಳಿದ್ದಾರೆ.

‘ಹೋಮ್ ಸ್ಟೇ ನಿರ್ಮಾಣಕ್ಕಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ₹ 50 ಲಕ್ಷ ಹಾಗೂ ತರಬೇತಿ ನೀಡಲಾಗುತ್ತದೆ. ಹೊರ ರಾಜ್ಯಗಳ ಪ್ರವಾಸ, ವೆಬ್‌ಸೈಟ್ ನಿರ್ವಹಣೆ, ಪ್ರಚಾರಕ್ಕಾಗಿ ಸಂಜೀವಿನಿ– ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‍.ಆರ್.ಎಲ್.ಎಂ) ಯೋಜನೆಯಿಂದ ₹ 19 ಲಕ್ಷ ಅನುದಾನವೂ ಬಿಡುಗಡೆಯಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಈ ಯೋಜನೆಯಲ್ಲಿ ಜಿಲ್ಲಾ ಪಂಚಾಯಿತಿಯು ಆರ್ಥಿಕ ನೆರವು ಮತ್ತು ತಾಂತ್ರಿಕ ಬೆಂಬಲ ನೀಡಲಿದೆ. ಎನ್‍.ಆರ್.ಎಲ್.ಎಂ ಒಕ್ಕೂಟಗಳಲ್ಲಿರುವ ಸಿದ್ದಿ ಸಮುದಾಯದ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ಮತ್ತು ಯಲ್ಲಾಪುರ ತಾಲ್ಲೂಕು ಪಂಚಾಯ್ತಿ ಮೂಲಕ ಯೋಜನೆ ಅನುಷ್ಠಾನವಾಗುತ್ತದೆ’ ಎಂದು ಹೇಳಿದ್ದಾರೆ.

‘ಉತ್ತರ ಕನ್ನಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. 2020–21ನೇ ಸಾಲಿನಲ್ಲಿ ಜಿಲ್ಲೆಯ ಸ್ವಸಹಾಯ ಸಂಘದ ಮಹಿಳೆಯರಿಗೆ ಜೀವನೋಪಾಯ ಚಟುವಟಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಸಂಜೀವಿನಿ ಯೋಜನೆಯ ಮೂಲಕ ಜೊಯಿಡಾ ತಾಲ್ಲೂಕಿನ ರಾಮನಗರದಲ್ಲಿ ಆದಿಶಕ್ತಿ ಸಂಜೀವಿನಿ ಸ್ವಸಹಾಯ ಗುಂಪಿನ ಸದಸ್ಯರು ಈ ಚಟುವಟಿಕೆಯಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.

‘ಮುಖ್ಯವಾಹಿನಿಗೆ ತರಲು ಶ್ರಮ’:

‘ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯು ಎನ್‍.ಆರ್.ಎಲ್.ಎಂ ಮೂಲಕ ಗಾಮೀಣದ ಮಹಿಳೆಯರನ್ನು ಒಗ್ಗೂಡಿಸಲು ಶ್ರಮಿಸುತ್ತಿದೆ. ಅವರ ಆರ್ಥಿಕ ಸಬಲೀಕರಣ ಮಾಡುವ ಉದ್ದೇಶದಿಂದ ಇಂಥ ಹಲವು ಜೀವನೋಪಾಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅವರಿಗೆ ಪ್ರೋತ್ಸಾಹ, ಆರ್ಥಿಕ ನೆರವು ಮತ್ತು ತಾಂತ್ರಿಕ ಬೆಂಬಲ ನೀಡಿ ಬುಡಕಟ್ಟು ಸಮುದಾಯಗಳ ಮಹಿಳೆಯರನ್ನೂ ಸಮಾಜದ ಮುಖ್ಯವಾಹಿನಿಗೆ ತರಲು ಯೋಜನೆಗಳನ್ನು ರೂಪಿಸಲಾಗುತ್ತಿದೆ’ ಎಂದು ಪ್ರಿಯಾಂಗಾ.ಎಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT