ಒಬ್ಬಳೇ ಯುವತಿ, ಎರಡು ಬಾರಿ ವಿವಾಹ ನೋಂದಣಿ!

7
ಪ್ರೀತಿಸಿ ಮದುವೆಯಾಗಿದ್ದ ಅರ್ಚಕನಿಂದ ಪೊಲೀಸ್ ವರಿಷ್ಠಾಧಿಕಾರಿಗೆ ದೂರು

ಒಬ್ಬಳೇ ಯುವತಿ, ಎರಡು ಬಾರಿ ವಿವಾಹ ನೋಂದಣಿ!

Published:
Updated:
Deccan Herald

ಕಾರವಾರ: ತಾನು ಪ್ರೀತಿಸಿದ ಯುವತಿಯನ್ನು ನೋಂದಾಯಿತ ಮದುವೆ ಮಾಡಿಸಿಕೊಂಡಿದ್ದರೂ ಆಕೆಯ ತಾಯಿ ಬಲವಂತವಾಗಿ ಮತ್ತೊಬ್ಬ ಯುವಕನ ಜತೆ ಎರಡನೇ ಬಾರಿಗೆ ಮದುವೆ ಮಾಡಿಸಿದ್ದಾರೆ. ಅದು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿದೆ. ಇದರಲ್ಲಿ ತನಗೆ ಅನ್ಯಾಯವಾಗಿದೆ ಎಂದು ಯುವಕರೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮಂಗಳವಾರ ದೂರು ನೀಡಿದ್ದಾರೆ.

ಬೆಂಗಳೂರಿನಲ್ಲಿ ಅರ್ಚಕರಾಗಿರುವ, ಯಲ್ಲಾಪುರ ತಾಲ್ಲೂಕಿನ ದೇಹಳ್ಳಿ ಗ್ರಾಮದ ಗಣಪತಿ ಉಮಾಮಹೇಶ್ವರ ಭಟ್ ಪೊಲೀಸರ ಮೊರೆ ಹೋದವರು. ತನ್ನ ಪತ್ನಿಯನ್ನು ತನ್ನ ಬಳಿಗೆ ಕಳುಹಿಸಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೂರದ ಸಂಬಂಧಿಯೊಬ್ಬರ ಪುತ್ರಿ ಹಾಗೂ ನಾನು ಒಂದು ವರ್ಷದಿಂದ ಪ್ರೀತಿಸುತ್ತಿದ್ದೆವು. ಫೆ.7ರಂದು ಕಾರವಾರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದೆವು. ಬಳಿಕ ದೇವಸ್ಥಾನಕ್ಕೆ ತೆರಳಿ ಮದುವೆ ಮಾಡಿಕೊಂಡಿದ್ದೆವು. ಇದಾದ ಬಳಿಕ ನಾನು ಆಕೆಯನ್ನು ತವರು ಮನೆಯಲ್ಲಿ ಬಿಟ್ಟು ಬೆಂಗಳೂರಿಗೆ ತೆರಳಿದ್ದೆ’ ಎಂದು ವಿವರಿಸಿದರು.

‘ಆಗ ಆಕೆ ಯಲ್ಲಾಪುರದಲ್ಲಿ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದಳು. ಅದನ್ನು ಆಕೆ ಪೂರ್ಣಗೊಳಿಸಲಿ ಎಂಬ ಉದ್ದೇಶದಿಂದ ನಾನು ಒಬ್ಬನೇ ಬೆಂಗಳೂರಿಗೆ ಹೋಗಿದ್ದೆ. ಆಗ ಆಕೆಯ ತಾಯಿ ಅದ್ಧೂರಿಯಾಗಿ ಮದುವೆ ಮಾಡಿಸಿ ನನ್ನೊಂದಿಗೆ ಕಳುಹಿಸಿಕೊಡುವುದಾಗಿ ಹೇಳಿದ್ದರು. ಆದರೆ, ಬಳಿಕ ಆಕೆಯನ್ನು ದೂರವಾಣಿ ಮುಖೇನ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರ ಮನೆಗೇ ಭೇಟಿ ನೀಡಿದಾಗ ಅವಳು ಮನೆಯಲ್ಲೇ ಇದ್ದಳು. ಆಕೆಯ ತಾಯಿ ನನ್ನನ್ನು ಗದರಿಸಿ, ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದರು. ನನ್ನ ಪತ್ನಿಯ ಜತೆ ಮಾತನಾಡಲು ನನಗೆ ಅವಕಾಶವನ್ನೂ ಕೊಡಲಿಲ್ಲ’ ಎಂದು ದೂರಿದರು.

‘ಈ ನಡುವೆ ಆಕೆಗೆ ರಾಜೇಶ ಹೆಗಡೆ ಎಂಬುವವರ ಜತೆ ಜುಲೈ 19ರಂದು ಮದುವೆ ಮಾಡಿಸಲಾಗಿದೆ. ಜುಲೈ 23ರಂದು ಯಲ್ಲಾಪುರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಲಾಗಿದೆ. ಈಗಾಗಲೇ ಒಂದು ಮದುವೆಯಾಗಿರುವ ಆಕೆಗೆ, ಅಧಿಕಾರಿಗಳು ಮತ್ತೊಮ್ಮೆ ನೋಂದಣಿ ಮಾಡಿಸಲು ಹೇಗೆ ಅವಕಾಶ ನೀಡಿದರು ಎಂದು ತಿಳಿಯುತ್ತಿಲ್ಲ’ ಎಂದು ದಾಖಲೆಗಳನ್ನು ಪ್ರದರ್ಶಿಸಿದರು. 

ಗಣಪತಿ ಅವರ ತಾಯಿ ದಾಕ್ಷಾಯಿಣಿ ಕೂಡ ತಮ್ಮ ಮಗನಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.

‘ತಂತ್ರಜ್ಞಾನವಿಲ್ಲ’: ‘ಯಾರಾದರೂ ಒಬ್ಬರು (ಗಂಡು ಅಥವಾ ಹೆಣ್ಣು) ಬೇರೆ ತಾಲ್ಲೂಕಿನವರಾಗಿದ್ದರೆ ಅವರ ವೈವಾಹಿಕ ಜೀವನದ ವಿವರಗಳು ವಿವಾಹ ನೋಂದಣಿ ಮಾಡಿಸುತ್ತಿರುವ ತಾಲ್ಲೂಕಿನಲ್ಲಿ ಸಿಗುವುದಿಲ್ಲ. ಅದನ್ನು ತಿಳಿದುಕೊಳ್ಳಲು ನಮ್ಮಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾಗಿಲ್ಲ’ ಎಂದು ಯಲ್ಲಾಪುರ ಉಪ ನೋಂದಣಾಧಿಕಾರಿ ಲಕ್ಷ್ಮೀದೇವಿ ‘ಪ್ರಜಾವಾಣಿ’ ಜತೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !