ಪುಟಾಣಿಯಿಂದ ದೊಡ್ಡ ದಾಖಲೆಯ ಯತ್ನ 28ಕ್ಕೆ

ಶನಿವಾರ, ಮೇ 25, 2019
26 °C
‘ಸ್ಪಿನ್ ಸ್ಕೇಟಿಂಗ್ ಸ್ಟಂಟ್‌’ನಲ್ಲಿ ಕಸರತ್ತು ಪ್ರದರ್ಶಿಸಲಿರುವ ಮೊಹಮ್ಮದ್ ಸಾಖೀಬ್ 

ಪುಟಾಣಿಯಿಂದ ದೊಡ್ಡ ದಾಖಲೆಯ ಯತ್ನ 28ಕ್ಕೆ

Published:
Updated:
Prajavani

ಕಾರವಾರ: ತಾಲ್ಲೂಕಿನ ಕೈಗಾದ ಐದು ವರ್ಷದ ಬಾಲಕ ಮೊಹಮ್ಮದ್ ಸಾಖೀಬ್, ‘ಸ್ಪಿನ್ ಸ್ಕೇಟಿಂಗ್ ಸ್ಟಂಟ್‌’ ಮೂಲಕ ದೇಶದಲ್ಲಿ ಯಾರೂ ಮಾಡಿರದ ದಾಖಲೆಯನ್ನು ಮಾಡಲು ಸಜ್ಜಾಗಿದ್ದಾನೆ.

ಇದೇ 28ರಂದು ನಗರದ ಹೋಟೆಲ್ ಅಜ್ವಿ ಓಷಿಯನ್‌ನಲ್ಲಿ ಬೆಳಿಗ್ಗೆ 9ರಿಂದ ಈತ ಕಸರತ್ತು ಪ್ರದರ್ಶಿಸಲಿದ್ದಾರೆ. ಜಗತ್ತಿನ ಏಳು ದಾಖಲೆ ಪುಸ್ತಕಗಳಲ್ಲಿ ಈತನ ಸಾಹಸ ದಾಖಲಾಗುವ ನಿರೀಕ್ಷೆಯಿದೆ ಎಂದು ಕೈಗಾ ರೋಲರ್ಸ್ ಸ್ಕೇಟಿಂಗ್ ಕ್ಲಬ್‌ನ ತರಬೇತುದಾರ ದಿಲೀಪ್ ಹಣಬರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದ ಅವರು, ‘ಬಾಲಕನ ಸಾಧನೆಯನ್ನು ದಾಖಲಿಸಿಕೊಳ್ಳಲು ವಿವಿಧ ದಾಖಲೆಗಳ ನಮೂದಿಸಿಕೊಳ್ಳುವ ಸಂಸ್ಥೆಗಳ ಅಧಿಕಾರಿಗಳು ಬರುತ್ತಿದ್ದಾರೆ. 25 ನಿಮಿಷಗಳವರೆಗೆ ಈತ ನಿರಂತರವಾಗಿ ‘ಲಿಂಬೋ ಸ್ಪಿನ್ನಿಂಗ್ ಸ್ಕೇಟಿಂಗ್’ ಪ್ರದರ್ಶಿಸಲಿದ್ದಾನೆ. ಸ್ಕೇಟಿಂಗ್‌ ಶೂಗಳನ್ನು ಧರಿಸಿ, ಮುಂದಕ್ಕೆ ಬಾಗಿ ಅಂದಾಜು ಒಂದು ಸಾವಿರ ಸುತ್ತುಗಳನ್ನು ವೃತ್ತಾಕಾರದಲ್ಲಿ ತಿರುಗಲಿದ್ದಾನೆ’ ಎಂದು ಹೇಳಿದರು.

‘ಈತನ ಈ ಸಾಹಸ ‘ರೆಕಾರ್ಡ್ ಹೋಲ್ಡರ್ ರಿಪಬ್ಲಿಕ್’, ‘ಪರ್ಫೆಕ್ಟ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’, ‘ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್’, ‘ಹೈ ರೇಂಜ್ ಬುಕ್ ಆಫ್ ರೆಕಾರ್ಡ್ಸ್’, ‘ಏಷಿಯನ್ ಬುಕ್ ಆಫ್ ರೆಕಾರ್ಡ್ಸ್’, ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಹಾಗೂ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲೆಗೊಳ್ಳುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

‘ಕೈಗಾ ರೋಲರ್ಸ್ ಸ್ಕೇಟಿಂಗ್ ಕ್ಲಬ್‌ನ ಅಡಿಯಲ್ಲಿ 150 ಮಕ್ಕಳು ‘ಸ್ಕೇಟಿಂಗ್’ ತರಬೇತಿ ಪಡೆಯುತ್ತಿದ್ದಾರೆ. ಈವರೆಗೆ ವೈಯಕ್ತಿಕ ಹಾಗೂ ಗುಂಪು ವಿಭಾಗದಲ್ಲಿ ಒಟ್ಟು 14 ದಾಖಲೆಗಳು ಆಗಿವೆ’ ಎಂದು ಮಾಹಿತಿ ನೀಡಿದರು.

‘ಕ್ಲಬ್‌ನಿಂದ ತರಬೇತಿ ಪಡೆದಿರುವ ಕೀರ್ತಿ ಹುಕ್ಕೇರಿ, ಪ್ರತೀಕ್ಷಾ ಕುಲಕರ್ಣಿ ಹಾಗೂ ಎಸ್.ಡಿ.ಯುಕ್ತಿಶ್ರೀ ರಾಷ್ಟ್ರೀಯ ರೋಲರ್ ಹಾಕಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಗುಜರಾತ್ ರಾಜ್ಯದ ನಂದುರ್‌ಬಾರ್‌ನಲ್ಲಿ ಮೇ 1ರಿಂದ 5ರವರೆಗೆ ಈ ಆಯ್ಕೆ ಶಿಬಿರ ನಡೆಯಲಿದೆ. ಇಲ್ಲಿ ಆಯ್ಕೆಯಾದವರು ಸ್ಪೇನ್‌ ದೇಶದ ಬಾರ್ಸಿಲೋನಾದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಲಿದ್ದಾರೆ’ ಎಂದು ತಿಳಿಸಿದರು.

ಸಾಖೀಬ್‌ನ ತಂದೆ ಮೊಹಮ್ಮದ್ ರಫೀಕ್ ಸುದ್ದಿಗೋಷ್ಠಿಯಲ್ಲಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !