ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಪ್ಲಾಸ್ಟಿಕ್‌ನಿಂದ ತೈಲ ಉತ್ಪಾದನೆ!

‘ಡಿಸೈನ್ ಆ್ಯಂಡ್ ಫ್ಯಾಬ್ರಿಕೇಶನ್ ಆಫ್ ಪೈರೊಲಿಸಿಸ್ ಯುನಿಟ್’ ಸಿದ್ಧಪಡಿಸಿದ ವಿದ್ಯಾರ್ಥಿಗಳು
Last Updated 13 ಮೇ 2019, 12:20 IST
ಅಕ್ಷರ ಗಾತ್ರ

ಕಾರವಾರ: ಒಂದೆಡೆ ದೇಶದಲ್ಲಿ ಪೆಟ್ರೋಲ್, ಡೀಸೆಲ್‌ ಬೆಲೆ ಗಗನಕ್ಕೆ ಏರುತ್ತಿದೆ. ಮತ್ತೊಂದೆಡೆ ಜಗತ್ತನೇ ವಿನಾಶ ಮಾಡುವಷ್ಟರ ಮಟ್ಟಿಗೆ ಪ್ಲಾಸ್ಟಿಕ್ ಭೂಮಿಯಲ್ಲಿ ಉಳಿದುಕೊಂಡಿದೆ. ಇವರೆಡೂ ಸಮಸ್ಯೆಗಳ ಪರಿಹಾರಕ್ಕೆ ತಾಲ್ಲೂಕಿನ ಗಿರಿಜಾಬಾಯಿ ಸೈಲ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಯೋಜನೆಯೊಂದನ್ನು ರೂಪಿಸಿದ್ದಾರೆ.

ಮೆಕಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ನೆಲ್ಸನ್ ಡಿಸೋಜಾ, ರಾಯ್ಸ್‌ಟನ್ ಪಿಂಟೊ, ಶಶಿಧರ್ ಹಾಗೂ ಮಂಜುನಾಥ ಆರ್.ಎಚ್ ಅವರು ಪ್ರೊ.ಮೋಹನಕುಮಾರ್ ವಿ.ಎಸ್ ಮಾರ್ಗದರ್ಶನದಲ್ಲಿ ಪ್ರಾಜೆಕ್ಟ್ (ಡಿಸೈನ್ ಆ್ಯಂಡ್ ಫ್ಯಾಬ್ರಿಕೇಶನ್ ಆಫ್ ಪೈರೊಲಿಸಿಸ್ ಯುನಿಟ್) ಸಿದ್ಧಪಡಿಸಿದ್ದಾರೆ. ಇದರಿಂದ ಪೆಟ್ರೋಲ್‌ ಮಾತ್ರವಲ್ಲ, ಡೀಸೆಲ್, ಸೀಮೆಎಣ್ಣೆಯನ್ನೂ ತೆಗೆಯಬಹುದಾಗಿದೆ.

ಏನಿದು ಮಾದರಿ?

‘ಪೈರೊ’ ಎಂದರೆ ಗ್ರೀಕ್‌ ಭಾಷೆಯಲ್ಲಿ ಬೆಂಕಿ, ‘ಲೈಸಿಸಿ’ ಎಂದರೆ ಬೇರ್ಪಡಿಸುವುದು. ಒಟ್ಟಾರೆಯಾಗಿ ‘ಪೈರೊಲಿಸಿಸ್’ ಎಂದರೆ, ಒಂದು ವಸ್ತುವಿಗೆ ಉಷ್ಣ ನೀಡಿ ಅದರಿಂದ ಮೂಲಧಾತುಗಳನ್ನು ಬೇರ್ಪಡಿಸುವುದು ಎಂದರ್ಥ. ಅಂದರೆ, ಪೆಟ್ರೋಲಿಯಂ ಉತ್ಪನ್ನಗಳಿಂದಲೇ ಉತ್ಪಾದಿಸಲಾಗುವ ಪ್ಲಾಸ್ಟಿಕ್‌ನಿಂದ ಮತ್ತೆ ಪೆಟ್ರೋಲ್ ಅನ್ನು ಬೇರ್ಪಡಿಸುವ ಮಾದರಿ ಇದಾಗಿದೆ.

‘ಇದು ಆಮ್ಲಜನಕದ ಅನುಪಸ್ಥಿತಿಯಲ್ಲಿ ಅಧಿಕ ತಾಪಮಾನದಲ್ಲಿ ಸಾವಯವ ವಸ್ತುಗಳನ್ನು ರಾಸಾಯನಿಕವಾಗಿ ವಿಭಜಿಸುವ ಪ್ರಕ್ರಿಯೆಯ ರೂಪವಾಗಿದೆ. ಏಕಕಾಲದಲ್ಲಿ ಭೌತಿಕ ಮತ್ತು ರಾಸಾಯನಿಕ ಸಂಯೋಜನೆಯ ಬದಲಾವಣೆಯನ್ನು ಇದು ಒಳಗೊಳ್ಳುತ್ತದೆ’ ಎಂದು ನೆಲ್ಸನ್ ಡಿಸೋಜಾ ತಿಳಿಸಿದರು.

ರಾಯ್ಸ್‌ಟನ್ ಪಿಂಟೊ ಮಾದರಿಯ ಕುರಿತು ವಿವರಿಸಿ, ‘ಮಣ್ಣಿನಿಂದ ಬೇರ್ಪಡಿಸಿದ ಪ್ಲಾಸ್ಟಿಕ್‌ ಅನ್ನು ಸಣ್ಣಸಣ್ಣ ಚೂರುಗಳನ್ನಾಗಿ, ನೈಟ್ರೋಜನ್ ತುಂಬಿದ ಬಾಯ್ಲರ್‌ವೊಂದರಲ್ಲಿ ಹಾಕಲಾಗುತ್ತದೆ. ಅದಕ್ಕೆ 120 ಡಿಗ್ರಿ ಸೆಲ್ಷಿಯಸ್ ಶಾಖ ಕೊಟ್ಟು ದ್ರವರೂಪಕ್ಕೆ ಪರಿವರ್ತಿಸಲಾಗುತ್ತದೆ. ಆಗ ಸಿಗುವ ದ್ರವರೂಪದ ಅನಿಲವನ್ನು ನೀರಿನ ಮೂಲಕ ಕೊಠಡಿಯ ಉಷ್ಣಾಂಶದಲ್ಲಿ ತಣ್ಣಗಾಗಿಸಿ, ಕೊಳವೆಯ ಮೂಲಕ ಹರಿಸಿದಾಗ ತೈಲವೊಂದು ಲಭ್ಯವಾಗುತ್ತದೆ. ಅದಕ್ಕೆ ಮತ್ತೆ ಶಾಖ ನೀಡಿದಾಗ ಪೆಟ್ರೋಲ್, ಡೀಸೆಲ್‌, ಸೀಮೆಎಣ್ಣೆಯಂಥ ತೈಲದ ಉತ್ಪನ್ನಗಳನ್ನು ಪಡೆಯಬಹುದು’ ಎಂದು ಹೇಳಿದರು.

‘ಇದು ಪರಿಸರ ಸ್ನೇಹಿಯಾಗಿದ್ದು, ಇಲ್ಲಿ ಮಾಲಿನ್ಯಕಾರಕ ಹೊಗೆ ಬರುವುದಿಲ್ಲ. ಸುಮಾರು ಒಂದು ಕೆ.ಜಿ.ಯಷ್ಟು ಪ್ಲಾಸ್ಟಿಕ್‌ನಿಂದ 200 ಎಂ.ಎಲ್ ಪೆಟ್ರೋಲ್‌ ತೆಗೆಯಬಹುದು’ ಎಂದು ತಿಳಿಸಿದರು.

ಉಪ್ಪು ನೀರು ಶುದ್ಧೀಕರಣದ ಮಾದರಿ

ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಸಮುದ್ರದಲ್ಲಿ ಸಾಕಷ್ಟು ನೀರಿದೆ. ಆದರೆ, ಅದು ಕುಡಿಯಲು ಯೋಗ್ಯವಾಗಿಲ್ಲ. ಹೀಗಿರುವಾಗ ಬೇಸಿಗೆಕಾಲದಲ್ಲಿ ಜಿಲ್ಲೆಯ ವಿವಿಧೆಡೆ ನೀರಿನ ಹಾಹಾಕಾರ ಉಂಟಾಗುತ್ತದೆ. ಮೆಕಾನಿಕಲ್ ವಿಭಾಗದ ನಿಹಾಲ್ ಮುದ್ಕುದ್ಕರ್, ಸಾಯಿಪ್ರಸಾದ್ ಬಾಂದೇಕರ್, ಅಭಿಷೇಕ ನಾಯ್ಕ ಹಾಗೂ ವಿನಾಯಕ ನಾಯ್ಕ ಇದಕ್ಕೆ ಪರಿಹಾರ ಕಂಡುಹಿಡಿದಿದ್ದಾರೆ. ಸೂರ್ಯನ ಶಾಖದ ಮೂಲಕ ಉಪ್ಪು ನೀರನ್ನು ಶುದ್ಧೀಕರಿಸಿ ಸಿಹಿ ನೀರು ಪಡೆಯುವ ಮಾದರಿ ಸಿದ್ಧಪಡಿಸಿದ್ದಾರೆ.

ಇನ್ನೊಂದೆಡೆ, ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯರು, ಕಾಣೆಯಾದ ಜಾನುವಾರನ್ನು ಪತ್ತೆ ಹಚ್ಚಲು ನೆರವಾಗುವಂಥಚಿಪ್ತಯಾರಿಸಿದ್ದಾರೆ. ಜತೆಗೆ, ರಸ್ತೆಯಲ್ಲಿ ರಾತ್ರಿ ಓಡಾಡುವ ಜನ– ಜಾನುವಾರನ್ನು ಗುರುತಿಸಲು ಸಹಾಯವಾಗುವ ಸೆನ್ಸಾರ್ ಆಧಾರಿತ ತಂತ್ರಾಂಶವೊಂದನ್ನು ರೂಪಿಸಿದ್ದಾರೆ. ಇವು ಜನ ಮೆಚ್ಚುಗೆಗೆ ಪಾತ್ರವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT