ಮಂಗಳವಾರ, ಮೇ 26, 2020
27 °C
ಕಾರವಾರ ತಾಲ್ಲೂಕಿನ ವಿವಿಧೆಡೆ ಹಲವು ವೇಷಧಾರಿಗಳಿಂದ ನೃತ್ಯ ಪ್ರದರ್ಶನ

ಹೋಳಿ ಹಬ್ಬಕ್ಕೆ ಸುಗ್ಗಿ ಕುಣಿತದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಾಡಿನಲ್ಲಿ ಹೋಳಿ ಹುಣ್ಣಿಮೆ ಮತ್ತು ಸುಗ್ಗಿಗೆ ವಿಶೇಷ ನಂಟು ಹಿಂದಿನಿಂದಲೂ ಇದೆ. ಇದರ ಭಾಗವಾಗಿ ಕಾರವಾರದ ಸುತ್ತಮುತ್ತ ಈಗ ವಿವಿಧ ವೇಷಧಾರಿಗಳು ಸುಗ್ಗಿ ನೃತ್ಯ ಆರಂಭಿಸಿದ್ದಾರೆ. 

ತಾಲ್ಲೂಕಿನ ತೋಡೂರು ಗ್ರಾಮದಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದವರ ಸುಗ್ಗಿ ನೃತ್ಯ ಈಗಾಗಲೇ ಶುರುವಾಗಿದೆ. ಕೋಲಾಟ, ಯಕ್ಷಗಾನ ವೇಷಧಾರಿಗಳು, ಗುಮಟೆಪಾಂಗ್ ವಾದ್ಯ ನುಡಿಸುತ್ತಿರುವವರು ವಿವಿಧೆಡೆ ಕಾಣಿಸುತ್ತಿದ್ದಾರೆ. ಮನೆಗಳ ಮುಂದೆ ಸಂಚರಿಸಿ ನೃತ್ಯ ಮಾಡಿ ಜಾನಪದ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ. ಪ್ರತಿವರ್ಷ ಹಬ್ಬಕ್ಕೆ ಒಂದು ವಾರ ಉಳಿದಿರುವಂತೆ ಗ್ರಾಮೀಣ ಭಾಗ ಮತ್ತು ನಗರದಲ್ಲಿ ಕುಣಿತ ಪ್ರದರ್ಶನ ಮಾಡುವುದು ಮೊದಲಿನಿಂದ ಬಂದಿರುವ ವಾಡಿಕೆಯಾಗಿದೆ.

ಕೋಮಾರಪಂಥ, ಅಂಬಿಗ, ಕರೆ ಒಕ್ಕಲಿಗ, ನಾಮಧಾರಿ, ಆಗೇರ ಸಮುದಾಯದವರೂ ಈ ಆಚರಣೆ ಮಾಡುತ್ತಾರೆ. ತೋಡೂರಿನ ಕರಿದೇವರು ಹಾಗೂ ಕರಿನಾಥನಿಗೆ ನವಮಿಯ ದಿನ ಪೂಜೆ ಮಾಡಿದ ಬಳಿಕ ಸುಗ್ಗಿ ಕುಣಿತ ಶುರುವಾಗುತ್ತದೆ. ತಮ್ಮ ಸಮುದಾಯದವರ ಮನೆಗಳ ಎದುರು ಕುಣಿದರೆ ರೋಗ ರುಜಿನದ ಸಮಸ್ಯೆ ಬಾಧಿಸುವುದಿಲ್ಲ ಎಂಬುದು ನಂಬಿಕೆಯಾಗಿದೆ. 

ವರ್ಷದಲ್ಲಿ ಎರಡು ಬಾರಿ ಸಂಕ್ರಾಂತಿ, ಯುಗಾದಿಗೆ ಹಿರಿಸುಗ್ಗಿ ಹಾಗೂ ಕಿರಿಸುಗ್ಗಿ ಕುಣಿತ ಮಾಡಲಾಗುತ್ತದೆ. ಹಾಲಕ್ಕಿ ಸಮುದಾಯದವರು ಹೆಚ್ಚಾಗಿ ಇದನ್ನು ಆಚರಿಸುತ್ತಾರೆ. ಹಿಂದಿನಿಂದಲೂ ಬಂದಿರುವ ಈ ಸಂಪ್ರದಾಯದಲ್ಲಿ ಸಮುದಾಯದವರು ನೀಡುವ ದೇಣಿಗೆ ಹಣವನ್ನು ತಮ್ಮ ದೇವರಿಗೆ ಆಗಬೇಕಿರುವ ಕಾರ್ಯಗಳಿಗೆ ಬಳಕೆ ಮಾಡುತ್ತಾರೆ.

ಯುವಕರೊಂದಿಗೆ ಮಕ್ಕಳು, ಹಿರಿಯರೂ ಸುಗ್ಗಿ ಕುಣಿತದಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ಸುಗ್ಗಿ ಮೇಳದಲ್ಲಿ ಬಳಸಿದ ತುರಾಯಿ, ಉಡುಗೆಯನ್ನು ಹೋಳಿ ಹುಣ್ಣಿಮೆಯ ಬಳಿಕ ಸಮುದ್ರದಲ್ಲಿ ವಿಸರ್ಜನೆ ಮಾಡುತ್ತಾರೆ. ತಮ್ಮ ಆರಾಧ್ಯ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ತಮ್ಮ ಮನೆಗಳಿಗೆ ಮರಳುತ್ತಾರೆ.

ವಿಶೇಷ ಕುಣಿತ: ಸಾಂಪ್ರದಾಯಿಕವಾದ ಉಡುಪು ಧರಿಸುವ ನೃತ್ಯಗಾರರು, ತಲೆಗೆ ಬಣ್ಣ ಬಣ್ಣದ ತುರಾಯಿ ಇರುವ ಪೇಟ ತೊಡುತ್ತಾರೆ. ಗುಮಟೆಪಾಂಗ್, ಜಾಗಟೆ, ಶಹನಾಯ್ ವಾದ್ಯಗಳ ನಾದವು ಸನ್ನಿವೇಶಕ್ಕೆ ಮತ್ತಷ್ಟು ಕಳೆ ನೀಡುತ್ತದೆ. ಒಮ್ಮೆ ವೇಷ ಧರಿಸಿ ಹಣೆಗೆ ಗಂಧ ಹಚ್ಚಿಕೊಂಡು ಮನೆಯಿಂದ ಹೊರಟವರು, ಸುಗ್ಗಿ ಕುಣಿತ ಮುಗಿಯುವ ದಿನದವರೆಗೂ ವಾಪಸ್ ಬರುವುದಿಲ್ಲ. ಇದು ಮೊದಲಿನಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯ ಎನ್ನುತ್ತಾರೆ ತೋಡೂರಿನ ವೀರಭದ್ರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು