ಗುರುವಾರ , ಮಾರ್ಚ್ 4, 2021
29 °C
ಕಾರವಾರ ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಕನ್ನಡ ಶಾಲೆಗಳಲ್ಲಿದೆ ಕನ್ನಡದ ಉಳಿವು: ಶಾಸಕಿ ರೂಪಾಲಿ ನಾಯ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಾರವಾರ: ‘ಗಡಿನಾಡು ಕಾರವಾರದಲ್ಲಿ ಕನ್ನಡವನ್ನು ಉಳಿಸಲು ದಶಕಗಳ ಹಿಂದೆ ಹೋರಾಟ ನಡೆದ ಕಾರಣದಿಂದ ಇಂದು ನಾವಿಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ಸಾಧ್ಯವಾಗಿದೆ. ಇಲ್ಲಿ ಕನ್ನಡ ಉಳಿಯಬೇಕಾದರೆ ಕನ್ನಡ ಶಾಲೆಗಳು ಉಳಿವು ಅತ್ಯಗತ್ಯ’ ಎಂದು ಶಾಸಕಿ ರೂಪಾಲಿ ನಾಯ್ಕ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ರಂಗಮಂದಿರದ ವೀರಯೋಧ ವಿಜಯಾನಂದ ನಾಯ್ಕ ವೇದಿಕೆಯಲ್ಲಿ ಶನಿವಾರ ಆಯೋಜಿಸಲಾದ ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

‘ಈ ಭಾಗದಲ್ಲಿ ಕನ್ನಡ ಉಳಿಯಬೇಕಾದರೆ ಪ್ರತಿ ವಿದ್ಯಾರ್ಥಿಯೂ ನಮ್ಮ ಭಾಷೆಗೆ ಒತ್ತು ನೀಡಬೇಕು. ಗಡಿಭಾಗದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಪ್ರತಿ ವಿಷಯಕ್ಕೂ ಒಬ್ಬೊಬ್ಬರು ಶಿಕ್ಷಕರು ಇರಲೇಬೇಕು ಎಂದು ಸರ್ಕಾರಕ್ಕೆ ಎಲ್ಲರೂ ಸೇರಿ ಒತ್ತಾಯ ಮಾಡಬೇಕು’ ಎಂದು ಸಲಹೆ ನೀಡಿದರು. 

ಸರ್ಕಾರಿ ಕಚೇರಿಗಳಲ್ಲಿ ಇಲಾಖೆಗಳ ನಾಮಫಲಕಗಳನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗುತ್ತದೆ. ಅದು ಸರಿಯಲ್ಲ. ಅಧಿಕಾರಿಗಳು ಕನ್ನಡ ಮಾತನಾಡಬೇಕು. ಇಲ್ಲದಿದ್ದರೆ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಎಂದು ಕಿವಿಮಾತು ಹೇಳಿದರು. 

ಯಕ್ಷಗಾನ ಅಕಾಡೆಮಿ ಸದಸ್ಯ ಡಾ.ರಾಮಕೃಷ್ಣ ಗುಂದಿ ಮಾತನಾಡಿ, ‘ಈ ಭಾಗದಲ್ಲಿ ಕನ್ನಡ ಮತ್ತು ಕೊಂಕಣಿಯ ಪ್ರಭಾವವಿದೆ. ಈಚಿನ ವರ್ಷಗಳಲ್ಲಿ ಕನ್ನಡದ ಕವಿಗಳ ಸಂಖ್ಯೆ ಗಮನಾರ್ಹವಾಗಿ ಬೆಳೆಯುತ್ತಿದೆ. ಇಲ್ಲಿ ಕನ್ನಡವನ್ನು ದುಡಿಸಿಕೊಳ್ಳುವ ಪ್ರಾಮಾಣಿಕತೆಯ ಅಗತ್ಯವಿದೆ. ಇಂತಹ ಸಮ್ಮೇಳನಗಳು ಸಾಹಿತಿಗಳು ಮತ್ತು ವಿದ್ಯಾರ್ಥಿಗಳು ಒಂದೆಡೆ ಸೇರುವುದಕ್ಕೆ ಮಾತ್ರ ಸೀಮಿತವಾಗಿರದೇ ಅದರಾಚೆಗೂ ಚಿಂತನೆ ಆಗಬೇಕು’ ಎಂದು ಹೇಳಿದರು.

ಆಶಯ ಮಾತುಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ‘ಸಮ್ಮೇಳನ ಎಂದರೆ ಅದೊಂದು ಚಳವಳಿ. ಭಾಷೆಯ ಬಗೆಗಿನ ಕಾಳಜಿ ತೋರಿಸುವುದು ಎಂದರ್ಥ. ಭಾಷೆಗೆ ಪೂರಕವಾದ ಸಮ್ಮೇಳನಗಳು ನಮ್ಮ ರಾಜ್ಯದಲ್ಲಿ ಮಾತ್ರವಾಗುತ್ತಿವೆ. ಇದರಿಂದ ನಾಡು, ನುಡಿಯ ಮೇಲಿನ ಬದ್ಧತೆ ಮತ್ತಷ್ಟು ಗಟ್ಟಿಯಾಗುತ್ತದೆ’ ಎಂದರು.

ಜಾನಪದ ಕಲಾವಿದೆ ಸುಕ್ರಿ ಬೊಮ್ಮಗೌಡ ಮಾತನಾಡಿ, ‘ಕನ್ನಡದ ಮಣ್ಣನ್ನು ಮೆಟ್ಟಿ ನಿಂತವರು ಬೇರೆ ಭಾಷೆಯನ್ನೂ ಕಲಿಯಲಿ. ಆದರೆ, ಕರ್ನಾಟಕದಲ್ಲಿರುವಾಗ ಕನ್ನಡದಲ್ಲೇ ಮಾತನಾಡಬೇಕು. ಇತರ ಭಾಷೆಗಳನ್ನೂ ಇಂದಿನ ಅಗತ್ಯಕ್ಕೆ ಸರಿಯಾಗಿ ಕಲಿಯಬೇಕು. ಎಲ್ಲರೂ ಒಂದಾಗಿ ಬಾಳಬೇಕು’ ಎಂದು ಆಶಿಸಿದರು.

ರಾಜ್ಯದ ಮೊದಲ ಲೈಂಗಿಕ ಅಲ್ಪಸಂಖ್ಯಾತ ಸಿನಿಮಾ ನಟಿ ಕಾಜಲ್ ಮಾತನಾಡಿ, ‘ನಾವು ನಮ್ಮ ನೆಲದಲ್ಲಿ ಕನ್ನಡವನ್ನು ಬಿಟ್ಟುಕೊಡಬಾರದು. ಕನ್ನಡದ ಉತ್ಸವ ಒಂದು ದಿನಕ್ಕೆ ಸೀಮಿತವಾಗಬಾರದು. ಅದು ನಿರಂತರವಾಗಿರಲು ಮಕ್ಕಳಿಗೆ ಕಲಿಸಬೇಕು’ ಎಂದರು. 

ಕಾರವಾರಕ್ಕೇ ಸೀಮಿತವಾದ ಆಕಾಶವಾಣಿ: ಆಕಾಶವಾಣಿ ಕೇಂದ್ರವು ಜಿಲ್ಲೆಯನ್ನು ಪ್ರತಿನಿಧಿಸುವ ಮಾಧ್ಯಮ. ಅದನ್ನು ಕೇವಲ ಕಾರವಾರ, ಅಂಕೋಲಾಕ್ಕೆ ಸೀಮಿತಗೊಳಿಸಲಾಗಿದೆ. ಅದೆಷ್ಟೋ ಉತ್ತಮ ಕಾರ್ಯಕ್ರಮಗಳು ಬಿತ್ತರವಾದರೂ ಅವು ಇಡೀ ಜಿಲ್ಲೆಯ ಜನರಿಗೆ ತಲುಪುತ್ತಿಲ್ಲ. ಈ ಬಗ್ಗೆ ಚರ್ಚೆಯಾಗಬೇಕಿದೆ. ಶಾಸಕಿ ರೂಪಾಲಿ ನಾಯ್ಕ ಅವರು ಸಂಸದರ ಗಮನ ಸೆಳೆಯಬೇಕು ಎಂದು ಅರವಿಂದ ಕರ್ಕಿಕೋಡಿ ಮನವಿ ಮಾಡಿದರು.

‘ಕನ್ನಡದಲ್ಲಿ ಸಹಿ ಮಾಡುವ ಚಳವಳಿಯನ್ನು ಜಿಲ್ಲೆಯಲ್ಲಿ ಆರಂಭಿಸಲಾಗುವುದು. ಮಗುವನ್ನು ಕನ್ನಡ ಮಾಧ್ಯಮ ಶಾಲೆಗೇ ಸೇರಿಸಬೇಕು ಎಂದು ನವಜಾತ ಶಿಶುವಿನ ತಾಯಿಗೆ ಮನವಿ ಮಾಡುವ ಅಭಿಯಾನವನ್ನೂ ಶುರು ಮಾಡಲಿದ್ದೇವೆ’ ಎಂದು ತಿಳಿಸಿದರು.

ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ಶ್ರೀದೇವಿ ಭಟ್, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಶಾರದಾ ಭಟ್, ಹಳಿಯಾಳ, ಜೊಯಿಡಾ, ಮುಂಡಗೋಡ ತಾಲ್ಲೂಕು ಘಟಕಗಳ ಅಧ್ಯಕ್ಷರು, ಮುಖಂಡರಾದ ಗಣಪತಿ ಉಳ್ವೇಕರ್, ಅನು ಕಳಸ್, ಉಲ್ಲಾಸ್ ಪ್ರಭು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು