ಶುಕ್ರವಾರ, ಜೂಲೈ 10, 2020
24 °C

ಸತ್ಯವನ್ನು ಮಾತ್ರ ಬೋಧಿಸುವವನು ಗುರು: ಕವಿ ರಾಮಕೃಷ್ಣ ಗುಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಾರವಾರ: ‘ಗುರುವಾದವನು ಜಾತಿ, ಪಕ್ಷ ಭೇದ ಮಾಡದೇ ಎಲ್ಲ ಶಿಷ್ಯರಿಗೂ ಸಮಾನವಾದ ಬೋಧನೆ ಮಾಡುತ್ತಾನೆ. ಅವನು ಸತ್ಯವನ್ನು ಮಾತ್ರ ಕಲಿಸುತ್ತಾನೆ’ ಎಂದು ಹಿರಿಯ ಸಾಹಿತಿ ರಾಮಕೃಷ್ಣ ಗುಂದಿ ಹೇಳಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಬುಧವಾರ ಆಯೋಜಿಸಲಾದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಪ್ರಶ್ನೆಗಳನ್ನು ಕೇಳುವ ಮತ್ತು ಉತ್ತರಗಳನ್ನು ಹೇಳುವ ಕಾರಣದಿಂದಲೇ ಗುರು ಶಿಷ್ಯ ಪರಂಪರೆ ಹುಟ್ಟಿರಬೇಕು. ಪ್ರಾಥಮಿಕ ಮತ್ತು ಪ್ರೌಢ ಹಂತಗಳಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಸಿಕ್ಕಿದ ಉತ್ತರಗಳು ಅವರ ಮೇಲೆ ತುಂಬ ಪ್ರಭಾವ ಬೀರುತ್ತವೆ. ಹಾಗಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು ಎಂದು ಅಭಿಪ್ರಾಯಪಟ್ಟರು. 

ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ನಮ್ಮ ಎಲ್ಲ ಕಾರ್ಯಗಳಲ್ಲಿ ತಂದೆ ತಾಯಿಯರ ನೆನಪು ಶಾಶ್ವತವಾಗಿರುವಂತೆ ಶಿಕ್ಷಕರ ನೆನಪೂ ಅಮರ. ಮಕ್ಕಳು ಇಡೀ ದಿನ ಶಿಕ್ಷಕರ ಜತೆಗಿರುತ್ತಾರೆ. ಅವರು ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದನ್ನು ಪೋಷಕರಿಗಿಂತ ಚೆನ್ನಾಗಿ ಊಹಿಸಬಲ್ಲರು. ಆದ್ದರಿಂದ ಸಮಾಜದಲ್ಲಿ ಶಿಕ್ಷಕರ ಮಹತ್ವವನ್ನು ಕೇವಲ ಮಾತಿನಿಂದ ಹೇಳಲು ಸಾಧ್ಯವೇ ಇಲ್ಲ’ ಎಂದರು. 

‘ಗುರುವಿನದ್ದು ದೇವರ ಸ್ಥಾನ. ತಮ್ಮಲ್ಲಿರುವ ವಿದ್ಯೆಯನ್ನು ಮಕ್ಕಳಿಗೆ ಧಾರೆ ಎರೆದು ಬಾಳು ಬೆಳಗುತ್ತಾರೆ. ತಮ್ಮ ಬಳಿಯಿರುವ ಸರಸ್ವತಿಯನ್ನು ಎಲ್ಲರಿಗೂ ಸಮಾನವಾಗಿ ಪರಿಚಯಿಸುವ ನಿಮಗೆ ಅಭಿನಂದನೆಗಳು’ ಎಂದು ಮೆಚ್ಚುಗೆ ಸೂಚಿಸಿದರು. 

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಮಾತನಾಡಿ, ‘ನಾನು ಇವತ್ತು ಏನಾಗಿದ್ದೇನೋ ಅದು ನನ್ನ ಶಿಕ್ಷಕರಿಂದಾಗಿ ಸಾಧ್ಯವಾಗಿದೆ. ನಮ್ಮ ಯಶಸ್ಸಿನ ಹಿಂದೆ ಅವರ ಮಾರ್ಗದರ್ಶನವಿದೆ. ಹಾಗಾಗಿ ಅವರು ಹೇಳಿದ್ದನ್ನು ಕಣ್ಣುಮುಚ್ಚಿ ಕೇಳಿ. ಅವರು ಅತ್ಯುತ್ತಮ ಹಿತೈಶಿಗಳು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ನಾಯಕ ಮಾತನಾಡಿ, ‘ಕಾರವಾರ ತಾಲ್ಲೂಕಿನಲ್ಲಿ ಶಿಕ್ಷಕರು ‍ಪರಿಸರದ ಬಗ್ಗೆ ಅತೀವ ಕಾಳಜಿ ಹೊಂದಿದ್ದಾರೆ. ಈ ಸಂಬಂಧ ಮಕ್ಕಳೊಂದಿಗೆ ಕೂಡಿಕೊಂಡು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಶ್ಲಾಘಿಸಿದರು.

ಮಾಜಿ ಉಪ ರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ವೇದಿಕೆಯಲ್ಲಿದ್ದ ಗಣ್ಯರು ಪುಷ್ಪನಮನ ಸಲ್ಲಿಸಿದರು. ಈ ವರ್ಷ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ನಿವೃತ್ತರಾದ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಭಾರತೀಯ ರೈಲ್ವೆ ಇಲಾಖೆ ಅಧಿಕಾರಿ ಅಂಕಿತಾ, ತಾಲ್ಲೂಕು ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ತಾಲ್ಲೂಕು ಪಂಚಾಯ್ತಿ ಸದಸ್ಯ ಪ್ರಶಾಂತ್ ಗೋವೇಕರ್, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಕಾಶ್ ಗುನಗಿ, ಶಿಕ್ಷಕರ ಸಂಘದ ‍ಪದಾಧಿಕಾರಿಗಳಾದ ಜೈರಂಗನಾಥ್, ಆರ್.ಎಲ್.ನಾಯ್ಕ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು