ಭಾನುವಾರ, ಅಕ್ಟೋಬರ್ 20, 2019
22 °C
ಮುಂಡಗೋಡ– ಯಲ್ಲಾಪುರ ನಡುವಿನ ಸಂಪರ್ಕ ಸೇತುವೆ

ಶಿಡ್ಲಗುಂಡಿ ತಾತ್ಕಾಲಿಕ ರಸ್ತೆಯಲ್ಲಿ ಲಘು ವಾಹನ ಸಂಚಾರ

Published:
Updated:
Prajavani

ಮುಂಡಗೋಡ: ಯಲ್ಲಾಪುರದೊಂದಿಗೆ ತಾಲ್ಲೂಕಿಗೆ ಸಂಪರ್ಕ ಕಡಿತಗೊಂಡಿರುವ ಶಿಡ್ಲಗುಂಡಿ ಸೇತುವೆ ಪಕ್ಕದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ಅದರಲ್ಲಿ ಭಾನುವಾರದಿಂದ ಲಘು ವಾಹನಗಳು ಓಡಾಟ ನಡೆಸಿವೆ.

ಎರಡು ತಿಂಗಳ ಹಿಂದೆ ಸುರಿದ ಮಳೆಗೆ ಸೇತುವೆಯ ಸಂಪರ್ಕ ರಸ್ತೆ ಕೊಚ್ಚಿಕೊಂಡು ಹೋಗಿತ್ತು. ಇದರಿಂದ ಜನರು ಹಳ್ಳದಲ್ಲಿಯೇ ಇಳಿದು, ಸೇತುವೆ ಹತ್ತಿ ಆ ಕಡೆ ತಲುಪಬೇಕಿತ್ತು. ಹಳ್ಳದ ಎಡಭಾಗದಲ್ಲಿ ಸದ್ಯ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಲಾಗಿದ್ದು, ಬೈಕ್‌, ಕಾರು ಓಡಾಟ ನಡೆಸಿರುವುದು ಕಂಡುಬಂತು.

ಬಿಡುವು ನೀಡದ ಮಳೆಯು ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ತೊಂದರೆ ಉಂಟು ಮಾಡಿತ್ತು. ಕೆಲವು ದಿನಗಳ ಹಿಂದೆ ಹಳ್ಳದಲ್ಲಿ ಹೆಚ್ಚಿನ ನೀರು ಬಂದಿದ್ದರಿಂದ, ನಿರ್ಮಾಣ ಹಂತದ ರಸ್ತೆ ಸಹ ಕೊಚ್ಚಿಕೊಂಡು ಹೋಗಿತ್ತು. ಇದರಿಂದ ತಾತ್ಕಾಲಿಕ ಕಾಮಗಾರಿಗೆ ಮತ್ತೆ ಹಿನ್ನಡೆಯಾಗಿತ್ತು. ಈಗ ಶೇ 90ರಷ್ಟು ಕಾಮಗಾರಿ ಮುಗಿದಿದೆ.

‘ಹಳ್ಳದಲ್ಲಿ ಹೆಚ್ಚಿನ ನೀರು ಬಂದರೆ ರಸ್ತೆ ಮುಳುಗುತ್ತದೆ. ಹಾಕಿರುವ ಜಲ್ಲಿಕಲ್ಲು, ಮಣ್ಣು ಎಲ್ಲವೂ ಕೊಚ್ಚಿಕೊಂಡು ಹೋಗುವ ಸಾಧ್ಯತೆಯಿದೆ. ಭಾನುವಾರ ಬೆಳಗಿನ ಜಾವ ರಸ್ತೆ ಮುಳುಗುವಂತೆ ನೀರು ಹರಿಯತೊಡಗಿತ್ತು. ಕೆಲವೆಡೆ ಮಣ್ಣು ಕುಸಿತವಾಗಿದೆ’ ಎಂದು ಸ್ಥಳೀಯ ನಿವಾಸಿ ಸುಬ್ರಾಯ ಭಟ್ಟ ಹೇಳಿದರು.

‘ಮಳೆ ಬಿಡುವು ನೀಡಿದರೆ ಇನ್ನೊಂದು ಸಲ ರೋಲಿಂಗ್ ಮಾಡಬೇಕಾಗಿದೆ. ಹೆಚ್ಚು ಕಡಿಮೆ ಕಾಮಗಾರಿ ಮುಗಿದಂತಾಗಿದ್ದು, ಅಧಿಕೃತವಾಗಿ ವಾಹನಗಳ ಓಡಾಟಕ್ಕೆ ಅನುಮತಿ ನೀಡಿಲ್ಲ. ಹಳ್ಳದಲ್ಲಿ ನೀರು ಹೆಚ್ಚಿಗೆ ಬಂದು ರಸ್ತೆ ಮುಳುಗಿದರೂ, ನಂತರ ಇಳಿಮುಖವಾಗುತ್ತದೆ. ಮಳೆಗಾಲ ಮುಗಿಯುತ್ತ ಬಂದಿದ್ದು ಹೆಚ್ಚಿನ ಸಮಸ್ಯೆ ಆಗದು’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಆರ್‌.ದಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಿಡ್ಲಗುಂಡಿ ಸೇತುವೆ ಪುನರ್‌ ನಿರ್ಮಾಣಕ್ಕೆ ಈಗಾಗಲೇ ₹ 2.62 ಕೋಟಿ ಮಂಜೂರಾಗಿದೆ. ಇನ್ನೊಂದು ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿಯಲಿದ್ದು, ಮುಂದಿನ ವರ್ಷದ ಮಳೆಗಾಲಕ್ಕೂ ಮುನ್ನ ನಿರ್ಮಾಣ ಆಗುತ್ತದೆ’ ಎಂದರು.

Post Comments (+)