ಬಿಸಿಲಿನ ತಾಪಕ್ಕೆ ಏರಿದ ಎಳನೀರಿನ ದರ

ಶನಿವಾರ, ಏಪ್ರಿಲ್ 20, 2019
29 °C
ಪೂರೈಕೆ ಕಡಿಮೆ ಕಾರಣ; ನಗರದಲ್ಲಿ ₹ 40ಕ್ಕೆ ಮಾರಾಟ

ಬಿಸಿಲಿನ ತಾಪಕ್ಕೆ ಏರಿದ ಎಳನೀರಿನ ದರ

Published:
Updated:
Prajavani

ಕಾರವಾರ: ಬಿಸಿಲು ನೆತ್ತಿ ಸುಡುತ್ತಿದೆ. ಇತ್ತ ದಣಿವಾರಿಸಿಕೊಳ್ಳಲು ಎಳನೀರಿನ ಅಂಗಡಿಗೆ ತೆರಳಿದರೆ ಅದರ ದರ ಕೇಳಿಯೇ ಗ್ರಾಹಕರು ಹೌಹಾರುವಂತಾಗಿದೆ.

₹ 20ರಿಂದ ₹ 30ರ ಒಳಗೆ ಇಷ್ಟು ದಿನ ಮಾರಾಟವಾಗುತ್ತಿದ್ದ ಎಳನೀರು ವಾರದಿಂದ ದುಬಾರಿಯಾಗಿದೆ. ನಗರದ ಹಲವು ಎಳನೀರು ವ್ಯಾಪಾರಿಗಳು ₹ 40ಕ್ಕೆ ಮಾರಾಟ ಮಾಡುತ್ತಿದ್ದರೆ, ನಗರದಿಂದ ಸ್ವಲ್ಪ ದೂರದಲ್ಲಿ ₹ 45ಕ್ಕೆ ಏರಿಕೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ತುಮಕೂರು ಜಿಲ್ಲೆ, ಹಾಸನದ ಅರಸೀಕೆರೆ, ಮಂಗಳೂರು ಭಾಗಗಳಿಂದ ನಗರದ ವ್ಯಾಪಾರಿಗಳಿಗೆ ಎಳನೀರು ಪೂರೈಕೆ ಆಗುತ್ತದೆ. ಸ್ಥಳೀಯವಾಗಿ ಹೊನ್ನಾವರ, ಶಿರಸಿ ಭಾಗಗಳಿಂದಲೂ ಇಲ್ಲಿಗೆ ಬರುತ್ತವೆ. ಕಳೆದ ಬೇಸಿಗೆಯಲ್ಲಿ ಇದರ ದರ ₹ 15ರಿಂದ ₹ 30ರ ಆಸುಪಾಸು ಇತ್ತು. ಈ ಬಾರಿ ಬೇಸಿಗೆ ಮುನ್ನವೇ ₹ 25ರಿಂದ ₹ 30ಕ್ಕೆ ನಗರದಲ್ಲಿ ಮಾರಾಟ ಶುರುವಾಗಿತ್ತು. ಇದೀಗ ಈ ದರದಲ್ಲೂ ಏರಿಕೆ ಕಂಡಿರುವುದು ಗ್ರಾಹಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲ ಅನುಭವ ಆದಂತಿದೆ.

ಯಾಕೆ ಹೆಚ್ಚಳ: ‘ಸಾಮಾನ್ಯವಾಗಿ ಮಧ್ಯವರ್ತಿಗಳು ಬೆಲೆ ಹೆಚ್ಚಿಸುವುದರಿಂದ ಇಷ್ಟು ವರ್ಷ ಎಳನೀರಿನ ಬೆಲೆ ವರ್ಷಕ್ಕೆ ಒಮ್ಮೆ ಹೆಚ್ಚಳ ಆಗುತ್ತಿತ್ತು. ಆದರೆ, ಈ ಬಾರಿ ಬರ, ತೆಂಗು ಬೆಳೆ ನಷ್ಟ, ಪೂರೈಕೆಯಲ್ಲಿ ಕೊರತೆ ಉಂಟಾಗಿರುವುದರಿಂದ ಈವರೆಗೆ ಎರಡು ಬಾರಿ ಬೆಲೆ ಹೆಚ್ಚಳ ಆಗಿದೆ’ ಎನ್ನುತ್ತಾರೆ ನಗರದ ಎಳನೀರು ವ್ಯಾಪಾರಿಗಳು.

‘ಬೆಳೆಗಾರರು ಒಂದು ಎಳನೀರನ್ನು ₹ 20ರಂತೆ ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಾರೆ. ಆದರೆ, ಇಲ್ಲಿಗೆ ಬರುವಾಗ ಅವರ ಸಾಗಾಣಿಕೆ ವೆಚ್ಚ, ಕೂಲಿಕಾರರ ವೇತನ ಸೇರಿ ₹ 28ಕ್ಕೆ ಬರುತ್ತದೆ. ಅದು ಕೂಡ ಎಳನೀರು ಸಿಗುವುದೂ ಈಗ ಕಡಿಮೆ ಆಗಿದೆ. ನಗರಕ್ಕೆ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಹೀಗಾಗಿ, ನಮ್ಮ ವ್ಯಾಪಾರ ದೃಷ್ಟಿಯಿಂದ ದರ ಹೆಚ್ಚಳ ಮಾಡಿ ಮಾರುವುದೂ ಅನಿವಾರ್ಯವಾಗಿದೆ. ಈಗ ಒಂದೆರಡು ತಿಂಗಳಷ್ಟೇ ಎಳನೀರು ವ್ಯಾಪಾರ ಇರುವುದರಿಂದ ದುಬಾರಿ ಬೆಲೆ ಮಾರಾಟ ಮಾಡಲೇಬೇಕಿದೆ’ ಎನ್ನುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !