ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆರೇಸ್‌ನಲ್ಲಿ ತರಕಾರಿ ಕೃಷಿ

ಶುದ್ಧ ಸಾವಯವ ತರಕಾರಿ ಬೆಳೆಸುತ್ತಿರುವ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು
Last Updated 17 ಜೂನ್ 2019, 16:48 IST
ಅಕ್ಷರ ಗಾತ್ರ

ಶಿರಸಿ: ರಾಸಾಯನಿಕರಹಿತ ತರಕಾರಿ ಬೆಳೆಯನ್ನು ಮನೆಯ ಟೆರೇಸ್ ಮೇಲೆ ಸುಲಭವಾಗಿ ಬೆಳೆಸಬಹುದಾದ ಮಾದರಿಯನ್ನು ಇಲ್ಲಿನ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ನಗರವಾಸಿಗಳಿಗೆ ಪರಿಚಯಿಸುತ್ತಿದ್ದಾರೆ. ಕಾಲೇಜಿನ ವಾಚನಾಲಯದ ಮೇಲ್ಭಾಗದ ಟೆರೇಸ್‌ನಲ್ಲಿ ವೈವಿಧ್ಯಮಯ ತರಕಾರಿ ಗಿಡಗಳನ್ನು ಬೆಳೆಸಿದ್ದಾರೆ.

ತರಕಾರಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಶಿವಾನಂದ ಹೊಂಗಲ್ ಮಾರ್ಗದರ್ಶನದಲ್ಲಿ ಸುಮಾರು 60 ವಿದ್ಯಾರ್ಥಿಗಳು ಸೇರಿ, ಚೀಲದಲ್ಲಿ ಸೌತೆ, ಹೀರೆ, ಹಾಗಲಕಾಯಿ ಬಳ್ಳಿಗಳು, ಹರಿವೆ, ಕೊತ್ತಂಬರಿ, ಸಬ್ಬಸಿಗೆ, ಮೆಂತೆ, ಪಾಲಕ್ ಮೊದಲಾದ ಸೊಪ್ಪು, ಟೊಮೆಟೊ, ಬದನೆಕಾಯಿ, ಡೊಳ್ಳಮೆಣಸು, ಮೂರ್ನಾಲ್ಕು ಬಗೆಯ ಬೀನ್ಸ್ ನಾಟಿ ಮಾಡಿದ್ದಾರೆ.

ಬೆಳೆಸುವುದು ಹೇಗೆ ?:

’ತರಕಾರಿಗೆ ಕೀಟ, ರೋಗಬಾಧೆ ಬರದಂತೆ ಔಷಧ ಸಿಂಪರಣೆ ಮಾಡುವುದರಿಂದ ಅದನ್ನು ತಿನ್ನುವ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕ್ಯಾನ್ಸರ್‌ನಂತಹ ಕಾಯಿಲೆ ಬರುವ ಪ್ರಕರಣಗಳು ಹೆಚ್ಚುತ್ತಿವೆ. ಜನರು ಜಾಗೃತರಾಗಿರುವುದರಿಂದ ಸಾವಯವ ತರಕಾರಿಯನ್ನು ಹುಡುಕುತ್ತಾರೆ. ಇದಕ್ಕಾಗಿ ಅಲೆದಾಡುವುದಕ್ಕಿಂತ ಜಾಗ ಇದ್ದವರು ಹಿತ್ತಲಿನಲ್ಲಿ, ಜಾಗ ಇಲ್ಲದವರು ಟೆರೇಸ್ ಮೇಲೆ ತರಕಾರಿ ಬೆಳೆದುಕೊಳ್ಳಬಹುದು’ ಎನ್ನುತ್ತಾರೆ ಪ್ರೊ. ಶಿವಾನಂದ ಹೊಂಗಲ್.

‘ಟೆರೇಸ್ ಮೇಲೆ ತರಕಾರಿ ಬೆಳೆಸುವಾಗ ನೆಲ ವಾಟರ್‌ಪ್ರೂಫ್ ಇರಬೇಕು, ಇಲ್ಲದಿದ್ದಲ್ಲಿ ದಪ್ಪ ಪ್ಲಾಸ್ಟಿಕ್ ಚೀಲ ಹಾಸಬೇಕು. ಗ್ರೊ ಬ್ಯಾಗ್‌, ಹಾಳದ ಬಕೆಟ್, ಪೇಂಟ್ ಡಬ್ಬ, ಸಿಮೆಂಟ್ ಚೀಲ, ಸಣ್ಣ ಟ್ರೇಗಳಲ್ಲೂ ತರಕಾರಿ ಬೆಳೆಸಬಹುದು.ಗ್ರೊ ಬ್ಯಾಗ್‌ ಸ್ವಲ್ಪ ವೆಚ್ಚದಾಯಕ. ಬೇರು ಆಳವಾಗಿ ಹೋಗುವ ಗಿಡಗಳನ್ನು ದೊಡ್ಡ, ಮಧ್ಯಮ ಗಾತ್ರದ ಚೀಲಗಳಲ್ಲಿ ಬೆಳೆಸಿದರೆ, ಸಣ್ಣ ಟ್ರೇಗಳಲ್ಲಿ ಸೊಪ್ಪು ಬೆಳೆಯಬಹುದು. ಇದರಿಂದ ವೆಚ್ಚ ತಗ್ಗುತ್ತದೆ. ಈ ಮಾದರಿಯ ಬೆಳೆಗೆ ಕಡಿಮೆ ನೀರು ಸಾಕು. ಕಟ್ಟಡದ ಮೇಲೆ ಭಾರ ಬೀಳುವ ಕಾರಣ ಮಣ್ಣಿನ ಬದಲಾಗಿ, ತೆಂಗಿನ ನಾರಿನ ಪುಡಿಯನ್ನು ಬಳಕೆ ಮಾಡಬೇಕು’ ಎಂಬುದು ಅವರ ಸಲಹೆ.

‘ತೆಂಗಿನ ನಾರಿನ ಪುಡಿ ತೇವಾಂಶ ಉಳಿಸಿಕೊಳ್ಳುತ್ತದೆ. ಆದರೆ, ಇದರಲ್ಲಿ ಯಾವುದೇ ಸತ್ವ ಇರುವುದಿಲ್ಲ. ಹೀಗಾಗಿ ಹೊರಗಿನ ಗೊಬ್ಬರ ಹಾಕಬೇಕಾಗುತ್ತದೆ. ಮಲೆನಾಡಿನಲ್ಲಿ ನಿರಂತರ ರಭಸದ ಮಳೆಯಾಗುತ್ತಿದ್ದರೆ, ಮಳೆಗಾಲದಲ್ಲಿ ತರಕಾರಿ ಗಿಡಗಳು ಕೊಳೆತು ಹೋಗುತ್ತವೆ. ತೆರೆದ ಟೆರೇಸ್‌ನಲ್ಲಿ ಮಳೆಗಾಲದಲ್ಲಿ ಸೌತೆ, ಕುಂಬಳ ಬಳ್ಳಿ ನಾಟಿ ಮಾಡಬಹುದು. ಟೆರೇಸಿಗೆ ಚಾವಣಿ ಇದ್ದರೆ, ಮಳೆಗಾಲದಲ್ಲೂ ತರಕಾರಿ ಬೆಳೆದುಕೊಳ್ಳಬಹುದು’ ಎಂದು ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT