ಕಾರವಾರ: ಬಿತ್ತನೆ ಪ್ರದೇಶ ಹೆಚ್ಚಿಸಲು ಕ್ರಮಕ್ಕೆ ಸೂಚನೆ

ಕಾರವಾರ: ‘ತಾಲ್ಲೂಕಿನಲ್ಲಿ ಭತ್ತದ ಬಿತ್ತನೆ ಪ್ರದೇಶವನ್ನು ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಬೇಕು. ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಇಳಿಯುತ್ತಿರುವ ವ್ಯವಸಾಯ ಪ್ರದೇಶವನ್ನು ಪುನರುಜ್ಜೀವನಗೊಳಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಸೋಮಶೇಖರ ಮೇಸ್ತ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ವಿವಿಧ ಇಲಾಖೆಗಳ ಮಾಹಿತಿ ಪಡೆದುಕೊಂಡರು. ಜನಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯವಾದ ಬಳಿಕ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಅವರು ಮೊದಲ ಸಭೆ ನಡೆಸಿದರು.
ಕೃಷಿ ಅಧಿಕಾರಿ ಜಿ.ಎನ್.ಗುಡಿಗಾರ್ ಇಲಾಖೆಯ ಮಾಹಿತಿ ನೀಡಿ, ‘ಈ ಬಾರಿ ವಾಡಿಕೆಗಿಂತ 44.8 ಸೆಂಟಿಮೀಟರ್‌ಗಳಷ್ಟು ಹೆಚ್ಚು ಮಳೆಯಾಗಿದೆ. ಒಂದು ವಾರದಿಂದ ಜೋರಾಗಿ ಬೀಳದಿದ್ದರೂ ಆಗಾಗ ಸಾಧಾರಣ ಮಳೆಯಾಗುತ್ತಿರುವುದು ಕೃಷಿಗೆ ಅನುಕೂಲವಾಗಿದೆ. ಈ ವರ್ಷ ತಾಲ್ಲೂಕಿನಲ್ಲಿ 1,200 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸೋಮಶೇಖರ, ‘2000ನೇ ಇಸವಿಯಲ್ಲಿ ಕಾರವಾರ ತಾಲ್ಲೂಕಿನಲ್ಲಿ 10 ಸಾವಿರ ಹೆಕ್ಟೇರ್ ವ್ಯವಸಾಯವಿತ್ತು. 2021ಕ್ಕೆ 1,200ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷದ ಸಾಧನೆಯನ್ನೇ ಈ ವರ್ಷದ ಗುರಿಯನ್ನಾಗಿ ಗುರುತು ಮಾಡುತ್ತೀರಿ. ಯಾಕೆ ಹೀಗೆ’ ಎಂದು ಪ್ರಶ್ನಿಸಿದರು.
ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ಅಧಿಕಾರಿ ಜ್ಯೋತಿ ನಾಗೇಕರ ಮಾತನಾಡಿ, ‘ತಾಲ್ಲೂಕಿನಲ್ಲಿ ಮಾತೃವಂದನಾ ಯೋಜನೆಯಡಿ ಈವರೆಗೆ 7,689 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ತಾಲ್ಲೂಕಿನಲ್ಲಿ ತೀವ್ರ ಅಪೌಷ್ಟಿಕತೆ ಇರುವ 13 ಮಕ್ಕಳು ಹಾಗೂ ಮಧ್ಯಮ ಪ್ರಮಾಣದ ಅಪೌಷ್ಟಿಕತೆ ಇರುವ 154 ಮಕ್ಕಳನ್ನು ಗುರುತಿಸಲಾಗಿದೆ. ಅವರಿಗೆ ಸರ್ಕಾರದಿಂದ ನೀಡಲಾಗುವ ಪೌಷ್ಟಿಕ ಆಹಾರಗಳನ್ನು ಪೂರೈಕೆ ಮಾಡಲಾಗುತ್ತಿದೆ’ ಎಂದರು.
56 ಮಾರ್ಗದಲ್ಲಿ ಸಂಚಾರ:
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿ, ‘ಕೋವಿಡ್‌ಗೂ ಮೊದಲು ಕಾರವಾರ ಘಟಕದಿಂದ 75 ಬಸ್ ಮಾರ್ಗಗಳಿದ್ದವು. ಅನ್‌ಲಾಕ್ ಶುರುವಾದ ಬಳಿಕ ಸದ್ಯ 56 ಮಾರ್ಗಗಳಲ್ಲಿ ಬಸ್‌ಗಳ ಸಂಚಾರ ಶುರುವಾಗಿದೆ. ಸ್ಥಳೀಯ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿರುವ ಕಾರಣ ಸದ್ಯಕ್ಕೆ ಹೆಚ್ಚು ಬಸ್‌ಗಳು ಸಂಚರಿಸುತ್ತಿಲ್ಲ. ಜನರ ಬೇಡಿಕೆ ಆಧರಿಸಿ ಮುಂದೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.