ಭಾನುವಾರ, ಫೆಬ್ರವರಿ 28, 2021
20 °C
ಗೋ ಸೇವಾ ಆಯೋಗ ರಚನೆ ಸಂಬಂಧ ಸರ್ಕಾರಕ್ಕೆ ವರದಿ: ಸಚಿವ ಪ್ರಭು ಚವ್ಹಾಣ್

ಪ್ರತಿ ತಾಲ್ಲೂಕಿನಲ್ಲಿ ಎರಡು ಗೋಶಾಲೆ: ಸಚಿವ ಪ್ರಭು ಚವ್ಹಾಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಪ್ರತಿ ತಾಲ್ಲೂಕಿನಲ್ಲಿ ತಲಾ ಎರಡು ಗೋಶಾಲೆಗಳನ್ನು ಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ. ಗೋ ಸೇವಾ ಆಯೋಗ ರಚಿಸಲೂ ಸರ್ಕಾರಕ್ಕೆ ವರದಿ ನೀಡಲಾಗಿದೆ’ ಎಂದು ಪಶುಸಂಗೋಪನೆ ಖಾತೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಇಲಾಖಾ ಪ್ರಗತಿ ಪರಿಶೀಲನೆಯ ಬಳಿಕ
ಸುದ್ದಿಗಾರರೊಂದಿಗೆ ಮಾತನಾಡಿದರು.

‘ಹಸುಗಳನ್ನು ಕಸಾಯಿಖಾನೆಗೆ ಸಾಗಿಸಿದರೆ ಪೊಲೀಸ್ ಇಲಾಖೆಗೆ ರೈತರು ಮಾಹಿತಿ ನೀಡಬೇಕು. ಗೋ ಹತ್ಯೆ ನಿಷೇಧ ಕಾಯ್ದೆಯಡಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಈ ಪ‍್ರಕರಣಗಳ ನಿರ್ವಹಣೆಗೆಂದೇ ವಿಶೇಷ ನ್ಯಾಯಾಲಯ, ಜೈಲು ಹಾಗೂ ನಿಯಂತ್ರಣ ಕೊಠಡಿ ಸ್ಥಾಪನೆಗೂ ಚಿಂತನೆ ನಡೆಸಲಾಗಿದೆ. ಮನೆಯಲ್ಲಿರುವ ನಿರುಪಯುಕ್ತ ಹಸು, ಗಂಡು ಕರುಗಳನ್ನು ಗೋಶಾಲೆಯಲ್ಲೇ ಬಿಡಬೇಕು. ಎಲ್ಲ ಹಸುಗಳಿಗೂ ಕಿವಿಯೋಲೆ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದೂ ಹೇಳಿದರು.

ಹುದ್ದೆ ಭರ್ತಿಗೆ ಪ್ರಯತ್ನ: ‘ಪಶುಸಂಗೋಪನೆ ಇಲಾಖೆಯಲ್ಲಿ 20 ವರ್ಷಗಳಿಂದ ಹಲವು ಹುದ್ದೆಗಳು ಖಾಲಿ ಇವೆ. ಉತ್ತರ ಕನ್ನಡದಲ್ಲಿ ಶೇ 60ರಷ್ಟು ಹುದ್ದೆಗಳು ಸೇರಿದಂತೆ ರಾಜ್ಯದಾದ್ಯಂತ ಸುಮಾರು 9,000 ಹುದ್ದೆಗಳು ಭರ್ತಿಯಾಗಬೇಕಿವೆ. ನೇಮಕಾತಿ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಸದ್ಯ ಕೋವಿಡ್ ಕಾರಣದಿಂದ ಸರ್ಕಾರದ ಬೊಕ್ಕಸ ತೊಂದರೆಯಲ್ಲಿದೆ. ಮುಂದೆ ಭರ್ತಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ರಾಜ್ಯದಲ್ಲಿ ಈವರೆಗೆ ಹಕ್ಕಿ ಮತ್ತು ಹಂದಿ ಜ್ವರದ ವರದಿಯಾಗಿಲ್ಲ. ಮುಂದೆ ಕಾಣಿಸಿಕೊಂಡರೆ ನಿಯಂತ್ರಿಸಲು ಇಲಾಖೆಯು ಈಗಾಗಲೇ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯದಲ್ಲಿ ಲಂಪಿಸ್ಕಿನ್ ಸೋಂಕು ನಿಯಂತ್ರಣದಲ್ಲಿದೆ. ಕಾಲುಬಾಯಿ ರೋಗಕ್ಕೆ ಸಂಬಂಧಿಸಿದಂತೆ 1.15 ಕೋಟಿ ಜಾನುವಾರಿಗೆ ಲಸಿಕೆ ನೀಡಲಾಗಿದೆ. ಪ್ರಾಣಿಗಳ ಚಿಕಿತ್ಸೆಗಾಗಿ 15 ಜಿಲ್ಲೆಗಳಿಗೆ ಆಂಬುಲೆನ್ಸ್‌ಗಳನ್ನು ಕೊಡಲಾಗಿದೆ. 15 ಜಿಲ್ಲೆಗಳಿಗೆ ಕೊಡಬೇಕಿದೆ. ರೈತರು ಸಹಾಯವಾಣಿ ಸಂಖ್ಯೆ ‘1962’ಕ್ಕೆ ಕರೆ ಮಾಡಿ ಸೇವೆ ಪಡೆಯಬಹುದು’ ಎಂದು ಮಾಹಿತಿ ನೀಡಿದರು.

‘ದಿನಚರಿ ತಿಳಿಸಬೇಕು’:

‘ಇಲಾಖೆಯ ಅಧಿಕಾರಿಗಳು ದಿನವೂ ತಮ್ಮ ಕೆಲಸದ ಮಾಹಿತಿಯನ್ನು ವಾಟ್ಸ್‌ಆ್ಯಪ್ ಮೂಲಕ ತಿಳಿಸಬೇಕು. ಭೇಟಿ ಕೊಟ್ಟ ಸ್ಥಳ, ಅಲ್ಲಿನ ಕೆಲಸದ ವಿಚಾರಗಳನ್ನು ತಿಳಿಸಬೇಕು ಎಂದು ನಿರ್ದೇಶನ ನೀಡಲಾಗಿದೆ’ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದರು.

‘ಉತ್ತರ ಕನ್ನಡದಲ್ಲಿ ಹಸು, ಕರುವನ್ನು ರಸ್ತೆಗೆ ಬಿಡುತ್ತಿರುವ ಮಾಹಿತಿಯಿದೆ. ಇದರಿಂದ ಅವುಗಳ ಕಳವಾಗುವ ಸಾಧ್ಯತೆ ಜಾಸ್ತಿಯಿದೆ. ಆದ್ದರಿಂದ ಇನ್ನು ಮುಂದೆ ಬೀಡಾಡಿ ದಿನಗಳನ್ನು ಗೋಶಾಲೆಗೆ ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ಜಿಲ್ಲಾದಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ  ಎಚ್.ಕೆ.ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ನಂದಕುಮಾರ ಪೈ ಹಾಗೂ ವಿವಿಧ ಅಧಿಕಾರಿಗಳು ಇದ್ದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧದಿಂದ ಗೋವಾದಲ್ಲಿ ಗೋಮಾಂಸದ ಕೊರತೆಯಾಗಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಹೇಳಿದ್ದು ಗಮನಕ್ಕೆ ಬಂದಿಲ್ಲ. ನಮ್ಮೊಂದಿಗೆ ಚರ್ಚಿಸಿಲ್ಲ.

– ಪ್ರಭು ಬಿ.ಚವ್ಹಾಣ್, ಪಶುಸಂಗೋಪನೆ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು