ಶಿರಸಿ: ಹೊಸವರ್ಷ ಸ್ವಾಗತಕ್ಕೆ ಭರದ ಸಿದ್ಧತೆ; ಕೇಸರಿ ಬಾವುಟದೊಂದಿಗೆ ಬೈಕ್ ರ್‍ಯಾಲಿ

ಶುಕ್ರವಾರ, ಏಪ್ರಿಲ್ 26, 2019
36 °C

ಶಿರಸಿ: ಹೊಸವರ್ಷ ಸ್ವಾಗತಕ್ಕೆ ಭರದ ಸಿದ್ಧತೆ; ಕೇಸರಿ ಬಾವುಟದೊಂದಿಗೆ ಬೈಕ್ ರ್‍ಯಾಲಿ

Published:
Updated:
Prajavani

ಶಿರಸಿ: ಎರಡು ದಶಕಗಳಿಂದ ನಗರದಲ್ಲಿ ಸಾಮೂಹಿಕ ಉತ್ಸವ ಆಚರಿಸುವ ಮೂಲಕ ಹಿಂದುಗಳ ಹೊಸವರ್ಷ ಯುಗಾದಿಯನ್ನು ಸ್ವಾಗತಿಸುವ ಪದ್ಧತಿ ಬೆಳೆದುಬಂದಿದೆ. ಈ ವರ್ಷ ಸಹ ಹೊಸವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಯುಗಾದಿ ಉತ್ಸವ ಸಮಿತಿ ಭರದ ಸಿದ್ಧತೆ ಮಾಡಿಕೊಂಡಿದೆ.

ಉತ್ಸವದ ಬಗ್ಗೆ ಜನಜಾಗೃತಿ ಮೂಡಿಸಲು ಶುಕ್ರವಾರ ನಗರದಲ್ಲಿ ಬೃಹತ್ ಬೈಕ್ ರ್‍ಯಾಲಿ ನಡೆಯಿತು. ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದ ನಂತರ ಆರಂಭವಾದ ರ್‍ಯಾಲಿಯು, ರಾಮನಬೈಲ್, ಕೋಟೆಕೆರೆ, ಕಸ್ತೂರಬಾ ನಗರ, ವಿವೇಕಾನಂದ ನಗರ, ಮರಾಠಿಕೊಪ್ಪ, ಗಣೇಶನಗರದಲ್ಲಿ ಸಂಚರಿಸಿ, ಶಿವಾಜಿ ಚೌಕದಲ್ಲಿ ಸಮಾಪ್ತಿಗೊಂಡಿತು. ರ್‍ಯಾಲಿಯಲ್ಲಿ 200ರಷ್ಟು ಮಹಿಳೆಯರು, ಸಾವಿರಾರು ಪುರುಷರು ಭಾಗವಹಿಸಿದ್ದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಮುಖರಾದ ಗೋಪಾಲ ದೇವಾಡಿಗ, ಉಪೇಂದ್ರ ಪೈ, ಸವಿತಾ ಐತಾಳ, ನಂದನ್ ಸಾಗರ್, ಪ್ರಕಾಶ್ ಸಾಲೇರ್, ರಿತೇಶ ಕೆ, ಮೋಹನಲಾಲ್ ನೇತೃತ್ವ ವಹಿಸಿದ್ದರು.

ಕೇಸರಿ ಪತಾಕೆ

ಉತ್ಸವದ ಅಂಗವಾಗಿ ನಗರದ ಎಲ್ಲ ವೃತ್ತಗಳು ಕೇಸರಿ ಪತಾಕೆಯಿಂದ ಕಂಗೊಳಿಸುತ್ತಿವೆ. ಏ.6ರ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಮನೆಯಲ್ಲಿ ಹಬ್ಬ ಆಚರಿಸುವ ಜನರು, ಸಂಜೆ 6 ಗಂಟೆಗೆ ವಿಕಾಸಾಶ್ರಮ ಮೈದಾನದಲ್ಲಿ ಒಟ್ಟಿಗೆ ಸೇರಿ, ಸಾಮೂಹಿಕ ಹಬ್ಬ ಆಚರಿಸಲಿದ್ದಾರೆ. ‘ರಾಮಕಥಾ, ದುರ್ಗಾದೇವಿ, ಶಿವಾಜಿ ಸೇರಿದಂತೆ ಪೌರಾಣಿಕ ಕಥಾ ಹಿನ್ನೆಲೆಯ 25ಕ್ಕೂ ಹೆಚ್ಚು ಬಂಡಿಚಿತ್ರ, ಡೊಳ್ಳುಕುಣಿತದೊಂದಿಗೆ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ ಶೋಭಾಯಾತ್ರೆಯ ನೇತೃತ್ವ ವಹಿಸಲಿದ್ದಾರೆ’ ಎಂದು ಸಮಿತಿಯ ಸಂಚಾಲಕ ಗೋಪಾಲ ದೇವಾಡಿಗ ತಿಳಿಸಿದರು.

‘6 ಗಂಟೆಗೆ ವಿಕಾಸಾಶ್ರಮ ಮೈದಾನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡುವರು. 7 ಗಂಟೆಗೆ ಶೋಭಾಯಾತ್ರೆಯು ಅಶ್ವಿನಿ ವೃತ್ತ, ಹೊಸಪೇಟೆ ರಸ್ತೆ, ದೇವಿಕೆರೆ, ಹಳೇ ಬಸ್‌ನಿಲ್ದಾಣ ಮಾರ್ಗವಾಗಿ ಮಾರಿಗುಡಿ ತಲುಪಿ, ಅಲ್ಲಿ ಸಮಾಪ್ತಿಗೊಳ್ಳಲಿದೆ. 5000ಕ್ಕೂ ಹೆಚ್ಚು ಮಾತೆಯರು ಭಾಗವಹಿಸುತ್ತಾರೆ. ಶೋಭಾಯಾತ್ರೆಯ ಮಾರ್ಗದುದ್ದಕ್ಕೂ ಬೇವು–ಬೆಲ್ಲ ವಿತರಣೆ ಮಾಡಲಾಗುತ್ತದೆ. 25ಸಾವಿರ ಜನರು ಸೇರುವ ನಿರೀಕ್ಷೆಯಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !