ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪದ್ಮಶ್ರೀ’ ಪುರಸ್ಕೃತೆ ತುಳಸಿ ಗೌಡಗೆ ಜಿಲ್ಲಾಡಳಿತದಿಂದ ಸನ್ಮಾನ

Last Updated 15 ನವೆಂಬರ್ 2021, 14:20 IST
ಅಕ್ಷರ ಗಾತ್ರ

ಕಾರವಾರ: ‘ಆಸೆ, ಆಕಾಂಕ್ಷೆಗಳಿಲ್ಲದೇ ಪರಿಪೂರ್ಣ ಮನಸ್ಸಿನಿಂದ ಪರಿಸರ ಸೇವೆ ಮಾಡಿದವರು ತುಳಸಿ ಗೌಡ ಅವರು. ಹಲವರು ಯಾವುದೇ ಕೆಲಸ ಮಾಡುವಾಗ ತಮಗೇನು ಪ್ರಯೋಜನ ಎಂದು ನೋಡುತ್ತಾರೆ. ಇದು ಸರಿಯಲ್ಲ. ನಿಸ್ವಾರ್ಥದಿಂದ ಮಾಡಿದ ಸೇವೆಯು ಫಲ ನೀಡುತ್ತದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ, ‘ಪದ್ಮಶ್ರೀ’ ಪುರಸ್ಕೃತ ತುಳಸಿ ಗೌಡ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಿ ಅವರು ಮಾತನಾಡಿದರು.

‘ತುಳಸಿ ಅವರ ಬಳಿ ಪರಿಸರದ ಬಗ್ಗೆ 40ಕ್ಕೂ ಅಧಿಕ ವರ್ಷಗಳ ಅನುಭವವಿದೆ. ಇವರ ಕೆಲಸಗಳು ನಮಗೆಲ್ಲ ಆದರ್ಶ’ ಎಂದೂ ಅವರು ಹೇಳಿದರು.

ಸನ್ಮಾನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತುಳಸಿ ಗೌಡ, ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಸಹಕಾರವನ್ನು ಸ್ಮರಿಸಿದರು. ಅಲ್ಲದೇ ಗಿಡಗಳನ್ನು ಉಳಿಸಿ, ಬೆಳೆಸಬೇಕು ಎಂದರು.

ಮೂರು‌ ಬೇಡಿಕೆ:

ತಮಗೊಂದು ಮನೆ ಹಾಗೂ ಬಾವಿ ನಿರ್ಮಿಸಿಕೊಡಬೇಕು, ತಮ್ಮ ಮೊಮ್ಮಗನಿಗೆ ಉದ್ಯೋಗ ಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದ್ಮಶ್ರೀ ಪುರಸ್ಕಾರ ಸ್ವೀಕರಿಸಲು ದೆಹಲಿ ಪ್ರಯಾಣದ ಅನುಭವವನ್ನು ಹಂಚಿಕೊಂಡರು.

‘ಪುರಸ್ಕಾರ ಸ್ವೀಕರಿಸಿದ್ದು ಸಂತಸವಾಗಿದೆ. ರಾಷ್ಟ್ರಪತಿ, ಪ್ರಧಾನಿ ಮುಂತಾದವರನ್ನು ಭೇಟಿ ಮಾಡಿ ಕನ್ನಡದಲ್ಲೇ ಮಾತನಾಡಿದೆ. ಅವರ ಭಾಷೆ ನನಗೆ ಅರ್ಥವಾಗಲಿಲ್ಲ. ನಾನು ನಮಸ್ಕಾರ ಎಂದಾಗ ಮೋದಿಯವರು ನಮಸ್ಕಾರ ಎಂದರು’ ಎಂದು ಮುಗುಳ್ನಕ್ಕರು.

ಅವರು ಪುರಸ್ಕಾರ ಸ್ವೀಕಾರ ಸಮಾರಂಭಕ್ಕೂ ಪಾದರಕ್ಷೆ ಧರಿಸದೇ ಹೋದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿತ್ತು. ಈ ಬಗ್ಗೆ ಕೇಳಿದಾಗ, ‘ನಾನು ಎಂದೂ ಚಪ್ಪಲಿ ಧರಿಸಿಲ್ಲ. ಕಾಡಿನಲ್ಲೂ, ಊರಿನಲ್ಲೂ ಎಲ್ಲೂ ಹಾಕಿ ರೂಢಿಯೇ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಗಣಪತಿ, ಉಪ ವಿಭಾಗಾಧಿಕಾರಿಗಳಾದ ವಿದ್ಯಾಶ್ರೀ ಚಂದರಗಿ, ಭಟ್ಕಳ ಮಮತಾ ದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT