ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ ನಗರದಲ್ಲೇ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಸಾಧ್ಯತೆ

ಅಂತರ್ಗತ ವಿದ್ಯುತ್ ಸಂಪರ್ಕಕ್ಕೆ ಪ್ರಸ್ತಾವ
Last Updated 23 ಸೆಪ್ಟೆಂಬರ್ 2022, 4:44 IST
ಅಕ್ಷರ ಗಾತ್ರ

ಶಿರಸಿ: ಸಾಗರಮಾಲಾ ಯೋಜನೆ ಅಡಿ ಕೈಗೆತ್ತಿಕೊಂಡಿರುವ ಕುಮಟಾ–ಶಿರಸಿ–ಹಾವೇರಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಯೋಜನೆ ಪ್ರಗತಿಯಲ್ಲಿದೆ. ಶಿರಸಿ ನಗರದ ಮೂಲಕವೇ ಹೆದ್ದಾರಿ ಹಾದು ಹೋಗುವ ಸಾಧ್ಯತೆ ದಟ್ಟವಾಗಿದ್ದು ಅಂತರ್ಗತ ವಿದ್ಯುತ್ ಸಂಪರ್ಕದ (ಅಂಡರಗ್ರೌಂಡ್ ಕರೆಂಟ್) ಪ್ರಸ್ತಾವ ಸಿದ್ಧಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂತರ್ಗತ ವಿದ್ಯುತ್ ಸಂಪರ್ಕಕ್ಕೆ ತಗಲುವ ಅಂದಾಜು ವೆಚ್ಚ ಸಿದ್ಧಪಡಿಸಲು ಆರು ತಿಂಗಳ ಹಿಂದೆ ಹೆಸ್ಕಾಂಗೆ ಪತ್ರ ಬರೆದಿತ್ತು. ಪ್ರಾಧಿಕಾರದ ಮನವಿಯ ಮೇರೆಗೆ ಹೆಸ್ಕಾಂ ಶಿರಸಿ ವಿಭಾಗ ಅಂದಾಜು ಐದು ಕಿ.ಮೀ. ದೂರ ನೆಲದೊಳಗೆ ವಿದ್ಯುತ್ ಕೇಬಲ್ ಅಳವಡಿಕೆಗೆ ₹ 10.50 ಕೋಟಿ ವೆಚ್ಚ ತಗಲುವ ಅಂದಾಜು ವೆಚ್ಚದ ಮಾಹಿತಿಯನ್ನು ಪ್ರಾಧಿಕಾರಕ್ಕೆ ನೀಡಿದೆ.

‘ನಗರದಲ್ಲಿ ಹಾದುಹೋಗುವ 110 ಕೆವಿ. ವಿದ್ಯುತ್ ಮಾರ್ಗವನ್ನು ಶಿರಸಿಯ ನೀಲೆಕಣಿ ಮೀನು ಮಾರುಕಟ್ಟೆ ಬಳಿಯಿಂದ ಚಿಪಗಿ ಗ್ರಾಮದವರೆಗೆ ನೆಲದೊಳಗೆ ವಿದ್ಯುತ್ ಕೇಬಲ್ ಅಳವಡಿಸಿ ಬದಲಿಸಲು ಹೆದ್ದಾರಿ ಪ್ರಾಧಿಕಾರ ವಿಚಾರಿಸಿತ್ತು. ಅಲ್ಲದೆ ಚಿಪಗಿಯಿಂದ ದಾಸನಕೊಪ್ಪವರೆಗೆ ಪ್ರತಿ 60 ರಿಂದ 80 ಮೀ.ಗೆ ಒಂದರಂತೆ 12 ಮೀ. ಎತ್ತರದ ಲ್ಯಾಟಿಸ್ ಟವರ್ ಅಳವಡಿಸಿ ವಿದ್ಯುತ್ ತಂತಿ ಸಾಗಿಸಲು ತಗಲುವ ವೆಚ್ಚದ ಬಗ್ಗೆಯೂ ಮಾಹಿತಿ ಪಡೆದಿದೆ. ಒಟ್ಟಾರೆ ₹ 39 ಕೋಟಿ ವೆಚ್ಚ ಉದ್ದೇಶಿತ ಯೋಜನೆಗೆ ಬೇಕಿದೆ’ ಎಂದು ಹೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆದ್ದಾರಿ ನಗರದಲ್ಲಿ ಹಾದು ಹೋದರೆ ರಸ್ತೆ ಹೆಚ್ಚು ವಿಸ್ತರಣೆಯಾಗಲಿದೆ. ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಜಾಗದ ಕೊರತೆ ಎದುರಾಗುವುದರಿಂದ ಅಂತರ್ಗತ ಸಂಪರ್ಕಕ್ಕೆ ಪ್ರಾಧಿಕಾರ ಬೇಡಿಕೆ ಇಟ್ಟಿದೆ. ನೆಲದಿಂದ ಒಂದು ಮೀ. ಆಳದಲ್ಲಿ ಕೇಬಲ್ ಅಳವಡಿಸುವ ಯೋಜನೆ ಇದಾಗಿದೆ’ ಎಂದರು.

ಹೆದ್ದಾರಿ ನಿರ್ಮಾಣ ಯೋಜನೆಯ ಮೊದಲ ಹಂತವಾಗಿ ಶಿರಸಿಯ ನೀಲೇಕಣಿಯಿಂದ ಕುಮಟಾ ತಾಲ್ಲೂಕಿನ ದೀವಗಿ ವರೆಗೆ 60 ಕಿ.ಮೀ. ಹೆದ್ದಾರಿ ನಿರ್ಮಾಣ ಅಂದಾಜು ₹ 440 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಎರಡನೇ ಹಂತದಲ್ಲಿ ₹ 208 ಕೋಟಿ ವೆಚ್ಚದಲ್ಲಿಬಿಸಲಕೊಪ್ಪದಿಂದ ಹಾವೇರಿ ಜಿಲ್ಲೆಯ ನಾಲ್ಕರ ಕ್ರಾಸ್‍ವರೆಗಿನ 75 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.

ಬೈಪಾಸ್ ರಸ್ತೆ ಅನುಮಾನ:

ಶಿರಸಿ ನಗರದಿಂದ ಹೊರವಲಯದಲ್ಲಿ ಹೆದ್ದಾರಿ ನಿರ್ಮಿಸಲು ಈ ಹಿಂದಿನಿಂದಲೂ ಪ್ರಯತ್ನ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ನಗರದಲ್ಲಿ ಹಾದುಹೋದರೆ ಹಲವು ಮನೆಗಳು, ಅಂಗಡಿ–ಮುಂಗಟ್ಟುಗಳನ್ನು ತೆರವುಗೊಳಿಸುವ ಆತಂಕವಿದೆ. ಈ ಕಾರಣಕ್ಕಾಗಿ ಅದನ್ನು ತಪ್ಪಿಸಲು ನೀಲೇಕಣಿಯಿಂದ ಭೀಮನಗುಡ್ಡ, ಕಲ್ಕುಣಿ, ಕುಳವೆ, ಕರಿಗುಂಡಿ ಮಾರ್ಗವಾಗಿ ನಗರದ ಹೊರವಲಯದಲ್ಲಿ ರಸ್ತೆ ಹಾದುಹೋಗುವಂತೆ ಪ್ರಸ್ತಾವನೆ ಈ ಹಿಂದೆ ಸಲ್ಲಿಕೆಯಾಗಿತ್ತು.

‘ಅರಣ್ಯಭೂಮಿಯೂ ಸ್ವಾಧೀನಗೊಳ್ಳುವ ಸಾಧ್ಯತೆ ಇರುವ ಕಾರಣ ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯ ಪ್ರಸ್ತಾವನೆ ಒಪ್ಪಿಕೊಂಡಿಲ್ಲ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಧಾರವಾಡ ವಿಭಾಗದ ಕಚೇರಿಯ ಎಂಜಿನಿಯರ್ ಒಬ್ಬರು ಖಚಿತಪಡಿಸಿದರು.

ಅಂತರ್ಗತ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ತಗಲುವ ಅಂದಾಜು ವೆಚ್ಚದ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗಿದೆ. ಯೋಜನೆ ಕುರಿತ ಪ್ರಸ್ತಾವ ಇನ್ನೂ ಪ್ರಾಧಿಕಾರದ ಹಂತದಲ್ಲಿದೆ.

- ನಾಗರಾಜ ಪಾಟೀಲ್,ಹೆಸ್ಕಾಂ ಎಇಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT