ಸೋಮವಾರ, ಡಿಸೆಂಬರ್ 9, 2019
20 °C
ಕೈಗಾ ಅಣು ವಿದ್ಯುತ್ ಸ್ಥಾವರದ ಐದು, ಆರನೇ ಘಟಕಗಳ ಸ್ಥಾಪನೆ ವಿರುದ್ಧ ಜನಜಾಗೃತಿ ಸಮಾವೇಶ

ಸ್ಥಾವರದ ವಿರುದ್ಧ ಸಂಘಟಿತ ಹೋರಾಟದ ಕೂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ಸ್ಥಾಪನೆಯ ವಿರುದ್ಧ ಸಂಘಟಿತವಾಗಿ ಹೋರಾಡಬೇಕು. ಪ್ರಧಾನಿ ಬಳಿಗೆ ನಿಯೋಗ ಹೋಗಬೇಕು’ ಎಂಬ ಒಕ್ಕೊರಲಿನ ಒತ್ತಾಯವು ಮಲ್ಲಾಪುರದಲ್ಲಿ ಭಾನುವಾರ ಹಮ್ಮಿಕೊಂಡ ಜನಜಾಗೃತಿ ಸಮಾವೇಶದಲ್ಲಿ ಕೇಳಿಬಂತು.

ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕ ವಿರೋಧಿ ಹೋರಾಟ ಸಮಿತಿಯು ಈ ಸಮಾವೇಶ ಆಯೋಜಿಸಿತ್ತು.

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ‘ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ನಾಲ್ಕು ಘಟಕಗಳ ಸ್ಥಾಪನೆಯ ವಿರುದ್ಧ ಆರಂಭದಲ್ಲೇ ನಾನು ಪಾದಯಾತ್ರೆ ಮಾಡಿದ್ದೆ. ಆಗ ನನ್ನನ್ನು ಒಂದು ಗಂಟೆ ಬಂಧನದಲ್ಲಿ ಇಡಲಾಗಿತ್ತು. ಅಂದು ಭಾರಿ ಹೋರಾಟ ನಡೆದರೂ ಏನೂ ಪ್ರಯೋಜನವಾಗಲಿಲ್ಲ. ಈಗ ಮತ್ತೆ ವಿಸ್ತರಣೆ ನಡೆಯುತ್ತಿದೆ. ಈ ಸಲ ಹಿಂದಿನಂತೆ ಆಗಬಾರದು. ಎಲ್ಲರೂ ಒಟ್ಟಾಗಿ ಹೋರಾಡಬೇಕು’ ಎಂದರು.

ಸ್ವರ್ಣವಲ್ಲಿ ಮಠ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ‘ಕೈಗಾ ಅಣು ವಿದ್ಯುತ್ ಸ‌್ಥಾವರ ಭಸ್ಮಾಸುರ ಇದ್ದಂತೆ. ಈಗಾಗಲೇ ನಾಲ್ಕು ಕೈಗಳನ್ನು (ಮೊದಲ ನಾಲ್ಕು ಘಟಕಗಳು) ಜಿಲ್ಲೆಯಲ್ಲಿಟ್ಟಿದ್ದಾನೆ. ಇನ್ನೂ ಎರಡು ದೊಡ್ಡ ಕೈಗಳನ್ನು ಚಾಚಲು ಸಿದ್ಧನಾಗಿದ್ದೇನೆ. ಅದನ್ನು ತಡೆಯಲೇಬೇಕಿದೆ’ ಎಂದರು.

‘ವಿವಿಧ ದೇಶಗಳಲ್ಲಿ ಅಣು ಸ್ಥಾವರಗಳನ್ನು ಮುಚ್ಚುತ್ತಿದ್ದಾರೆ. ಆದರೆ, ನಮ್ಮಲ್ಲಿ ಮತ್ತಷ್ಟು ಆರಂಭವಾಗುತ್ತಿವೆ. ಹೊರದೇಶಗಳಿಂದ ಯುರೇನಿಯಂ ತಂದು ದುಬಾರಿ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಅವಶ್ಯಕತೆಯೇನಿದೆ? ಹೊಸ ಘಟಕಗಳ ನಿರ್ಮಾಣಕ್ಕೆ ಮತ್ತಷ್ಟು ಮರಗಳನ್ನು ಕಡಿಯುತ್ತಾರೆ. ಯುರೇನಿಯಂನ ಬೂದಿ ನಮಗೆ ಕೊಟ್ಟು, ಬೇರೆಯವರಿಗೆ ವಿದ್ಯುತ್ ನೀಡಲಾಗುತ್ತಿದೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

‘10 ಉದಾಹರಣೆ ಕೊಡಬಲ್ಲೆ’: ‘ಜಿಲ್ಲೆಯಲ್ಲಿ ತಂಬಾಕು ಸೇವಿಸಿದವರಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಯಾವುದೇ ದುಶ್ಚಟಗಳಿಲ್ಲದ, ಕ್ಯಾನ್ಸರ್‌ನಿಂದ ಮೃತಪಟ್ಟವರ 10 ಉದಾಹರಣೆಗಳನ್ನು ನಾನು ಕೊಡಬಲ್ಲೆ’ ಎಂದು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

‘ಕೈಗಾದಲ್ಲಿ ಅಣು ವಿದ್ಯುತ್ ಸ್ಥಾವರದ ಸ್ಥಾಪನೆಯನ್ನು ವಿರೋಧಿಸಿ ಆರಂಭದಲ್ಲೇ ಹೋರಾಟ ನಡೆಸಲಾಗಿತ್ತು. ಆದರೆ, ಕೆಲವರು ಹೋರಾಟಗಾರರ ನಡುವೆ ಒಡಕು ಮೂಡಿಸಿದರು. ಹೀಗಾಗಿ ಆಗಿನ ಪ್ರತಿಭಟನೆ ಫಲ ನೀಡಲಿಲ್ಲ’ ಎಂದು ಬೇಸರಿಸಿದರು. 

‘ವಿರೋಧಿಸುವುದು ದೇಶದ್ರೋಹವೇ?’: ಸ್ವಾದಿ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಭಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ‘ಕೂಡಂಕುಳಂನಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯನ್ನು ವಿರೋಧಿಸಿದವರ ವಿರುದ್ಧ ದೇಶದ್ರೋಹವೂ ಸೇರಿದಂತೆ 56 ಸಾವಿರ ಪ್ರಕರಣಗಳನ್ನು ದಾಖಲಿಸಲಾಗಿದೆ. ಪರಿಸರ, ಜೀವ ವಿರೋಧಿ ಯೋಜನೆಗಳನ್ನು ವಿರೋಧಿಸಿದರೆ ದೇಶದ್ರೋಹವೇ’ ಎಂದು ಪ್ರಶ್ನಿಸಿದರು.

ಐದು ನಿರ್ಣಯಗಳು: ‘ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ಸ್ಥಾಪನೆ ಮಾಡಬಾರದು. ನಾಲ್ಕು ಘಟಕಗಳಿಂದ ಆರೋಗ್ಯದ ಮೇಲೆ ಆಗಿರುವ ದುಷ್ಪರಿಣಾಮಗಳ ವರದಿಯನ್ನು ಬಹಿರಂಗ ಪಡಿಸಬೇಕು. ಪರಿಸರ ಅನಾಹುತ, ಅರಣ್ಯ ನಾಶದ ಬಗ್ಗೆ ತಜ್ಞರಿಂದ ಅಧ್ಯಯನ ಮಾಡಿಸಬೇಕು. ಕೈಗಾ ಸುತ್ತಮುತ್ತಲಿನ ಗ್ರಾಮಗಳಿಗೆ ಸೌರ ವಿದ್ಯುತ್ ಸೌಲಭ್ಯ ಕೊಡಬೇಕು. ನಾಗರಿಕ ಸುರಕ್ಷಾ ಸಮಿತಿಯನ್ನು ರಚಿಸಬೇಕು’ ಎಂಬ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಕಾರವಾರದ ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ, ಕ್ರೈಸ್ತ ಧರ್ಮಗುರುಗಳಾದ ಫಾದರ್ ನಿರ್ಮಲಕುಮಾರ್ ಮಿರಾಂಡ, ಫಾದರ್ ಬೆಂಜಮಿನ್ ಡಿಸೋಜಾ, ಮುಸ್ಲಿಂ ಧರ್ಮಗುರು ಮೌಲಾನಾ ಮಹಮದ್ ನಾಸಿರ್ ಅಖ್ತರ್ ಮಾತನಾಡಿದರು.

ಗಣಪತಿ ಹೆಗಡೆ ಬಿಸ್ಲಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಕೃಷ್ಣ ಭಟ್ ಸ್ವಾಗತಿಸಿದರು. ಗುರು ಫಾಯ್ದೆ ಕಾರ್ಯಕ್ರಮ ನಿರೂಪಿಸಿದರು. ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ, ಮುಖಂಡರಾದ ಸತೀಶ ಸೈಲ್, ಆನಂದ ಅಸ್ನೋಟಿಕರ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಹೋರಾಟ ಸಮಿತಿ ಅಧ್ಯಕ್ಷ ಶಾಮತ ಬಾಂದೇಕರ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು