ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡಕ್ಕೆ 50 ಆಳಸಮುದ್ರ ದೋಣಿ: ಕೋಟ ಶ್ರೀನಿವಾಸ ಪೂಜಾರಿ

ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 22 ಏಪ್ರಿಲ್ 2022, 12:57 IST
ಅಕ್ಷರ ಗಾತ್ರ

ಕಾರವಾರ: ‘ಕರಾವಳಿ ಜಿಲ್ಲೆಗಳ ಮೀನುಗಾರರಿಗೆ ಒಟ್ಟು 100 ಆಳ ಸಮುದ್ರ ಮೀನುಗಾರಿಕಾ ದೋಣಿಗಳನ್ನು ಸರ್ಕಾರವು ನೀಡಲಿದೆ. ಇವುಗಳಲ್ಲಿ 50 ದೋಣಿಗಳನ್ನು ಉತ್ತರ ಕನ್ನಡಕ್ಕೇ ನೀಡಲು ಸೂಚಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹ, ಕಚೇರಿಗಳ ಕಟ್ಟಡ ಹಾಗೂ ಮಾಲಾದೇವಿ ಮೈದಾನದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ನೈಸರ್ಗಿಕವಾಗಿ ಹೆಚ್ಚು ಮೀನುಗಾರಿಕೆ ಮಾಡುವವರು ಉತ್ತರ ಕನ್ನಡದವರು. ಇಲ್ಲಿ ಸೌಲಭ್ಯಗಳು ಹೆಚ್ಚಾದರೆ ಉದ್ಯೋಗಾವಕಾಶಗಳೂ ಹೆಚ್ಚುತ್ತವೆ. ಯುವಕರು ಸ್ವಂತ ಉದ್ಯೋಗ ಮಾಡಿದರೆ ಅಭಿವೃದ್ಧಿಗೆ ಅವಕಾಶ ಹೆಚ್ಚುತ್ತದೆ. ಜಿಲ್ಲೆಯ ಮೀನುಗಾರಿಕೆ ಅಭಿವೃದ್ಧಿ ಕುರಿತು ಒಂದು ತಿಂಗಳಲ್ಲಿ ಮೀನುಗಾರಿಕೆ ಸಚಿವರೊಂದಿಗೆ ಸಭೆ ಮಾಡಲಾಗುವುದು’ ಎಂದು ಹೇಳಿದರು.

ಯುವತಿಯರಿಗೆ ಉಡುಗೊರೆ:

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ನಿಲಯ ಯುವತಿಯರು ಈಚೆಗೆ ಹಿಮಾಲಯ ಪರ್ವತವನ್ನೇರಿ ಸೈಕಲ್ ಮೂಲಕ ಶ್ರೀನಗರದಿಂದ ಕಾರವಾರಕ್ಕೆ ಬಂದಿದ್ದಾರೆ. ಬಳಿಕ, ಇಲ್ಲಿಂದ ಸಮುದ್ರದಲ್ಲಿ ಕಯಾಕಿಂಗ್ ಮಾಡುತ್ತ ಮಂಗಳೂರಿಗೆ ತಲುಪಿದ್ದಾರೆ. ಅವರ ಸಾಹಸವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅವರಿಗೆ ಮುಖ್ಯಮಂತ್ರಿ ಮೂಲಕ ತಲಾ ₹ 2 ಲಕ್ಷ ಉಡುಗೊರೆ ನೀಡಲಾಗುವುದು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಕರಾವಳಿಯ ವಾತಾವರಣಕ್ಕೆ ಹೊಂದಿಕೊಳ್ಳುವಂಥ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ. ಅಲ್ಲಿ ವಿಶಾಲವಾದ ಕಟ್ಟಡ ನಿರ್ಮಾಣವಾಗಲಿದೆ’ ಎಂದರು.

‘ಬಾಲ್ಯದಲ್ಲಿ ನಾನೂ ಮಾಲಾದೇವಿ ಮೈದಾನದಲ್ಲಿ ಆಡಿದ್ದೇನೆ. ಇಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ ಯುವತಿಯರು, ಬಾಲಕಿಯರಿಗೆ ಬಟ್ಟೆ ಬದಲಿಸಲೂ ಜಾಗವಿಲ್ಲ. ಇದರಿಂದ ಆಗುವ ಬೇಸರ ಅನುಭವಿಸಿದವರಿಗೇ ಗೊತ್ತು. ಆಟದ ಮೈದಾನಕ್ಕೆ ಜಾನುವಾರು ಬರುತ್ತಿವೆ. ಅಭಿವೃದ್ಧಿ ಕಾಮಗಾರಿಯಿಂದಾಗಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಲಿದೆ’ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ‘ಮಾಲಾದೇವಿ ಮೈದಾನವು ಕಾರವಾರದ ಕ್ರೀಡಾಪಟುಗಳ ಹೃದಯದಂತಿದೆ. ಅನೇಕ ಲೋಪದೋಷಗಳನ್ನು ಸರಿಪಡಿಸುವಂತೆ ಅನೇಕರು ಮನವಿ ಮಾಡಿದ್ದರು. ಆದರೆ, ಈ ಹಿಂದೆ ಯಾರೂ ಗಮನ ಹರಿಸಿರಲಿಲ್ಲ. ಶಾಸಕಿ ರೂಪಾಲಿ ನಾಯ್ಕ, ಎಲ್ಲರ ಜೊತೆ ಚರ್ಚಿಸಿ ಕ್ರೀಡಾಂಗಣದ ಒಂದಿಂಚೂ ಕಡಿಮೆ ಮಾಡದಂತೆ ಯೋಜನೆ ರೂಪಿಸಿದ್ದಾರೆ’ ಎಂದರು.

‘ಒಂದು ಇಂಚೂ ವ್ಯರ್ಥವಾಗದು’:‘ಅಭಿವೃದ್ಧಿ ಕಾಮಗಾರಿಯಿಂದ ಮಾಲಾದೇವಿ ಮೈದಾನದ ಜಾಗ ವ್ಯರ್ಥವಾಗುತ್ತದೆ ಎಂದು ಕೆಲವರು ವದಂತಿ ಹಬ್ಬಿಸಿದ್ದರು. ಆದರೆ, ಒಂದು ಇಂಚು ಜಾಗವೂ ಹಾಳಾಗುವುದಿಲ್ಲ. ಮೈದಾನದ ಅಂಚಿಗೆ ಆವರಣ ಗೋಡೆ ನಿರ್ಮಿಸಲು, ಮೆಷ್ ಅಳವಡಿಸಲು ಶಾಸಕರ ನಿಧಿಯಿಂದ ₹ 47 ಲಕ್ಷ ನೀಡಿದ್ದೇನೆ. ಸುಮಾರು ₹ 6 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ’ ಎಂದು ಶಾಸಕಿ ರೂಪಾಲಿ ತಿಳಿಸಿದರು.

ಸಭೆಯ ಬಳಿಕ, ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ನಾಯ್ಕ ನೇತೃತ್ವದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಮೈದಾನದಲ್ಲಿ ಕಟ್ಟಡದ ವಿಸ್ತೀರ್ಣವನ್ನು 16 ಮೀಟರ್ ಬದಲು 12 ಮೀಟರ್‌ಗೆ ಇಳಿಸಿ, ಕ್ರೀಡಾಂಗಣಕ್ಕೆ ಹೆಚ್ಚು ಜಾಗ ಸಿಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ವಿಧಾನಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರು, ಗಣಪತಿ ಉಳ್ವೇಕರ್ ಮಾತನಾಡಿದರು. ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸದಸ್ಯ ಪ್ರೇಮಾನಂದ ಗುನಗ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಥಾಮ್ಸೆ ಇದ್ದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಶಿಕಾಂತ ಕೊಳೇಕರ್ ಸ್ವಾಗತಿಸಿದರು. ಬಂದರು ಇಲಾಖೆ ಅಧಿಕಾರಿ ಸುರೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

* ಜಿಲ್ಲೆಯಲ್ಲಿ ₹ 9 ಕೋಟಿ ವೆಚ್ಚದಲ್ಲಿ 9,500 ಕುಟುಂಬಗಳಿಗೆ ವಿದ್ಯುತ್ ಸಂಪರ್ಕಕ್ಕೆ ಮಂಜೂರಾತಿ ನೀಡಲಾಗಿದೆ. ಇದಕ್ಕೆ ಕಂಬಗಳು ಎಷ್ಟಾದರೂ ಬೇಕಾಗಲಿ, ಸಂಪರ್ಕ ಕೊಡಲು ಸೂಚಿಸಲಾಗಿದೆ.

- ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT