ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೆದುರೇ ನೀರು ಪಾಲಾದ ದಶಕದ ಕನಸು

ಮನೆ ಕಳೆದುಕೊಂಡು ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದ ನೂರಾರು ಗ್ರಾಮಸ್ಥರು
Last Updated 9 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕಾರವಾರ: ‘ಮನೆಯಲ್ಲಿ ಮೂರು ಕ್ವಿಂಟಲ್ ಅಕ್ಕಿ ಇತ್ತು. ಮತ್ತೊಂದಷ್ಟು ದಿನ ಬಳಕೆಯ ಸಾಮಗ್ರಿ.. ಬಟ್ಟೆಬರೆ ಇದ್ದವು. ಎಲ್ಲವೂ ನೀರುಪಾಲಾಗಿದೆ. ನಮ್ಮ ಮನೆ ಸಂಪೂರ್ಣ ಮುಳುಗಿದೆ...’

‘ನಮ್ಮ ಮನೆ ಸಂಪೂರ್ಣ ಕುಸಿದುಬಿದ್ದಿದೆ. ಎಲ್ಲಿ ನೋಡಿದರಲ್ಲಿ ನೀರು. ಇದೆಂಥಾ ಮಳೆಯೋ, ಪ್ರವಾಹವೋ.. ನಮ್ಮ ಆಕಳು, ನಾಯಿ ಎಲ್ಲಿದ್ದಾವೋ.. ಹೇಗಿದ್ದಾವೋ..’

ಕಾಳಿ ನದಿಯ ಪ್ರವಾಹಕ್ಕೆ ಗುರಿಯಾದ ಗೋಟೆಗಾಳಿ, ಸಕಲವಾಡ, ವೈಲವಾಡ ಭಾಗದಒಬ್ಬೊಬ್ಬ ಸಂತ್ರಸ್ತರದ್ದೂ ಒಂದೊಂದು ಕತೆ, ವ್ಯಥೆ.

ಜಿಲ್ಲಾಡಳಿತವು ನಗರದ ಸಾಗರದರ್ಶನ ಸಭಾಂಗಣದಲ್ಲಿ ತೆರೆದಿರುವ ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಗ್ರಾಮಸ್ಥರು ತಮ್ಮ ಜಮೀನು, ಮನೆಯನ್ನು ನೆನೆದು ಕಣ್ಣೀರಿಡುತ್ತಾರೆ. ಅದೆಷ್ಟೋ ವರ್ಷಗಳ ಪರಿಶ್ರಮ, ಕೇವಲ ಮೂರೇ ದಿನಗಳಲ್ಲಿ ನೀರು ಪಾಲಾಯಿತು ಎಂದು ಗೋಳಿಡುತ್ತಾರೆ.

ಸಕಲವಾಡದ ಹಿರಿಯ ನಿವಾಸಿ ದಿನಕರ ನಾರಾಯಣ ಫಳ ತಮ್ಮ ನೆನಪನ್ನು ಬಿಚ್ಚಿಟ್ಟರು. ‘ಕಾಳಿ ನದಿಗೆ ಕದ್ರಾದಲ್ಲಿ ಅಣೆಕಟ್ಟೆ ಕಟ್ಟಿ ನೀರು ನಿಲ್ಲಿಸುವ ಮೊದಲು ಕೆಳಭಾಗದಲ್ಲಿ ಪ್ರವಾಹ ಬರುತ್ತಿತ್ತು. 1961ರಲ್ಲಿ ಒಮ್ಮೆ ನೀರು ಉಕ್ಕಿ ಹರಿದ ನೆನಪಿದೆ. ಆದರೆ, ಆಗಲೂ ಈ ಪ್ರಮಾಣದಲ್ಲಿ ನೀರು ಕಂಡಿರಲಿಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಅಂದಹಾಗೆ, ಅವರು ಕೊಡಸಳ್ಳಿ ಅಣೆಕಟ್ಟೆ ಒಡೆಯಿತು ಎಂದು ಗುರುವಾರ ಹಬ್ಬಿದ ವದಂತಿಗೆ ಬೆದರಿ ಗ್ರಾಮ ತೊರೆದವರು. ಅವರ ಜಮೀನು, ಮನೆ ಕೂಡ ಜಲಾವೃತವಾಗಿದೆ.

ಗೋಟೆಗಾಳಿಯ ಮತ್ತೊಬ್ಬ ಹಿರಿಯ ಶ್ಯಾಮಕಾಂತ ತಮ್ಮ ಕುಟುಂಬ ಸಮೇತ ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ತಮ್ಮ ಜಾನುವಾರು, ನಾಯಿಗಳನ್ನು ಅಲ್ಲೇ ಬಿಟ್ಟು ಬಂದಿದ್ದಾರೆ. ಅವುಗಳ ಪರಿಸ್ಥಿತಿ ಹೇಗಿದೆ ಎಂಬ ಚಿಂತೆ ಅವರದ್ದಾಗಿದೆ. ಇದೇ ಗ್ರಾಮದಸದಾಶಿವ ನೀಲಕಂಠ ಗಿರಿಧರ್,ಸೂರಜ್ ಆನಂದ ಗಿರಿಧರ್, ಸಕಲವಾಡದ ಮಾರುತಿ ಗೋಪಾಲ ನಾಯ್ಕಅವರ ಮನೆಗಳಿಗೂ ಹಾನಿಯಾಗಿದೆ.

ಇತ್ತ ಘಾಡಸಾಯಿ ಗ್ರಾಮದಲ್ಲಿ ಪ್ರವಾಹಕ್ಕೆ 150ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮುಂಗಾರು ಮಳೆಯಿಂದ ನಳನಳಿಸುತ್ತಿದ್ದ ಭತ್ತದ ಗದ್ದೆಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ.

ಬರಲು ಒಲ್ಲದ ಗ್ರಾಮಸ್ಥರು
ಪ್ರವಾಹ ಪೀಡಿತ ಹಲವು ಗ್ರಾಮಗಳ ನಿವಾಸಿಗಳು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಬರಲು ಒಪ್ಪುತ್ತಿಲ್ಲ ಎಂಬ ಬೇಸರ ಪರಿಹಾರ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಅಧಿಕಾರಿಗಳದ್ದು.

‘ಸಾಗರದರ್ಶನ ಸಭಾಂಗಣದಲ್ಲಿ 500ಕ್ಕೂ ಹೆಚ್ಚು ಜನರಿಗೆಆಶ್ರಯಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೇವಲ 180 ಜನರು ಬಂದಿದ್ದಾರೆ. ಇದು ಅವರ ಮನೆಯಲ್ಲ ಎನ್ನುವುದನ್ನು ಹೊರತಾಗಿ ಎಲ್ಲ ಸೌಕರ್ಯಗಳನ್ನೂ ಕಲ್ಪಿಸಲಾಗಿದೆ.ಕಾರ್ಯಾಚರಣೆಯ ತಂಡದ ಸಿಬ್ಬಂದಿ, ಸ್ವಯಂಸೇವಕರೇ 80ಕ್ಕೂ ಹೆಚ್ಚು ಮಂದಿಯಿದ್ದಾರೆ. ನದಿಪಾತ್ರದ ಗ್ರಾಮಸ್ಥರು ಕೊನೆಯ ಕ್ಷಣದವರೆಗೂ ಕಾಯುವುದು ಸರಿಯಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT