ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಸುಸಜ್ಜಿತ ಆಸ್ಪತ್ರೆಗಾಗಿ ಜೋರಾದ ಕೂಗು

ಎಚ್ಚೆತ್ತ ವಿವಿಧ ಮುಖಂಡರಿಂದಲೂ ಬೆಂಬಲ l ಸಾಮಾಜಿಕ ಜಾಲತಾಣಗಳಲ್ಲಿ ‘ಟ್ರೆಂಡಿಂಗ್’ ವಿಷಯ
Last Updated 25 ಜುಲೈ 2022, 18:57 IST
ಅಕ್ಷರ ಗಾತ್ರ

ಕಾರವಾರ: ‘ಸುಸಜ್ಜಿತ ಆಸ್ಪತ್ರೆ ಆರಂಭಿಸದಿದ್ದರೆ ಮತದಾನ ಮಾಡುವುದಿಲ್ಲ...’. ಉತ್ತರ ಕನ್ನಡ ಜಿಲ್ಲೆಯಲ್ಲಿ ಆರಂಭವಾ ಗಿರುವ ಈ ಅಭಿಯಾನ ಈಗ ದೇಶದ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ಟ್ರೆಂಡಿಂಗ್’ ವಿಷಯವಾಗಿದೆ.

ಜನ ಆಸ್ಪತ್ರೆಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಚುನಾವಣೆಗೆ ಕೆಲವೇ ತಿಂಗಳು ಉಳಿದಿರುವುದನ್ನೂ ಗಮನದಲ್ಲಿಟ್ಟುಕೊಂಡು ವಿವಿಧ ರಾಜಕಾರಣಿಗಳು ಬೇಡಿಕೆಗೆ ತಮ್ಮ ಬೆಂಬಲ ಸೂಚಿಸಲು ಆರಂಭಿಸಿದ್ದಾರೆ.

ದೊಡ್ಡ ಭೌಗೋಳಿಕ ಪ್ರದೇಶ ಹೊಂದಿರುವ ಈ ಜಿಲ್ಲೆಯು, ವೈದ್ಯಕೀಯ ಕ್ಷೇತ್ರದಲ್ಲಿ ಇಂದಿಗೂ ಪರಾವಲಂಬಿ. ಗಂಭೀರ ಚಿಕಿತ್ಸೆಗಳಿಗೆ ಸಮೀಪದ ಉಡುಪಿ, ಮಂಗಳೂರಿನ ಖಾಸಗಿ ಆಸ್ಪತ್ರೆಗಳು, ಹುಬ್ಬಳ್ಳಿಯ ಕಿಮ್ಸ್ ಅಥವಾ ಗೋವಾದ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ.

4 ರಾಷ್ಟ್ರೀಯ ಹೆದ್ದಾರಿಗಳು, ಹಲವು ರಾಜ್ಯ ಹೆದ್ದಾರಿಗಳು ಹಾದು ಹೋಗುವ ಉತ್ತರ ಕನ್ನಡದಲ್ಲಿ ಅಪಘಾತಗಳು ಸರ್ವೇ ಸಾಮಾನ್ಯ. ಕಾರವಾರಕ್ಕೆ ಜಿಲ್ಲೆಯ ವಿವಿಧ ಗಡಿಭಾಗಗಳು, ತಾಲ್ಲೂಕು ಕೇಂದ್ರಗಳಿಂದ ಬರಲು 150– 200 ಕಿಲೋಮೀಟರ್ ಪ್ರಯಾಣಿಸಬೇಕು. ಮಳೆಗಾಲ ನಾನಾ ಕಾರಣಗಳಿಂದ ರಸ್ತೆ ಸಂಪರ್ಕ ಕಡಿತವಾದರೆ ರೋಗಿಗಳ ಪಾಡು ಹೇಳತೀರದು.

ಜುಲೈ 20ರಂದು ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಶಿರೂರು ಟೋಲ್‌ಗೇಟ್‌ನಲ್ಲಿ ಆಂಬುಲೆನ್ಸ್ ಅಪಘಾತವಾಗಿ ಹೊನ್ನಾವರದ ನಾಲ್ವರು ಮೃತಪಟ್ಟರು. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇದ್ದಿದ್ದರೆ ಅವರು ಬೇರೆ ಜಿಲ್ಲೆಗೆ ಹೋಗಬೇಕಿರಲಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಬಲವಾಗಿ ಮೂಡಲು ಈ ಘಟನೆ ಕಾರಣವಾಯಿತು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಬೇಡಿಕೆ ದಶಕಗಳಷ್ಟು ಹಿಂದಿನಿಂದಲೂ ಇದೆ. ಮತ್ತೊಮ್ಮೆ ಗಟ್ಟಿ ಧ್ವನಿಯೆತ್ತಿದ ಸ್ಥಳೀಯರು, ಜುಲೈ 24ರಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದರು. ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರ ಹಾಕಲು ಆರಂಭಿಸಿದರು.

15 ಸಾವಿರಕ್ಕೂ ಅಧಿಕ ಟ್ವೀಟ್‌ಗಳು, ಸಾವಿರಾರು ಫೇಸ್‌ಬುಕ್ ಬರಹಗಳು ಭಾನುವಾರ ಏಕಕಾಲಕ್ಕೆ ಪ್ರಕಟವಾದವು. ಇದು ದೇಶದಲ್ಲೇ ‘ಟ್ರೆಂಡಿಂಗ್’ (ಬಹು ಚರ್ಚಿತ) ವಿಷಯವಾಯಿತು. ಶಿರಸಿಯಲ್ಲಿ
ಪ್ರತಿಭಟನೆಯಾದರೆ, ಕಾರವಾರದಲ್ಲಿ ರಕ್ತದಲ್ಲಿ ಪತ್ರ ಬರೆಯುವ ಚಳವಳಿ, ಹೊನ್ನಾವರ, ಕುಮಟಾ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಮುಂದೆ ಧರಣಿಯಂಥ ಹೋರಾಟಗಳಿಗೂ ಸಿದ್ಧತೆ ನಡೆಯುತ್ತಿದೆ.

ಈ ಎಲ್ಲ ಬೆಳವಣಿಗೆಗಳು ಜನಪ್ರತಿನಿಧಿಗಳಿಗೆ ಸ್ವಲ್ಪ ಬಿಸಿ ಮುಟ್ಟಿಸಿದ್ದು, ಸಾರ್ವಜನಿಕರನ್ನು ಸಮಾಧಾನ ಪಡಿ ಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಭಿ ಯಾನವನ್ನು ಬೆಂಬಲಿಸಿ ‘ಏಕಧ್ವನಿ’ಯಲ್ಲಿ ಅಭಿಪ್ರಾಯಗಳನ್ನು ಜಾಲತಾಣಗಳ ತಮ್ಮ ಪುಟಗಳಲ್ಲಿ
ಪ್ರಕಟಿಸುತ್ತಿದ್ದಾರೆ.

ಶೀಘ್ರವೇ ಸೂಕ್ತ ತೀರ್ಮಾನ- ಡಾ.ಸುಧಾಕರ್: ಈ ಬಗ್ಗೆ ಟ್ವಿಟರ್‌ನಲ್ಲಿ ಸೋಮವಾರ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ.ಸುಧಾಕರ್, ‘ಕಾರವಾರದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ಸ್ಥಾಪನೆ ಹಾಗೂ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು. ಶೀಘ್ರವೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

‘ಜಿಲ್ಲೆಯ ಆರೋಗ್ಯ ಮೂಲಸೌಕರ್ಯ ಅಗತ್ಯಗಳ ಕುರಿತು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೊಂದಿಗೆ ಶೀಘ್ರವೇ ಸಭೆ ನಡೆಸಲಾಗುವುದು. ಆದಷ್ಟು ಬೇಗ ಒಂದು ಕ್ರಿಯಾಯೋಜನೆ ರೂಪಿಸಿ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದೂ ಹೇಳಿದ್ದಾರೆ.

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆ.ಡಿ.ಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕೂಡ ಅಭಿಯಾನವನ್ನು ಬೆಂಬಲಿಸಿದ್ದಾರೆ.

2019ರಲ್ಲಿ ಮೊದಲ ಬಾರಿಗೆ ‘ಟ್ವೀಟ್’ ಅಭಿಯಾನ ನಡೆದಿತ್ತು. ಪ್ರತಿಕ್ರಿಯಿಸಿದ್ದ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಬಳಿಕ ಯಾವುದೇ ಬೆಳವಣಿಯಾಗಲಿಲ್ಲ. ನಂತರ ಬದಲಾದ ಸರ್ಕಾರಗಳ ಸಚಿವರಿಗೆ, ಜನಪ್ರತಿನಿಧಿಗಳಿಗೆ ಆಗಾಗ ಮನವಿಗಳು ಸಲ್ಲಿಕೆಯಾಗುತ್ತಲೇ ಇವೆ. ಯಾವುದೇ ಪ್ರಯೋಜನ
ವಾಗಲಿಲ್ಲ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳಾಭಾವ: ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ ಯೋಜನೆಯಡಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ 50 ಹಾಸಿಗೆಗಳ ತೀವ್ರ ನಿಗಾ ಘಟಕವನ್ನು ಮಂಜೂರು ಮಾಡಿದೆ. ಸಂಸ್ಥೆಯ ಆವರಣದಲ್ಲಿ ಸ್ಥಳಾಭಾವದ ಕಾರಣ, ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ಥಾಪಿಸಲು ಜಿಲ್ಲಾಡಳಿತ ಉದ್ದೇಶಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT