ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಾಮು ಸಮುಚ್ಚಯ ಹಸ್ತಾಂತರ ವಿಳಂಬ

ಎಪಿಎಂಸಿಗೆ ಲಕ್ಷಾಂತರ ರೂಪಾಯಿ ಆದಾಯ ನಷ್ಟ; ಕಾರಣ ಕೇಳಿ ನೋಟಿಸ್ ಜಾರಿ
Last Updated 11 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಶಿರಸಿ: ನಿರ್ಮಾಣಗೊಂಡು ವರ್ಷ ಕಳೆದರೂ, ಗುತ್ತಿಗೆದಾರರಿಂದ ಹಸ್ತಾಂತರಗೊಳ್ಳದ ಗೋದಾಮು ಸಮುಚ್ಚಯದಿಂದ ಇಲ್ಲಿನ ಎಪಿಎಂಸಿಗೆ ಲಕ್ಷಾಂತರ ರೂಪಾಯಿ ಆದಾಯ ನಷ್ಟವಾಗಿದೆ. ಹಸ್ತಾಂತರ ವಿಳಂಬದ ಬಗ್ಗೆ ಅಸಮಾಧಾನಗೊಂಡಿರುವ ಎಪಿಎಂಸಿ ಪ್ರಮುಖರು, ಗುತ್ತಿಗೆದಾರರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ವ್ಯಾಪಾರಸ್ಥರಿಗೆ ಸಾಮಗ್ರಿ ಸಂಗ್ರಹಕ್ಕೆ ಅನುಕೂಲವಾಗುವಂತೆ ಎಪಿಎಂಸಿ ಅಭಿವೃದ್ಧಿ ಅನುದಾನದ ಅಡಿಯಲ್ಲಿ ₹ 1.39 ಕೋಟಿ ವೆಚ್ಚದಲ್ಲಿ ಗೋದಾಮು ನಿರ್ಮಿಸಲು, ಬೈಂದೂರ್ ಕನ್ಸ್ಟ್ರಕ್ಷನ್ಸ್‌ಗೆ ಗುತ್ತಿಗೆ ನೀಡಲಾಗಿತ್ತು. 2016 ಡಿಸೆಂಬರ್‌ನಲ್ಲಿ ಗುತ್ತಿಗೆ ನೀಡಿದ್ದ ಕಾಮಗಾರಿ ಪೂರ್ಣಗೊಳಿಸಲು ಒಂಬತ್ತು ತಿಂಗಳು ಕಾಲಾವಕಾಶ ನೀಡಲಾಗಿತ್ತು. ವರ್ಷದ ಹಿಂದೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಬಿಲ್ ಮೊತ್ತ ಒಟ್ಟು ₹ 1.65 ಕೋಟಿಗೆ ತಲುಪಿದೆ. ನಿಗದಿತ ಮೊತ್ತಕ್ಕಿಂತ ₹ 26 ಲಕ್ಷ ಹೆಚ್ಚುವರಿ ಬಿಲ್ ಆಗಿರುವುದು, ಕಟ್ಟಡ ಹಸ್ತಾಂತರಕ್ಕೆ ತೊಡಕಾಗಿದೆ.

’ಎಂಜಿನಿಯರ್‌ಗಳ ಅಂದಾಜಿನ ಪ್ರಕಾರ ಈ ಮಳಿಗೆಗಳ ಸಮುಚ್ಚಯದಿಂದ ತಿಂಗಳಿಗೆ ₹ 85ಸಾವಿರ ಬಾಡಿಗೆ ಬರಬಹುದಾಗಿದೆ. ಗುತ್ತಿಗೆದಾರರು ಕಟ್ಟಡ ಹಸ್ತಾಂತರಗೊಳಿಸಲು ವಿಳಂಬ ಮಾಡಿದ್ದು, ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಸದ್ಯದಲ್ಲಿ ಕಟ್ಟಡ ಹಸ್ತಾಂತರಿಸುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ’ ಎನ್ನುತ್ತಾರೆ ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಶೀಗೆಹಳ್ಳಿ.

‘ಗುತ್ತಿಗೆದಾರರು ಹೆಚ್ಚುವರಿ ಕಾಮಗಾರಿ ನಡೆಸಿದ ಕಾರಣ, ಟೆಂಡರ್‌ ಹಣಕ್ಕಿಂತ ಅಧಿಕ ಮೊತ್ತ ಖರ್ಚಾಗಿರುವುದಾಗಿ ಹೇಳಿದ್ದಾರೆ. ಎಪಿಎಂಸಿ, ಟೆಂಡರ್‌ನಲ್ಲಿ ನಮೂದಿಸಿದಷ್ಟು ಮೊತ್ತವನ್ನು ಈಗಾಗಲೇ ಪಾವತಿಸಿದೆ. ಹೆಚ್ಚುವರಿ ಕಾಮಗಾರಿ ನಡೆಸಿದ ಬಗ್ಗೆ ಎಂಜಿನಿಯರ್‌ಗಳು ಇನ್ನೂ ವರದಿ ನೀಡಿಲ್ಲ. ವರದಿ ಬಂದ ಮೇಲೆ, ಕಾಮಗಾರಿ ನಡೆಸಿರುವುದು ದೃಢಪಟ್ಟಲ್ಲಿ, ನಿರ್ದೇಶಕರ ಅನುಮೋದನೆ ಪಡೆದು, ಬಿಲ್ ಪಾವತಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಎಪಿಎಂಸಿ ಅಧಿಕಾರಿಗಳ ಮೌಖಿಕ ಹೇಳಿಕೆಯ ಮೇಲೆ ಹೆಚ್ಚುವರಿ ಕಾಮಗಾರಿ ನಡೆಸಲಾಗಿದೆ. ಅನುದಾನ ಬಿಡುಗಡೆಗೆ ಸಂಬಂಧಪಟ್ಟವರು ಕ್ರಮವಹಿಸಬೇಕು ಎಂದು ಗುತ್ತಿಗೆದಾರರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT