ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರದಲ್ಲೇ ಉಳಿಯಿತು ತಿಮಿಂಗಿಲದ ಅಸ್ಥಿಪಂಜರ

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಎರಡನೇ ಮಹಡಿಯಲ್ಲಿ ಮರು ಜೋಡಣೆ
Last Updated 25 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಕಾರವಾರ: ನಗರದ ಮತ್ಸ್ಯಾಲಯದ ಆವರಣದಲ್ಲಿದ್ದ ಬೃಹತ್ ತಿಮಿಂಗಿಲದ ಅಸ್ಥಿಪಂಜರವು ಕೊನೆಗೂ ನಗರದಲ್ಲೇ ಉಳಿದುಕೊಂಡಿದೆ. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಪ್ರವಾಸಿಗರು, ಮಕ್ಕಳಿಗೆ ಜಲಚರದ ಅರಿವು ಮೂಡಿಸಲು ಸಜ್ಜುಗೊಳಿಸಲಾಗಿದೆ.

ಮತ್ಸ್ಯಾಲಯದ ಆವರಣದ ಶೆಡ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಈ ಅಸ್ಥಿಪಂಜರವು ಸುಮಾರು 50 ವರ್ಷಗಳಷ್ಟು ಹಳೆಯದಾಗಿದೆ. ಮತ್ಸ್ಯಾಲಯದ ಕಟ್ಟಡವು ಶಿಥಿಲಗೊಂಡಿದ್ದು, ಅದನ್ನು ಮುಚ್ಚಲಾಗಿದೆ. ಹಾಗಾಗಿ ತಿಮಿಂಗಿಲದ ಅಸ್ಥಿಪಂಜರವು ಅನಾಥವಾಗಿತ್ತು. ತೆರೆದ ವಾತಾವರಣದಲ್ಲಿ ನಿರ್ವಹಣೆ ಇಲ್ಲದೇ ಪಾಳು ಬಿದ್ದಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧಿಕಾರಿಗಳು ಅಸ್ಥಿಪಂಜರವನ್ನು ಗಮನಿಸಿದ್ದರು. ಅದನ್ನು ತಮ್ಮ ಕೇಂದ್ರಕ್ಕೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು.

30 ಅಡಿಗಳಷ್ಟು ಉದ್ದವಿರುವ ಇದು, ಇಂದಿಗೂ ಗಟ್ಟಿಮುಟ್ಟಾಗಿದೆ. ತಿಮಿಂಗಿಲದ ಹಲ್ಲುಗಳು, ಬೆನ್ನುಮೂಳೆಯ ಜೋಡಣೆಗಳು, ತಲೆಯ ಭಾಗವು ಜೀವ ವೈವಿಧ್ಯದ ಅಧ್ಯಯನಕ್ಕೆ ಅತ್ಯಂತ ಸೂಕ್ತವಾಗಿದೆ. ಆ ಭಾಗದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಮುದ್ರದ ಜಲಚರಗಳ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಪ್ರದರ್ಶನಕ್ಕೆ ಇಡುವುದಾಗಿ ಕೋರಿದ್ದರು.

ಆದರೆ, ಈ ಪ್ರಸ್ತಾವಕ್ಕೆ ಜಿಲ್ಲೆಯ ಕಡಲಜೀವ ವಿಜ್ಞಾನ ಅಧ್ಯಯನ ಮಾಡುವವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಸಮುದ್ರ ಸಸ್ತನಿಯ ಇಷ್ಟೊಂದು ದೊಡ್ಡ ಅಸ್ಥಿಪಂಜರವು ಜಿಲ್ಲೆಯ ಮತ್ತೆಲ್ಲೂ ಇಲ್ಲ. ಹಾಗಾಗಿ, ಅದನ್ನು ನಗರದಲ್ಲೇ ಸಂರಕ್ಷಣೆ ಮಾಡಬೇಕು. ಸಮುದ್ರದ ಅಂಚಿನಲ್ಲೇ ಕಾಪಿಟ್ಟರೆ ಪ್ರವಾಸಿಗರನ್ನೂ ಸೆಳೆಯಲು ಸಾಧ್ಯ ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದರು.

ಈ ಬಗ್ಗೆ ‘ಪ್ರಜಾವಾಣಿ’ಯ 2021ರ ಮಾರ್ಚ್ 7ರ ಸಂಚಿಕೆಯಲ್ಲಿ ‘ಧಾರವಾಡಕ್ಕೆ ಸಾಗಲಿದೆ ಅಸ್ಥಿಪಂಜರ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಬಳಿಕ ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದಲೂ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆಯಾಗಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತವು, ಅಸ್ಥಿಪಂಜರವನ್ನು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಹಸ್ತಾಂತರಿಸಿದೆ. ಇದರೊಂದಿಗೆ ಈಗ ಇಲ್ಲಿ ಎರಡು ತಿಮಿಂಗಿಲಗಳ ಅಸ್ಥಿಪಂಜರಗಳ ಆಕರ್ಷಣೆಯಿದೆ.

‘ಆಸಕ್ತರು ವೀಕ್ಷಿಸಬಹುದು’:

‘ಮತ್ಸ್ಯಾಲಯದ ಆವರಣದಲ್ಲಿದ್ದ ತಿಮಿಂಗಿಲದ ಅಸ್ಥಿಪಂಜರವನ್ನು ಕಳಚಿ ತಂದು ಉಪ‍ ಪ್ರಾದೇಶಿಕ ವಿಜ್ಞಾನ ಕೇಂದ್ರದ ಎರಡನೇ ಮಹಡಿಯಲ್ಲಿ ಮರು ಜೋಡಣೆ ಮಾಡಲಾಗಿದೆ. ನೆಲಕ್ಕೆ ಕಂಬಗಳನ್ನು ಹುಗಿದು ಗಟ್ಟಿಗೊಳಿಸಲಾಗಿದೆ. ಅದಕ್ಕೂ ಮೊದಲು, ಸಂರಕ್ಷಣೆಯ ದೃಷ್ಟಿಯಿಂದ ಅಸ್ಥಿಪಂಜರವನ್ನು ಸ್ವಚ್ಛಗೊಳಿಸಿ ಬಣ್ಣ ಬಳಿಯಲಾಗಿದೆ. ಪ್ರವಾಸಿಗರು, ಆಸಕ್ತರು, ವಿದ್ಯಾರ್ಥಿಗಳು ಬಂದು ವೀಕ್ಷಿಸಬಹುದು’ ಎಂದು ಕೇಂದ್ರದ ಸದಸ್ಯ ಕಾರ್ಯದರ್ಶಿ ಡಾ.ಸಂಜೀವ ದೇಶಪಾಂಡೆ ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT