ಶನಿವಾರ, ಡಿಸೆಂಬರ್ 5, 2020
25 °C
ಲಾಕ್‌ಡೌನ್‌ನಿಂದ ವಾಹನ ಸಂಚಾರ ಸ್ಥಗಿತ: ಕಾಡಂಚಿನ ಹೆದ್ದಾರಿಗಳಲ್ಲಿ ಪ್ರತ್ಯಕ್ಷ

ವನ್ಯಜೀವಿಗೆ ಮುಕ್ತ ಓಡಾಟದ ಅವಕಾಶ!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್‌ ಘೋಷಣೆಯಾದ ಬಳಿಕ ಹತ್ತಾರು ಚಟುವಟಿಕೆಗಳು ನಿಂತುಹೋಗಿವೆ. ಇದೇ ರೀತಿ ವಾಹನಗಳ ಸಂಚಾರವೂ ಸ್ಥಗಿತವಾಗಿರುವುದು ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಅನುಕೂಲವಾಗಿದೆ.

ಜಿಲ್ಲೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಪ್ರವಾಸೋದ್ಯಮ ಚಟುವಟಿಕೆಗಳು ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಗರಿಷ್ಠ ಮಟ್ಟದಲ್ಲಿರುತ್ತವೆ. ಆದರೆ, ಮಾರ್ಚ್ 25ರಿಂದ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿರುವ ಕಾರಣ ಪ್ರವಾಸಿಗರು ಜಿಲ್ಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ಸುತ್ತಮುತ್ತ ವನ್ಯಜೀವಿಗಳು ಹೆದ್ದಾರಿಯಲ್ಲಿ ರಾಜಾರೋಷವಾಗಿ ಹೆಜ್ಜೆ ಹಾಕುತ್ತ ಸಾಗುತ್ತಿವೆ.

ಜೊಯಿಡಾ ತಾಲ್ಲೂಕಿನ ನುಜ್ಜಿಯಲ್ಲಿ ಕರಡಿಯೊಂದು ಮಾರ್ಚ್ 17ರಂದು ಗ್ರಾಮಸ್ಥರಿಗೆ ಹಾಡಹಗಲೇ ಕಾಣಿಸಿಕೊಂಡಿತ್ತು. ಅದೇ ದಿನ ಅಣಶಿಯಲ್ಲಿ ಒಂದು ಜಿಂಕೆ ಕಾಡಿನಿಂದ ಹೊರಗೆ ಓಡಾಡುತ್ತ ಕಾಡಂಚಿನ ಜನರನ್ನು ಅಚ್ಚರಿಗೊಳಿಸಿತ್ತು. ಕುಂಬಾರವಾಡದ ಗುಂದ್ರದಲ್ಲಿ ಮಧ್ಯಾಹ್ನದ ವೇಳೆಗೆ ಪೊದೆಯ ಮರೆಯಿಂದ ಬಂದ ಕಾಡುಕೋಣವು ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತ ಕಾಳಿ ನದಿಯತ್ತ ಸಾಗಿತ್ತು ಎಂದು ಗ್ರಾಮಸ್ಥರು ಹೇಳುತ್ತಾರೆ. 

ಇದೇರೀತಿ, ಆರೋಗ್ಯ ಸೇವೆಗಳಂತಹ ತುರ್ತು ಕಾರ್ಯಗಳಲ್ಲಿ ತೊಡಗಿರುವ ಕಾರ್ಯಕರ್ತರು ಕಾಡೆಮ್ಮೆಗಳ ಹಿಂಡು, ಕೆಂದಳಿಲು, ಕೋತಿಗಳು, ವಿವಿಧ ಸರೀಸೃಪಗಳ‌ನ್ನು ಕಾಡಂಚಿನಲ್ಲಿ ಹೆದ್ದಾರಿಯ ಬಳಿ ನಿರ್ಭಯದಿಂದ ಇರುವುದನ್ನು ಕಂಡಿದ್ದಾರೆ. ಇದೇರೀತಿ, ಯಲ್ಲಾಪುರ ತಾಲ್ಲೂಕಿನ ವಿವಿಧೆಡೆ ಕಾಡಾನೆಗಳು ಕಾಣಿಸಿಕೊಂಡಿವೆ.

‘ಮನುಷ್ಯರಿಗೆ ಈ ಭೂಮಿಯ ಮೇಲೆ ಎಷ್ಟು ಹಕ್ಕು ಇದೆಯೋ ಅಷ್ಟೇ ಸಮನಾದ ಹಕ್ಕು ಇತರ ಜೀವಿಗಳಿಗೂ ಇದೆ. ಆದ್ದರಿಂದ ಈ ರೀತಿಯ ಲಾಕ್‌ಡೌನ್‌ ವರ್ಷಕ್ಕೊಮ್ಮೆ ನಿಗದಿತ ದಿನಗಳಿಗೆ ಸೀಮಿತವಾಗಿ ಜಾರಿ ಮಾಡಿದರೆ ಉತ್ತಮ. ಒಂದು ಕಾಲದಲ್ಲಿ ಅವುಗಳ ಸ್ವಚ್ಛಂದ ಜಾಗವಾಗಿದ್ದ ಕಾಡಿನ ಮಧ್ಯೆ ನಮ್ಮ ಅನುಕೂಲಕ್ಕೆ ರಸ್ತೆಗಳನ್ನು ನಿರ್ಮಾಣ ಮಾಡಿದೆವು. ರಾತ್ರಿ, ಹಗಲೆನ್ನದೇ ವಾಹನಗಳ ಸಂಚಾರ ಆರಂಭಿಸಿದೆವು. ಈ ಮೂಲಕ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ತೊಂದರೆ ತಂದಿಟ್ಟಿದ್ದೇವೆ’ ಎನ್ನುತ್ತಾರೆ ಪರಿಸರಪ್ರಿಯ ಗಣಪತಿ. 

‘ಹೆದ್ದಾರಿಗಳಲ್ಲಿ ವಾಹನ ಸಂಚಾರ ಅತ್ಯಂತ ವಿರಳವಾಗಿರುವ ಕಾರಣ ಕಾಡುಪ್ರಾಣಿಗಳು ಕಂಡುಬರುತ್ತಿರುವುದು ವಿಶೇಷವೇನಲ್ಲ. ತಮ್ಮ ವಾಸ್ತವ್ಯಕ್ಕೆ ಕಿರಿಕಿರಿಯಾಗದಂಥ ಪ್ರದೇಶಗಳಲ್ಲಿ ವಾಸ ಮಾಡುವುದು ಅವುಗಳಿಗೆ ಇಷ್ಟ. ಹಾಗಾಗಿ ಲಾಕ್‌ಡೌನ್‌ನಿಂದ ಅವುಗಳಿಗೆ ಅನುಕೂಲಕರವಾದ ವಾತಾವರಣ ಸೃಷ್ಟಿಯಾಗಿದೆ’ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

‘ಹಿಂದೆ ಸರಿಯುವುದೇ ಸಂರಕ್ಷಣೆ’: ‘ಮನುಷ್ಯ ಎರಡು ಹೆಜ್ಜೆ ನಡೆಯುವುದೇ ಪರಿಸರ ಸಂರಕ್ಷಣೆ. ಈಗ ಕೊರೊನಾ ವೈರಸ್, ಮನುಷ್ಯರನ್ನು ಸಾಕಷ್ಟು ಹಿಂದೆ ಸರಿಸಿದೆ’ ಎನ್ನುತ್ತಾರೆ ಪರಿಸರ ಬರಹಗಾರ ಶಿವಾನಂದ ಕಳವೆ.

‘ನಾವು ಎಷ್ಟೇ ಭದ್ರ ಬೇಲಿ ಅಳವಡಿಸಿದ್ದರೂ ವನ್ಯಜೀವಿಗಳು ಜೀವದಾರಿಯಲ್ಲಿ ಬರುತ್ತವೆ. ಒಣ ಕಟ್ಟಿಗೆ, ಒಣಗೆಲೆ ಸೇರಿದಂತೆ ವಿವಿಧ ಅರಣ್ಯ ಉತ್ಪನ್ನಗಳ ಸಂಗ್ರಹಕ್ಕೆ ಮನುಷ್ಯ ಕಾಡಿಗೆ ಹೋಗುತ್ತಾನೆ. ಅವನೊಂದಿಗೆ ಸಾಕು ನಾಯಿಗಳೂ ಇರುತ್ತವೆ. ಈಗ ಎಲ್ಲ ಚಟುವಟಿಕೆಗಳೂ ನಿಂತ ಕಾರಣ ವನ್ಯಜೀವಿಗಳಿಗೆ ಅನುಕೂಲವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲೆಯ ಕಾಡುಗಳಲ್ಲಿ ನೀರಿನ ವ್ಯವಸ್ಥೆ ಚೆನ್ನಾಗಿದೆ. ದಾಂಡೇಲಿಯಲ್ಲಿ ಫೆಬ್ರುವರಿ ಕೊನೆಯ ವಾರ ಮತ್ತು ಮಾರ್ಚ್ ಆರಂಭದಲ್ಲಿ ಸಾಗವಾನಿ ಮರದ ಕೆಳಗಿನ ಹುಲ್ಲು ಹಸಿಯಾಗಿತ್ತು. ಅಲ್ಲದೇ ಸೊಳ್ಳೆಗಳು ವಿಪರೀತ ಇದ್ದವು. ಇದು ತೇವಾಂಶ ಹೆಚ್ಚಿದ್ದ ಸೂಚಕ. ಮರಗಳೂ ತಡವಾಗಿ ಎಲೆ ಉದುರಿಸಿದ್ದರಿಂದ ವನ್ಯಜೀವಿಗಳ ಆವಾಸ ಸ್ಥಾನದ ಮೇಲೆ ಪರಿಣಾಮವಾಗಿದೆ. ಅವು ಈಗ ನೀರು, ಆಹಾರ ಅರಸಿಕೊಂಡು ಬಂದಿರುವ ಸಾಧ್ಯತೆಯೂ ಇದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು