ಭಾನುವಾರ, ಜುಲೈ 25, 2021
26 °C
ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದ ಆರೋಪಿಗಳು

ಗಂಡನ ಕೊಲೆ: ಪತ್ನಿ ಸೇರಿ ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: ಗಂಡನನ್ನು ಕೊಲೆ ಮಾಡಿ, ನಂತರ ಆತ ಕಾಣೆಯಾಗಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದ ಆರೋಪಿ ಮಹಿಳೆ ಹಾಗೂ ಕುಟುಂಬದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಬಳಗಾರಿನ ಅತ್ತಗಾರಿನ, ಪ್ರಸ್ತುತ ಚಿಕ್ಕಮಾವಳ್ಳಿಯಲ್ಲಿರುವ ಶ್ವೇತಾ ರಾಜೇಶ ನಾಯ್ಕ (29), ಅವರ ತಂದೆ ದೀಪಕ್ ಬುದ್ದಾ ಮರಾಠಿ (53), ತಮ್ಮ ಗಂಗಾಧರ ಮರಾಠಿ (26) ಹಾಗೂ ತಾಯಿ ಯಮುನಾ ಮರಾಠಿ (50) ಬಂಧಿತರು.

ರಾಜೇಶ ನಾರಾಯಣ ನಾಯ್ಕ (29) ಕೊಲೆಯಾದವರು. ಪತ್ನಿ ಶ್ವೇತಾ, ತನ್ನ ಗಂಡ ಜೂನ್ 10ರಂದು ಸಂಜೆ ಮನೆಯಿಂದ ಹೋದವರು ಪುನಃ ಬಂದಿಲ್ಲ ಎಂದು ಜೂನ್ 14ರಂದು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ರಾಜೇಶ ಅವರಿಗೆ ಹುಡುಕಾಟ ನಡೆಸಿದ್ದರು.

ತನಿಖೆಯಲ್ಲಿ ಪ್ರತ್ಯೇಕವಾಗಿ ಎರಡು ತಂಡಗಳನ್ನು ರಚಿಸಿ ಶ್ವೇತಾ ಹಾಗೂ ಅವರ ಕುಟುಂಬದ ಸದಸ್ಯರನ್ನು ವಿಚಾರಣೆ ಒಳಪಡಿಸಲಾಗಿತ್ತು. ಈ ವೇಳೆ, ರಾಜೇಶ ಮತ್ತು ಶ್ವೇತಾ ನಡುವೆ ಆಸ್ತಿ ವಿಚಾರಕ್ಕೆ ಆಗಾಗ ಜಗಳವಾಗುತ್ತಿದ್ದ ವಿಚಾರ ತಿಳಿದುಬಂದಿತ್ತು.

ಇದೇ ವಿಷಯದಲ್ಲಿ ಜೂನ್ 10ರಂದು ರಾತ್ರಿ ಚಿಕ್ಕ ಮಾವಳ್ಳಿಯ ಶ್ವೇತಾಳ ತಂದೆ ಮನೆಯಲ್ಲಿ ಜೋರಾಗಿ ಜಗಳವಾಗಿತ್ತು. ರಾಜೇಶ, ಶ್ವೇತಾ, ಅತ್ತೆ, ಮಾವ, ಭಾವ ನಡುವೆ ಗಲಾಟೆ ತಾರಕಕ್ಕೇರಿತ್ತು. ಸಿಟ್ಟಿನ ಭರದಲ್ಲಿ ಆರೋಪಿಗಳು ಗುದ್ದಲಿ ಹಾಗೂ ಕಟ್ಟಿಗೆಯಿಂದ ಹೊಡೆದು ರಾಜೇಶನ ಕೊಲೆ ಮಾಡಿದ್ದರು. ಬಳಿಕ ಶವವನ್ನು ಸುಟ್ಟು ಹಾಕಿ ಮೂಳೆಗಳನ್ನು ಕಾಡಿನಲ್ಲಿ ಎಸೆದಿದ್ದರು.

ಮೃತನ ಬೈಕ್, ಮೊಬೈಲ್ ಫೋನ್ ಹಾಗೂ ಚಪ್ಪಲಿಯನ್ನು ದೇಹಳ್ಳಿ ಗ್ರಾಮದ ಕಾಡಿನಲ್ಲಿ ಎಸೆದು ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದರು. ಬೇಟೆಗೆ ಹೋದಾಗ ಯಾವುದೋ ಪ್ರಾಣಿ ಆತನನ್ನು ಕೊಂದಿರಬಹುದು ಎಂದು ನಂಬಿಸುವ ಉದ್ದೇಶ ಹೊಂದಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

ಎಸ್.ಪಿ ಶಿವಪ್ರಕಾಶ ದೇವರಾಜು, ಎ.ಎಸ್.ಪಿ ಎಸ್.ಬದರಿನಾಥ, ಡಿವೈಎಸ್ಪಿ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಸರ್ಕಲ್ ಇನ್‌ಸ್ಪೆಕ್ಟರ್ ಸುರೇಶ ಯಳ್ಳೂರು ನೇತೃತ್ವದಲ್ಲಿ ಪಿ.ಎಸ್.ಐ ಮಂಜುನಾಥ ಗೌಡರ, ಪ್ರೊಬೆಷನರಿ ಪಿ.ಎಸ್‌.ಐ ಮುಷಾಹಿದ್ ಅಹ್ಮದ್, ಎ.ಎಸ್.ಐ ಮಂಜುನಾಥ ಮನ್ನಂಗಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.