ಶುಕ್ರವಾರ, ಆಗಸ್ಟ್ 23, 2019
21 °C
ದೇವಾಲಯಗಳಲ್ಲಿ ಕಲ್ಲು ನಾಗರಕ್ಕೆ ಪೂಜೆ

ಮನೆಯಲ್ಲಿ ದಿಟ ನಾಗನ ಆರಾಧನೆ

Published:
Updated:
Prajavani

ಶಿರಸಿ: ನಾಗರ ಪಂಚಮಿ ಹಬ್ಬವನ್ನು ಸೋಮವಾರ ತಾಲ್ಲೂಕಿನಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.

ಸುರಿಯುವ ಮಳೆಯ ನಡುವೆಯೂ ಭಕ್ತರು ದೇವಾಲಯಗಳಿಗೆ ತೆರಳಿ ನಾಗರ ಕಲ್ಲಿಗೆ ನಮಿಸಿದರು. ನಿಲೇಕಣಿ ಸುಬ್ರಹ್ಮಣ್ಯ ದೇವಾಲಯಲ್ಲಿ ಸಹಸ್ರಾರು ಜನರು ಸರದಿಯಲ್ಲಿ ನಿಂತು ಪೂಜೆ ಸಲ್ಲಿಸಿದರು.

ಉರಗ ರಕ್ಷಕ ಪ್ರಶಾಂತ ಹುಲೇಕಲ್‌ ಅವರು ನಿಜ ನಾಗರನಿಗೆ ಹೂ ಹಾಕಿ, ಆರತಿ ಬೆಳಗಿ ಪೂಜಿಸಿದರು. ಉರಗ ಲೋಕದ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ವರ್ಷವೂ ಪ್ರಶಾಂತ ಹುಲೇಕಲ್‌ ಕುಟುಂಬದ ಸದಸ್ಯರು ಎರಡು ನಾಗರ ಹಾವುಗಳನ್ನು ತಂದು ಹೂ, ಅಕ್ಷತೆ, ಹಣ್ಣು–ಕಾಯಿ ಅರ್ಪಿಸಿದರು.

ಮೂರು ದಶಕಗಳಿಂದ ಸುರೇಶ ಹುಲೇಕಲ್‌ ಕುಟುಂಬ ಉರಗ ಸಂತತಿ ರಕ್ಷಣೆಯಲ್ಲಿ ತೊಡಗಿಕೊಂಡಿದೆ. ಸುರೇಶ ಹುಲೇಕಲ್‌ ಬದುಕಿದ್ದಾಗ ಇಲ್ಲಿನ ಝೂದಲ್ಲಿದ್ದ ಹಾವಿಗೆ  ಪೂಜೆ ಸಲ್ಲಿಸಿ, ಮನೆಗೂ ನಾಗರ ಹಾವನ್ನು ತಂದು ಪೂಜಿಸುತ್ತಿದ್ದರು. ಅವರ ಕಾಲಾನಂತರದಲ್ಲಿ ಮನೆಯಲ್ಲಿ ನಿಜ ನಾಗರ ಪೂಜಿಸುವ ಸಂಪ್ರದಾಯವನ್ನು ಅವರ ಮಕ್ಕಳು ಉಳಿಸಿಕೊಂಡು ಬಂದಿದ್ದಾರೆ. ಅಮ್ಮನ ಮಾರ್ಗದರ್ಶನದಲ್ಲಿ ಪ್ರಶಾಂತ ಅವರು ದಿಟ ನಾಗರನನ್ನು ಪೂಜಿಸಿದರು. ಇದೇ ವೇಳೆ ಪ್ರಶಾಂತ ಅವರ ಪುಟ್ಟ ಮಗ ವಿರಾಜ್ ಕೂಡ ಉರಗ ಪೂಜೆ ನೆರವೇರಿಸಿ ನೋಡುಗರಿಗೆ ಅಚ್ಚರಿ ಮೂಡಿಸಿದ.

ಹಾವು ಕಂಡಾಕ್ಷಣ ಹೆದರುವ ಜನರಿಗೆ ತಕ್ಷಣ ನೆನಪಾಗುವ ವ್ಯಕ್ತಿ ಪ್ರಶಾಂತ ಹುಲೇಕಲ್‌. ಕರೆ ಬಂದ ಕಡೆ ತಕ್ಷಣ ಹೋಗಿ ಚಾಣಾಕ್ಷತನದಿಂದ ಹಾವು ಹಿಡಿದು ಕಾಡಿಗೆ ಮರಳಿಸುವ ಪ್ರಶಾಂತ ಈ ವರ್ಷ 150ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
‘ಹಾವಿನ ಬಗ್ಗೆ ಜನರಲ್ಲಿರುವ ಭೀತಿ ದೂರ ಮಾಡಿ ಪ್ರೀತಿ ಹುಟ್ಟಿಸುವ ಉದ್ದೇಶದಿಂದ ಹಾವನ್ನು ತಂದು ಪೂಜಿಸುತ್ತೇವೆ. ಪೂಜಿಸಿದ ನಂತರ ಮತ್ತೆ ಮರಳಿ ಕಾಡಿಗೆ ಬಿಡುತ್ತೇವೆ. ಹಾವು ಪರಿಸರ ಸಮತೋಲನ ಕಾಪಾಡುವ ಜೀವಿಗಳು. ಹಾವನ್ನು ದ್ವೇಷಿಸುವುದು ಬೇಡ. ಹಾವನ್ನು ಕಂಡಾಗ ಕೊಲ್ಲುವ ಬದಲಾಗಿ ಓಡಿಸುವ ಪ್ರಯತ್ನ ಮಾಡಬೇಕು’ ಎಂದು ಅವರು ವಿನಂತಿಸಿದರು.

Post Comments (+)