ಸೋಮವಾರ, ನವೆಂಬರ್ 18, 2019
22 °C
30ರಿಂದ ನಾಮಪತ್ರ ಸಲ್ಲಿಕೆ: ಇಡೀ ಜಿಲ್ಲೆಗೆ ಮಾದರಿ ನೀತಿ ಸಂಹತೆ ಅನ್ವಯ

ಯಲ್ಲಾಪುರ: ಉಪ ಚುನಾವಣೆ ಅ.21ರಂದು

Published:
Updated:
Prajavani

ಕಾರವಾರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅ.21ರಂದು ಮತದಾನ ನಡೆಯಲಿದೆ. ಅಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಅ.24ರಂದು ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಗೆ ಬಂದಿದೆ. ಚುನಾವಣೆಗೆ ಸೆ.23ರಂದು ಅಧಿಸೂಚನೆ ಹೊರಡಿಸಲಾಗುವುದು. ಸೆ.30ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಅ.1ರಂದು ನಾಮಪತ್ರಗಳ ಪರಿಶೀಲನೆ ಮಾಡಲಾಗುವುದು. ಅ.3ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ. ಚುನಾವಣೆಯ ಎಲ್ಲ ಪ್ರಕ್ರಿಯೆಗಳೂ ಅ.27ರಂದು ಮುಕ್ತಾಯವಾಗಲಿದೆ’ ಎಂದು ಮಾಹಿತಿ ನೀಡಿದರು. 

ಜಿಲ್ಲೆಗೇ ಅನ್ವಯ: ‘ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳು ಮತ್ತು ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರ (ಸಂಖ್ಯೆ 81) ಒಳಗೊಂಡಿದೆ. ಇಲ್ಲಿನ ಮತದಾರರ ಮೇಲೆ ಪ್ರಭಾವ ಬೀರಬಹುದಾದ ಎಲ್ಲ ರೀತಿಯ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ನಿರ್ಬಂಧಿಸಲಾಗಿದೆ. ಹಾಗಾಗಿ ಮಾದರಿ ನೀತಿ ಸಂಹಿತೆಯು ಇಡೀ ಜಿಲ್ಲೆಗೇ ಅನ್ವಯಿಸುತ್ತದೆ’ ಎಂದು ಸ್ಪಷ್ಟಪಡಿಸಿದರು.

ಪ್ರವಾಹದಂಥ ಪ್ರಾಕೃತಿಕ ವಿಕೋಪಗಳ ಪರಿಹಾರ ಕಾಮಗಾರಿಗಳನ್ನು ಸಾಮಾನ್ಯವಾಗಿ ನೀತಿ ಸಂಹಿತೆಯಿಂದ ಹೊರಗಿಡಲಾಗುತ್ತದೆ. ಆದರೂ ಯಾವುದೇ ಕೆಲಸಗಳನ್ನು ಕೈಗೊಳ್ಳುವುದಿದ್ದರೂ ಚುನಾವಣಾ ಆಯೋಗದ ಅನುಮತಿ ಪಡೆದೇ ಮುಂದುವರಿಯಲಾಗುವುದು ಎಂದು ತಿಳಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾತನಾಡಿ, ‘ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಉಪ ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು. ಮಾದರಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಗೆ ಆದ್ಯತೆ ನೀಡಲಾಗುತ್ತದೆ. ನಿಯಮ ಬಾಹಿರ ಚಟುವಟಿಕೆ ನಡೆಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಭಾವಚಿತ್ರವಿರುವ ಪಟ್ಟಿ: ಈ ಚುನಾವಣೆಯಲ್ಲೂ ಮತದಾರರ ಭಾವಚಿತ್ರವುಳ್ಳ ಮತದಾರರ ಪಟ್ಟಿಯನ್ನು ಬಳಸಲಾಗುತ್ತದೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ನೀಡಲಾಗಿದ್ದ ರೀತಿಯ ಎಲ್ಲ ಸೌಲಭ್ಯಗಳನ್ನೂ ಈ ಉಪಚುನಾವಣೆಯಲ್ಲೂ ನೀಡಲಾಗುವುದು. ಅಂಗವಿಕಲರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಡಾ.ಹರೀಶಕುಮಾರ್ ತಿಳಿಸಿದರು.

ಮತದಾನ ಮಾಡಲು ಮತದಾರರ ಗುರುತಿನ ಚೀಟಿಯನ್ನು ಮುಖ್ಯ ದಾಖಲೆಯೆಂದು ಪರಿಗಣಿಸಲಾಗುತ್ತದೆ. ಒಂದುವೇಳೆ ಪರ್ಯಾಯ ದಾಖಲೆಗಳನ್ನು ತೋರಿಸಿ ಮತದಾನ ಮಾಡಲು ಅವಕಾಶ ನೀಡುವ ಬಗ್ಗೆ ಮುಂದಿನ ದಿನಗಳಲ್ಲಿ ಸೂಚನೆ ನೀಡುವುದಾಗಿ ಚುನಾವಣಾ ಆಯೋಗ ತಿಳಿಸಿದೆ ಎಂದು ಅವರು ಹೇಳಿದರು.

ಅಂಕಿ ಅಂಶ

ಯಲ್ಲಾಪುರ ವಿಧಾನಸಭಾ ಕ್ಷೇತ್ರ

* 1,72,630 ಒಟ್ಟು ಮತದಾರರು

* 87,942 ಪುರುಷರು

* 84,687 ಮಹಿಳೆಯರು

* 01 ಇತರ

ಒಟ್ಟು ಮತಗಟ್ಟೆಗಳು; 231

ಪ್ರತಿಕ್ರಿಯಿಸಿ (+)