ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಡಿಮೆ ಬೆಲೆಗೆ ಚಿನ್ನ ಪಡೆಯಲು ಹೋಗಿ ₹ 7.9 ಲಕ್ಷ ಕಳೆದುಕೊಂಡ ವ್ಯಕ್ತಿ

Published 21 ಜೂನ್ 2024, 15:55 IST
Last Updated 21 ಜೂನ್ 2024, 15:55 IST
ಅಕ್ಷರ ಗಾತ್ರ

ಯಲ್ಲಾಪುರ: ಬ್ಯಾಂಕಿನ ಅಧಿಕೃತ ಬಂಗಾರ ಪರೀಕ್ಷಕ (ಗೋಲ್ಡ್ ಅಪ್ರೂವರ್‌) ಎಂದು ಪರಿಚಯಿಸಿಕೊಂಡವನೊಬ್ಬ ವ್ಯಕ್ತಿಯೊಬ್ಬರಿಗೆ ಒಟ್ಟು ₹ 7.9 ಲಕ್ಷ ವಂಚಿಸಿದ್ದು, ಜೀವ ಬೆದರಿಕೆ ಹಾಕಿದ್ದಾನೆ.

‘ರವೀಂದ್ರ ನಗರದ ತುಳಸಿದಾಸ ಕುರ್ಡೇಕರ ಎಂಬವರು ನನ್ನನ್ನು ನಂಬಿಸಿ ₹ 1.5 ಲಕ್ಷ ರೂ ಪಡೆದು ನಕಲಿ ಬಂಗಾರ ನೀಡಿ ಮೋಸ ಮಾಡಿದ್ದಾರೆ. ಅಲ್ಲದೆ ಮನೆಯಲ್ಲಿದ್ದ ₹ 5.5 ಲಕ್ಷ ಮೌಲ್ಯದ ಅಡಿಕೆಯನ್ನು ಪಡೆದು ಪರಾರಿಯಾಗಿದ್ದಾರೆ’ ಎಂದು ನಂದೊಳ್ಳಿಯ ಭಾಸ್ಕರ್ ನಾಯ್ಕ ಬುಧವಾರ ಯಲ್ಲಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನೆ ವಿವರ: ನಂದೊಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಳಖಂಡ ಗ್ರಾಮದ ನಿವಾಸಿ ವೆಲ್ಡಿಂಗ್‌ ಕೆಲಸ ಮಾಡುವ ಭಾಸ್ಕರ್ ನಾಯ್ಕ ಅವರನ್ನು ಭೇಟಿ ಮಾಡಿದ ತುಳಸಿದಾಸ ಕುರ್ಡೇಕರ ತನ್ನನ್ನು ಬ್ಯಾಂಕಿನ ‘ಗೋಲ್ಡ್ ಅಪ್ರೆಂಜರ್’ ಎಂದು ಪರಿಚಯಿಸಿಕೊಂಡು ಬ್ಯಾಂಕಿನಲ್ಲಿ ರಾಜೇಶ್ ಮಹಾಲೆ ಎಂಬವರು ಅಡವಿಟ್ಟ ಬಂಗಾರ ಇದ್ದು, ಅದನ್ನು ತಮಗೆ ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ. ಅದರಂತೆ, ರಾಜೇಶ ಅವರ ಜೊತೆ ಭಾಸ್ಕರನನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ ಭಾಸ್ಕರನಿಂದ ₹ 99,870ರೂ ತುಂಬಿಸಿ ಅಲ್ಲಿದ್ದ ಒಡವೆಗಳನ್ನು ಬಿಡಿಸುತ್ತಾರೆ.

ಬ್ಯಾಂಕಿನಲ್ಲಿ ಅಡವಿದ್ದ ಈ ಒಡವೆಗಳು ಈ ಹಿಂದೆ ಆರೋಪಿ ತುಳಸಿದಾಸ ಕುರ್ಡೇಕರ್ ಪರಿಶೀಲಿಸಿ ಪ್ರಮಾಣಪತ್ರ ನೀಡಿದ್ದಾಗಿದ್ದವು. ಬಿಡಿಸಲಾದ ಈ ಒಡವೆಯನ್ನು ಕರಗಿಸಿ 916 ಗುರುತಿನ ನಾಲ್ಕು ಬಳೆ ಮಾಡಿಕೊಡುವುದಾಗಿ ತುಳಸಿದಾಸ ಕುರ್ಡೇಕರ್ ಭಾಸ್ಕರರನ್ನು ಒಪ್ಪಿಸುತ್ತಾನೆ. ಪ್ರತಿಯಾಗಿ ಭಾಸ್ಕರ ಮತ್ತೆ ₹ 1.5 ಲಕ್ಷ ನೀಡಿ, ಉಳಿದ ₹ 50 ಸಾವಿರ ನಂತರ ನೀಡುವುದಾಗಿ ಹೇಳುತ್ತಾನೆ. ಕೆಲ ದಿನಗಳ ನಂತರ ತುಳಸಿದಾಸ್ 4 ಬಳೆಗಳನ್ನು ಭಾಸ್ಕರನಿಗೆ ನೀಡಿ ಉಳಿದ ಹಣ ₹ 50 ಸಾವಿರ ನೀಡುವಂತೆ ಕೇಳಿದ.

ಆಗ, ಭಾಸ್ಕರ್ ನಾಯ್ಕ, ‘ತನ್ನಲ್ಲಿ 5.5 ಲಕ್ಷದ ಅಡಿಕೆ ಇದ್ದು ಅದನ್ನು ಮಾರಾಟ ಮಾಡಿ ಹಣ ನೀಡುವೆ’ ಎಂದಾಗ ತುಳಸೀದಾಸ ‘ನಾನೇ ಉತ್ತಮ ಬೆಲೆಗೆ ಅಡಿಕೆ ಮಾರಿ ಕೊಡುತ್ತೇನೆ’ ಎಂದು ಹೇಳಿ ಹಣ ನೀಡದೆ ಅಡಿಕೆಯನ್ನು ಅಲ್ಲಿಂದ ಸಾಗಿಸುತ್ತಾನೆ.

ಈ ನಡುವೆ ತುಳಸಿದಾಸ್ ನೀಡಿದ 4 ಬಳೆಗಳನ್ನು ಭಾಸ್ಕರ ಇನ್ನೊಬ್ಬರ ಬಳಿ ಪರಿಶೀಲಿಸಿದಾಗ ಅದು ನಕಲಿ ಎಂಬುದು ತಿಳಿಯುತ್ತದೆ. ಅಲ್ಲದೆ ಬಂಗಾರದ ಮೇಲೆ 916 ಎಂದು ಅಂಟಿನಿಂದ ಅಂಟಿಸಿರುವುದು ಬೆಳಕಿಗೆ ಬರುತ್ತದೆ. ಮೋಸ ಹೋದ ಬಗ್ಗೆ ಅರಿತ ಭಾಸ್ಕರ್ ನಾಯ್ಕ ಈ ಬಗ್ಗೆ ಪ್ರಶ್ನಿಸಲು ರವೀಂದ್ರ ನಗರದಲ್ಲಿರುವ ತುಳಸೀದಾಸನ ಮನೆಗೆ ಹೋದಾಗ ಅಲ್ಲಿದ್ದ ತುಳಸಿದಾಸ ಕುರ್ಡೇಕರ್ ಹಾಗೂ ಅವರ ಕುಟುಂಬದವರಾದ ರೇಷ್ಮಾ ತುಳಸಿದಾಸ, ಸಚಿನ್ ಕುರ್ಡೇಕರ್, ಸೀಮಾ ಕುರ್ಡೇಕರ ಭಾಸ್ಕರನನ್ನು ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT