ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಮಾದರಿಯಾದ ‘ಕೊಲ್ಲೂರಿ’ ಕೃಷಿ, ಜಮೀನಿನ ಸಮೀಪ ಸಾಮಾಜಿಕ ಅರಣ್ಯ

Published 29 ಮಾರ್ಚ್ 2024, 4:59 IST
Last Updated 29 ಮಾರ್ಚ್ 2024, 4:59 IST
ಅಕ್ಷರ ಗಾತ್ರ

ಶಿರಸಿ: ಕಾಲದ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಜೊತೆಗೆ ವೈಜ್ಞಾನಿಕ ದೃಷ್ಟಿಕೋನದಿಂದ ಕೃಷಿಯಲ್ಲಿ ತೊಡಗಿಕೊಂಡರೆ ಲಾಭ ಪಡೆಯಲು ಸಾಧ್ಯ ಎಂಬುದಕ್ಕೆ ಕೃಷಿಕ ದುಶ್ಯಂತರಾಜ್ ಕೊಲ್ಲೂರಿ ಸಾಕ್ಷಿಯಾಗಿದ್ದಾರೆ. 

ತಾಲ್ಲೂಕಿನ ಇಸಳೂರು ಗ್ರಾಮದಲ್ಲಿ ತಂದೆಯಿಂದ ಬಳುವಳಿಯಾಗಿ ಬಂದ 26 ಎಕರೆ ಪ್ರದೇಶದಲ್ಲಿ ಬಹು ಬೆಳೆ ಕೃಷಿಯಲ್ಲಿ ತೊಡಗಿಕೊಂಡಿರುವ ಕೊಲ್ಲೂರಿ ಯುವ ಕೃಷಿಕರಿಗೆ ಮಾದರಿಯಾಗಿದ್ದಾರೆ. ಭತ್ತ, ತೆಂಗು, ಮಾವು, ಅಡಿಕೆ, ಬಾಳೆ, ಚಿಕ್ಕು, ಕಾಳುಮೆಣಸು, ಏಲಕ್ಕಿ, ಕೊಕೊ, ಕಾಫಿ ಬೆಳೆ ಇವರ ಕೃಷಿ ಜಮೀನನಲ್ಲಿ ನೆಲೆ ನಿಂತಿವೆ. ವಾರ್ಷಿಕ ₹ 20 ಲಕ್ಷಕ್ಕೂ ಹೆಚ್ಚಿನ ಆದಾಯ ಇವರದ್ದಾಗಿದೆ. ಈ ಭಾಗದಲ್ಲಿ ಕೊಲ್ಲೂರಿ ಕೃಷಿ ಎಂದೇ ಇವರ ಕೃಷಿ ಖ್ಯಾತವಾಗಿದೆ.

ಯಾಂತ್ರೀಕರಣಕ್ಕೆ ಒತ್ತು: ಕೊಲ್ಲೂರಿ ಅವರು ಕಳೆದ 45 ವರ್ಷಗಳಿಂದ ಕೃಷಿಯನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡು ಬಂದಿದ್ದಾರೆ. ಸ್ವತಃ ತೋಟದ ಕೆಲಸ ಮಾಡುವ ಅವರು ಹೆಚ್ಚುವರಿ ಕೆಲಸಕ್ಕೆ ಕೂಲಿಗಳನ್ನು ಬಳಸಿಕೊಳ್ಳುತ್ತಾರೆ. ಸ್ವತಃ ಭತ್ತ ಒಕ್ಕುವ ಯಂತ್ರ, ನಾಟಿ ಯಂತ್ರ, ಅಡಿಕೆ ಸುಲಿಯುವ ಯಂತ್ರ, ಟಿಲ್ಲರ್ ಬಳಕೆ ಮಾಡುತ್ತಾರೆ. ಇದರಿಂದ ಕೂಲಿ ಸಮಸ್ಯೆ ಕಾಡುವುದಿಲ್ಲ. ‘ಕೃಷಿಯನ್ನು ಕಾಲದ ಬದಲಾವಣೆಗೆ ಹೊಂದಿಕೊಂಡು ಮುಂದೆ ಸಾಗಬೇಕು’ ಎಂಬುದು ಅವರ ಮಾತು. 

ಸಾಮಾಜಿಕ ಅರಣ್ಯ:  ಕೃಷಿಗೆ ಪೂರಕವಾಗಿ ತಮ್ಮದೇ ಜಮೀನಿನ ಸಮೀಪ ಸಾಮಾಜಿಕ ಅರಣ್ಯ ಬೆಳೆಸಿದ್ದಾರೆ. ಮೂರು ಎಕರೆ ಜಾಗದಲ್ಲಿ ವಿವಿಧ ಅರಣ್ಯ ಜಾತಿಯ ಗಿಡಗಳನ್ನು ಬೆಳೆಸಿದ್ದಾರೆ. ಅವುಗಳಿಂದ ಸಿಗುವ ದರಕಲು, ಹಸಿ ಸೊಪ್ಪನ್ನು ತೋಟಕ್ಕೆ ಬಳಸಿಕೊಳ್ಳುತ್ತಾರೆ. ಕಟ್ಟಿಗೆಯನ್ನು ಮನೆ ಬಳಕೆಗೆ ತರುತ್ತಾರೆ. ‘ಕೃಷಿಯ ಜೊತೆ ಅದಕ್ಕೆ ಪೂರಕ ಚಟುವಟಿಕೆ ಕೈಗೊಳ್ಳಲು ಅವಕಾಶ ನಿರ್ಮಿಸಿಕೊಳ್ಳಬೇಕು' ಎನ್ನುತ್ತಾರೆ ಅವರು.  

ಕೃಷಿ ಹೊಂಡಕ್ಕೆ ಮಹತ್ವ: ‘ಈ ಹಿಂದೆ ನೀರಾವರಿಗೆ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿದ್ದು, ಕ್ರಮೇಣ ನೀರು ಇಳಿಕೆಯಾಗಿತ್ತು. ನಂತರದ ವರ್ಷಗಳಲ್ಲಿ ಜಮೀನಿನಲ್ಲಿ 40X50 ಅಳತೆಯ 6 ಕೃಷಿಹೊಂಡಗಳು, ತೆರೆದ ಬಾವಿಗಳನ್ನು ನಿರ್ಮಿಸಿ ಅದರಿಂದ ನೀರು ಹಾಯಿಸುತ್ತಿದ್ದೇನೆ. ನಮ್ಮ ಜಮೀನಿಗೆ ಈವರೆಗೆ ನೀರಿನ ಕೊರತೆಯಾಗಿಲ್ಲ. ಪ್ರಸಕ್ತ ವರ್ಷ ಬರಗಾಲವಾದ ಕಾರಣ ನೀರಿನ ಮಿತ ಬಳಕೆಗೆ ಆದ್ಯತೆ ನೀಡಿದ್ದೇನೆ’ ಎಂದು ಹೇಳಿದರು. 

ಸಾವಯವ ಕೃಷಿಗೆ ಆದ್ಯತೆ: ‘ಶೇ 80ರಷ್ಟು ಬೆಳೆಗೆ ಸಾವಯವ ಗೊಬ್ಬರ ನೀಡುತ್ತೇನೆ. ಶೇ 20ರಷ್ಟು ರಾಸಾಯನಿಕ ಗೊಬ್ಬರವನ್ನು ಮೇಲು ಗೊಬ್ಬರವಾಗಿ ಬಳಸುತ್ತೇನೆ. ಇದರಿಂದ ಇಳುವರಿ ಉತ್ತಮವಾಗಿ ಬರುತ್ತದೆ. ಕೇವಲ ರಾಸಾಯನಿಕ ಗೊಬ್ಬರ ಬಳಸಿದರೆ ಭೂಮಿಯ ಸತ್ವ ಕ್ರಮೇಣ ಹಾಳಾಗುತ್ತದೆ. 10 ಜಾನುವಾರು, 25 ಕುರಿಗಳಿವೆ. ಅವುಗಳಿಂದ ಸಿಗುವ ಗೊಬ್ಬರವನ್ನು ಕೃಷಿಗೆ ಬಳಸಿಕೊಳ್ಳುತ್ತೇನೆ. ನಿತ್ಯ 6-8 ಲೀಟರ್ ಹಾಲು ಕೂಡ ಮಾರುತ್ತೇನೆ’ ಎಂಬುದು ದುಶ್ಯಂತರಾಜ್ ಅವರ ಮಾತಾಗಿದೆ.

‘ಇತ್ತೀಚೆಗೆ ಮಂಗಗಳ ಹಾವಳಿ ಹೆಚ್ಚಿದ್ದು, ಬಾಳೆ ಕೃಷಿ ಮಾಡುವುದು ದುಸ್ತರವಾಗಿದೆ. ಬದಲಿಯಾಗಿ ಕೊಕೊ ಹಾಗೂ ಕಾಫಿ ನಾಟಿ ಮಾಡಿದ್ದೇನೆ. ಅಡಿಕೆ, ತೆಂಗು ಮಾರಲು ಶಿರಸಿ, ಮಾವಿಗೆ ಹಾನಗಲ್ ಮಾರುಕಟ್ಟೆ ಅವಲಂಬಿಸಿದ್ದೇನೆ’ ಎಂದು ಅವರು ಮಾಹಿತಿ ನೀಡಿದರು. 

ಮಾವಿನ ತೋಪಿನಲ್ಲಿ ಕೊಲ್ಲೂರಿ
ಮಾವಿನ ತೋಪಿನಲ್ಲಿ ಕೊಲ್ಲೂರಿ
ಕೃಷಿಯನ್ನು ಬದುಕಿನ ಭಾಗವಾಗಿ ಸ್ವೀಕರಿಸಬೇಕು. ಪ್ರಾಮಾಣಿಕತೆಯ ಜೊತೆ ವೈಜ್ಞಾನಿಕವಾಗಿ ತೊಡಗಿಕೊಂಡರೆ ಕೃಷಿಯನ್ನು ಲಾಭದಾಯಕ ಕ್ಷೇತ್ರವನ್ನಾಗಿ ಮಾಡಿಕೊಳ್ಳಬಹುದು.
-ದುಶ್ಯಂತರಾಜ್ ಕೊಲ್ಲೂರಿ, ಪ್ರಗತಿಪರ ಕೃಷಿಕ
ಕೃಷಿಯಲ್ಲಿ ಯಾವುದೇ ತಾಂತ್ರಿಕತೆ ಅಳವಡಿಸಿಕೊಳ್ಳಲು ಮುಂಚೂಣಿಯಲ್ಲಿರುವ ಕೊಲ್ಲೂರಿ ಅವರು ಸಾವಯವ ಕೃಷಿಗೆ ಮಹತ್ವ ನೀಡಿದ್ದಾರೆ. ಸುತ್ತಮುತ್ತಲ ರೈತರಿಗೆ ಸ್ಪೂರ್ತಿದಾಯಕವಾಗಿದ್ದಾರೆ.
-ನಂದೀಶ ಆರ್., ಕೃಷಿ ಅಧಿಕಾರಿ ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT