ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ವಾಸರೆಗೆ ಜಯ

ಜಿಲ್ಲೆಯಲ್ಲಿ ಕೇವಲ ಶೇ 59.20ಯಷ್ಟು ಮತದಾನ: 2,810 ಸದಸ್ಯರಿಂದ ಹಕ್ಕು ಚಲಾವಣೆ
Last Updated 21 ನವೆಂಬರ್ 2021, 15:33 IST
ಅಕ್ಷರ ಗಾತ್ರ

ಕಾರವಾರ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಪತ್ರಕರ್ತ, ದಾಂಡೇಲಿಯ ಬಿ.ಎನ್.ವಾಸರೆ ಗೆಲುವು ಸಾಧಿಸಿದ್ದಾರೆ. ಚಲಾವಣೆಯಾದ ಒಟ್ಟು 2,810 ಮತಗಳಲ್ಲಿ 2,168 ಮತಗಳನ್ನು ಪಡೆದು ಭರ್ಜರಿ ಜಯ ತಮ್ಮದಾಗಿಸಿಕೊಂಡಿದ್ದಾರೆ.

ಬಿ.ಎನ್.ವಾಸರೆ
ಬಿ.ಎನ್.ವಾಸರೆ

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಅವರಿಗೇ ಹೆಚ್ಚಿನ ಮತಗಳು ಲಭಿಸಿವೆ. ಕಳೆದ ಬಾರಿಯೂ ಸ್ಪರ್ಧಿಸಿದ್ದ ಅವರು ಅತ್ಯಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದರು. ಅವರ ಸಮೀಪ‍ದ ಪ್ರತಿಸ್ಪರ್ಧಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಯಲ್ಲಾಪುರ ಘಟಕದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ನಿರೀಕ್ಷಿತ ಮಟ್ಟದಲ್ಲಿ ಮತಗಳನ್ನು ಗಳಿಸಲು ಸಫಲರಾಗಲಿಲ್ಲ.

ಈ ಬಾರಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಕಣದಲ್ಲಿ ಐವರು ಸ್ಪರ್ಧಿಸಿದ್ದರು. ಹೊನ್ನಾವರದ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ, ಪರಿಷತ್ತಿನ ಹಿರಿಯ ಸದಸ್ಯೆ ಹೊನ್ನಾವರದ ಶಾರದಾ ಭಟ್ ಹಾಗೂ ದಾಂಡೇಲಿಯ ವಕೀಲ ರಾಘವೇಂದ್ರ ಗಡ್ಡೆಪ್ಪನವರ್ ಸ್ಪರ್ಧಿಸಿದ್ದ ಇತರ ಮೂವರು.

ಆಯಾ ತಾಲ್ಲೂಕುಗಳ ತಹಶೀಲ್ದಾರ್ ಕಚೇರಿಗಳಲ್ಲಿ ಮತ್ತು ಭಟ್ಕಳದ ಮಾವಳ್ಳಿಯಲ್ಲಿ ಸೇರಿದಂತೆ ಒಟ್ಟು 13 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಳಿಗ್ಗೆ 8ರಿಂದ ಸಂಜೆ 4ರ ತನಕ ಮತದಾನ ನಡೆಯಿತು. ತಾಲ್ಲೂಕುಗಳಲ್ಲಿ ಮತ ಎಣಿಕೆ ಮಾಡಿ ಕಾರವಾರ ತಹಶೀಲ್ದಾರ್ ಕಚೇರಿಗೆ ಮಾಹಿತಿ ನೀಡಲಾಯಿತು. ಬಳಿಕ ಎಲ್ಲ ತಾಲ್ಲೂಕುಗಳ ಮತಗಳನ್ನು ಒಟ್ಟು ಸೇರಿಸಿ ವಿಜೇತರನ್ನು ಘೋಷಿಸಲಾಯಿತು. ಕಾರವಾರ ತಹಶೀಲ್ದಾರ್ ನಿಶ್ಚಲ್ ನರೋನಾ ಚುನಾವಣಾಧಿಕಾರಿಯಾಗಿದ್ದರು.

‘ಆಜೀವ ಸದಸ್ಯರ ಗೆಲುವು’:

‘ನಾನು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಮತಗಳು ನನಗೆ ಚಲಾವಣೆಯಾಗಿವೆ. ಪರಿಷತ್ತಿನಲ್ಲಿ ಹೊಸತನವನ್ನು ಬಯಸಿ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಭಾವಿಸಿದ್ದೇನೆ. ಇದು ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಗೆಲುವಾಗಿದೆ. ಪ್ರಣಾಳಿಕೆಯನ್ನು ನಾನು ನೀಡಿದ ಎಲ್ಲ ಭರವಸೆಗಳನ್ನು ಐದು ವರ್ಷಗಳ ಅಧಿಕಾರಾವಧಿಯಲ್ಲಿ ಈಡೇರಿಸುತ್ತೇನೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಬಿ.ಎನ್.ವಾಸರೆ ಪ್ರತಿಕ್ರಿಯಿಸಿದ್ದಾರೆ.

ನೀರಸ ಮತದಾನ:

ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಈ ಬಾರಿ ಜಿಲ್ಲೆಯಲ್ಲಿ ಶೇ 59.20ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 4,747 ಮತದಾರರಿದ್ದು, ಕೇವಲ 2,810 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 3,633 ಪುರುಷರಲ್ಲಿ 2,138 ಹಾಗೂ 1,114 ಮಹಿಳೆಯರಲ್ಲಿ 672 ಮಂದಿ ಮತದಾನದಲ್ಲಿ ಭಾಗವಹಿಸಿದ್ದಾರೆ.

ಅಂಕೋಲಾದಲ್ಲಿ ಅತಿ ಹೆಚ್ಚು ಶೇ 77ರಷ್ಟು ಮತದಾನವಾಯಿತು. 392 ಮತದಾರರಲ್ಲಿ 302 ಮಂದಿ ತಮ್ಮ ಆಯ್ಕೆಯನ್ನು ಮತಪೆಟ್ಟಿಗೆಯಲ್ಲಿ ಭದ್ರಗೊಳಿಸಿದರು. ಸಿದ್ದಾಪುರದಲ್ಲಿ ಅತಿ ಕಡಿಮೆ ಶೇ 42.8ರಷ್ಟು (115 ಜನ) ಮತದಾರರು ಹಕ್ಕು ಚಲಾಯಿಸಿದರು. ಇಲ್ಲಿ 209 ಸದಸ್ಯರಿದ್ದಾರೆ.

ಯಾರಿಗೆ, ಎಷ್ಟು ಮತ

ಅಭ್ಯರ್ಥಿ;ಪಡೆದ ಮತ

ಬಿ.ಎನ್.ವಾಸರೆ;2,168

ವೇಣುಗೋಪಾಲ ಮದ್ಗುಣಿ;348

ಕೃಷ್ಣಮೂರ್ತಿ ಹೆಬ್ಬಾರ;155

ಶಾರದಾ ಭಟ್;61

ರಾಘವೇಂದ್ರ ಗಡ್ಡೆಪ್ಪನವರ್;57

ತಿರಸ್ಕೃತ;21

ಒಟ್ಟು;2,810

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT