ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ‘ಶಕ್ತಿ’ ಯೋಜನೆಗೆ ವಿದ್ಯಾರ್ಥಿಗಳ ಹಿಡಿಶಾಪ

ಬಸ್ ಏರಲಾಗುತ್ತಿಲ್ಲ, ಆಸನವೂ ಸಿಗುತ್ತಿಲ್ಲ: ನೂಕುನುಗ್ಗಲಿನಲ್ಲಿ ಪ್ರಯಾಣದ ಅನಿವಾರ್ಯತೆ
Published 17 ಜೂನ್ 2024, 4:24 IST
Last Updated 17 ಜೂನ್ 2024, 4:24 IST
ಅಕ್ಷರ ಗಾತ್ರ

ಕಾರವಾರ: ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದ ಬಳಿಕ ಹಲವರಿಗೆ ಅನುಕೂಲವಾಗಿದೆ. ಇದೇ ಯೋಜನೆ ಮತ್ತೆ ಕೆಲವರಿಗೆ ಸಮಸ್ಯೆಯನ್ನೂ ತಂದೊಡ್ಡಿದೆ. ನಿರಾಯಾಸವಾಗಿ ಪ್ರಯಾಣಿಸಲಾಗದೆ ವಿದ್ಯಾರ್ಥಿಗಳು ಈಗ ಯೋಜನೆಗೆ ಹಿಡಿಶಾಪ ಹಾಕುವ ಸ್ಥಿತಿ ಜಿಲ್ಲೆಯಲ್ಲಿದೆ.

ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್ ಸಂಚಾರದ ವೇಳೆಯಲ್ಲಿ ಬದಲಾವಣೆ, ಕೆಲವು ಮಾರ್ಗಗಳ ಸಂಚಾರ ಮೊಟಕುಗೊಳಿಸುವಂತ ಪ್ರಕ್ರಿಯೆ ನಡೆದಿದೆ. ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳುವ ಅವಧಿಯಲ್ಲೇ ಬಸ್ ಇಲ್ಲದಿರುವುದು, ಇದ್ದರೂ ಪ್ರಯಾಣಿಕರ ದಟ್ಟಣೆಯಿಂದ ನೂಕುನುಗ್ಗಲು ಉಂಟಾಗಿ ಬಸ್ ಏರಲಾಗದ ಸ್ಥಿತಿ ಎದುರಾಗುತ್ತಿದೆ. ಇದು ವಿದ್ಯಾರ್ಥಿ ಮತ್ತು ಪಾಲಕರ ವಲಯದ ಬೇಸರಕ್ಕೆ ಕಾರಣವಾಗಿದೆ.

ಶಿರಸಿ ವಿಭಾಗದಲ್ಲಿ 490 ರಷ್ಟು ಮಾರ್ಗಗಳಿಗೆ ಬಸ್ ಸಂಚರಿಸುತ್ತಿದೆ. ಕೋವಿಡ್‍ಗೆ ಮುನ್ನ ಹಲವು ಮಾರ್ಗಗಳು ರದ್ದುಗೊಂಡಿದ್ದವು. ಇದುವರೆಗೂ ಗ್ರಾಮೀಣ ಭಾಗದ ಹಲವು ಮಾರ್ಗಕ್ಕೆ ಬಸ್ ಸಂಚರಿಸುತ್ತಿಲ್ಲ ಎಂಬ ದೂರುಗಳಿವೆ. ಅಧಿಕಾರಿಗಳನ್ನು ವಿಚಾರಿಸಿದರೆ ಬಸ್ ಸಂಚಾರ ಆರಂಭಿಸಿದ್ದೇವೆ ಎನ್ನುತ್ತಿದ್ದಾರೆ.

ಶಿರಸಿ ತಾಲ್ಲೂಕು ಕೇಂದ್ರದಿಂದ ಅಂದಾಜು 30 ಕಿ.ಮೀ ದೂರದಲ್ಲಿರುವ ಕೆಳಾಸೆ, ಕುದ್ರಗೋಡ ಗ್ರಾಮಗಳಿಗೆ ಸಮರ್ಪಕ ರಸ್ತೆ ಇಲ್ಲದ ಕಾರಣಕ್ಕೆ ಬಸ್ ಸೌಕರ್ಯವಿಲ್ಲ. ಹೀಗಾಗಿ ಇಲ್ಲಿನ ಮಕ್ಕಳು ಶಾಲೆಗೆ ತೆರಳಲು ಖಾಸಗಿ ವಾಹನ ಇಲ್ಲವೇ ಕಾಲ್ನಡಿಗೆಯಲ್ಲೇ ಸಾಗುವ ಅನಿವಾರ್ಯತೆಯಿದೆ.

ಮುಂಡಗೋಡ ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳು ಬಸ್‌ಗಾಗಿ ಪರದಾಡುವುದು ಹೆಚ್ಚಾಗಿದೆ. ಬಾಚಣಕಿ, ಅರಿಶಿಣಗೇರಿ, ಬಡ್ಡಿಗೇರಿ, ಸನವಳ್ಳಿ, ಪಾಳಾ, ಮಳಗಿ, ಬೆಡಸಗಾಂವ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಶಾಲಾ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಬಸ್‌ಗಳಿಗಾಗಿ ಕಾಯುತ್ತ ನಿಲ್ಲುವ ಪರಿಸ್ಥಿತಿ ಮುಂದುವರೆದಿದೆ.

ಭಟ್ಕಳ ತಾಲ್ಲೂಕಿನಲ್ಲಿ ವೇಗದೂತ ಬಸ್ಸು ಸಂಚಾರ ಮಗಿಸಿ ಬಂದ ನಂತರ ಗ್ರಾಮೀಣ ಭಾಗಕ್ಕೆ ತೆರಳುತ್ತಿದ್ದು, ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ತೊಂದರೆಯಾಗುತ್ತಿದೆ ಎನ್ನುತ್ತಾರೆ ಭಟ್ಕಳ ಡಿಪೊ ವ್ಯವಸ್ಥಾಪಕ ದಿವಾಕರ.

ಯಲ್ಲಾಪುರ ತಾಲ್ಲೂಕಿನ ಮಾವಿನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಳ್ಳಿ ಗ್ರಾಮಕ್ಕೆ ಬಸ್‌ ಬಿಡುವಂತೆ ಬೇಡಿಕೆ ಇದೆ. ಕಮ್ಮಾಣಿಗೆ ಬಿಡುತ್ತಿದ್ದ ಬಸ್‌ ಗುಳ್ಳಾಪುರ ಸೇತುವೆ ಕುಸಿತದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ. ಕಿರವತ್ತಿಯಿಂದ ಯಲ್ಲಾಪುರಕ್ಕೆ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು ಅವರ ಅನುಕೂಲಕ್ಕೆ ಶಾಲಾ ಅವಧಿಗೆ ಸೂಕ್ತವಾಗುವಂತೆ ಹೆಚ್ಚುವರಿ ಬಸ್‌ ಬಿಡಬೇಕು ಎಂಬ ಬೇಡಿಕೆ ಇದೆ.

ಸರ್ಕಾರದ ಶಕ್ತಿ ಯೋಜನೆಯಿಂದ ಧಾರ್ಮಿಕ ಕ್ಷೇತ್ರ ಗೋಕರ್ಣಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ಇಲ್ಲಿಂದ ಹೊರಡುವ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತಿದೆ. ಇದರಿಂದಾಗಿ ಗೋಕರ್ಣ ಮತ್ತು ಗ್ರಾಮೀಣ ಭಾಗದಿಂದ ಕುಮಟಾ, ಅಂಕೋಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಏರಲೂ ಆಗದ ಸ್ಥಿತಿ ಇದೆ.

ಹಳಿಯಾಳ ಭಾಗದಲ್ಲಿ ಮಹಿಳಾ ಪ್ರಯಾಣಿಕರು ದಾಖಲೆ ಸಂಖ್ಯೆಗಳಲ್ಲಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದು ಇದರಿಂದ ವಿದ್ಯಾರ್ಥಿಗಳು ಅವಲಂಬಿಸಿರುವ ಬಸ್‍ಗಳ ದಟ್ಟಣೆಯಿಂದ ತುಂಬಿ ಸಮಸ್ಯೆ ಉಂಟಾಗುತ್ತಿರುವ ದೂರುಗಳಿವೆ. ಅಳ್ನಾವರ, ಹಳಿಯಾಳ, ಕಲಘಟಗಿ, ವಾಡಾ, ಗರಡೊಳ್ಳಿ, ಭಾಗವತಿ, ಸಾಂಬ್ರಾಣಿ ಭಾಗಗಳಿಗೆ ವಿದ್ಯಾರ್ಥಿಗಳ ಅನುಕೂಲಕ್ಕೆ ಹೆಚ್ಚುವರಿ ಬಸ್ ಬಿಡಲು ಬೇಡಿಕೆ ಇದೆ.

ಅಂಕೋಲಾ ತಾಲ್ಲೂಕಿನ ಹಲವು ಗ್ರಾಮಗಳಿಗೆ ಕೋವಿಡ್ ಸಮಯದಲ್ಲಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಈವರೆಗೂ ಪುನರಾರಂಭಿಸಿಲ್ಲ ಎಂದು ಜನರು ದೂರುತ್ತಿದ್ದಾರೆ. ಡೊಂಗ್ರಿ, ಹೆಬ್ಬುಳ, ಮಾಬಗಿ, ಬೇಲೆಕೇರಿ ಭಾಗಕ್ಕೆ ಸರಿಯಾದ ಸಮಯಕ್ಕೆ ಬಸ್ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

ಕುಮಟಾ ಕೋವಿಡ್ ನಂತರ ಕುಮಟಾ ಸಾರಿಗೆ ಡಿಪೋದ ಕೆಲವು ಮಾರ್ಗಗಳ ಒಂದೆರಡು ಟ್ರಿಪ್ ರದ್ದಾಗಿದ್ದು, ಸಾರಿಗೆ ಸಿಬ್ಬಂದಿ ಕೊರತೆಯಿಂದ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.

‘ಬೊಗರಿಬೈಲ ಹಾಗೂ ಬರ್ಗಿ ಗ್ರಾಮಗಳ ತಲಾ ಒಂದೊಂದು ಹಾಗೂ ಅಘನಾಶಿನಿ ಗ್ರಾಮದ ಕೆಲವು ಟ್ರಿಪ್‍ಗಳು ರದ್ದಾಗಿವೆ’ ಎಂದು ಕುಮಟಾ ಸಾರಿಗೆ ಡಿಪೋ ಪ್ರಭಾರ ವ್ಯವಸ್ಥಾಪಕ ವಿನಾಯಕ ದೇಶಭಂಡಾರಿ ಹೇಳಿದರು.

ಹಳಿಯಾಳ-ದಾಂಡೇಲಿ ಮಾರ್ಗದ ಬಸ್ ಜನರನ್ನು ತುಂಬಿಕೊಂಡೆ ಬರುವ ಕಾರಣ ಹಲವಾರು ಬಾರಿ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸುತ್ತಿಲ್ಲ. ಬಸ್ ಹತ್ತಲು ಇಳಿಯಲು ನೂಕುನುಗ್ಗಲು ಇದ್ದೇ ಇರುತ್ತದೆ. ಕುಳಿತುಕೊಳ್ಳಲು ಆಸನ ಸಿಗುವುದಿಲ್ಲ ಎಂಬ ದೂರು ವಿದ್ಯಾರ್ಥಿಗಳಿಂದ ಹೆಚ್ಚಿದೆ. ದಾಂಡೇಲಿ–ಧಾರವಾಡ ಮಾರ್ಗಕ್ಕೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಓಡಾಟ ಆರಂಭಿಸಬೇಕು ಹಾಗೂ ಕೋವಿಡ್ ಕಾಲದಲ್ಲಿ ಸ್ಥಗಿತಗೊಳಿಸಿದ ದೂರದ ಮಾರ್ಗದ ಬಸ್ ಪುನಃ ಸಂಚಾರ ಪುನರಾರಂಭಿಸಬೇಕು ಎಂಬುದು ಜನರ ಒತ್ತಾಯ.

ಸಿದ್ದಾಪುರ ಭಾಗದಲ್ಲಿ ದಿನ ಕಳೆದಂತೆ ಬಸ್‍ಗಳನ್ನು ಕಡಿಮೆಗೊಳಿಸುತ್ತಿರುವುದು ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗಿದೆ. ಕೆಲವು ಹಳ್ಳಿಗಳಿಗೆ ಬಸ್ ವ್ಯವಸ್ಥೆ ಇದ್ದರೂ ಶಾಲೆಯ ಸಮಯಕ್ಕೆ ಬಸ್ ಇಲ್ಲದಿರುವುದು ತೊಂದರೆಯಾಗಿದೆ. ಹಾರ್ಸಿಕಟ್ಟಾ, ಹೆಗ್ಗರಣಿ ಭಾಗಕ್ಕೆ ಸಿದ್ದಾಪುರದಿಂದ ಬಸ್‍ಗಳನ್ನು ಕಡಿಮೆ ಮಾಡಿರುವುದು ಆ ಭಾಗದ ವಿದ್ಯಾರ್ಥಿಗಳನ್ನು ಸಮಸ್ಯೆಗೆ ನೂಕಿದೆ ಎಂಬುದು ಪಾಲಕ ಸಂತೋಷ ನಾಯ್ಕ ದೂರು.

 ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ರವಿ ಸೂರಿ, ಜ್ಞಾನೇಶ್ವರ ದೇಸಾಯಿ, ಮೋಹನ ನಾಯ್ಕ, ಸುಜಯ್ ಭಟ್, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ಅಂಕೋಲಾದಿಂದ ಬೇಲೆಕೇರಿ ಗ್ರಾಮಕ್ಕೆ ತೆರಳುವ ಬಸ್ ರಶ್ ಆಗಿದ್ದರಿಂದ ವಿದ್ಯಾರ್ಥಿಗಳು ಬಸ್ ಏರಲು ಹರಸಾಹಸಪಡುತ್ತಿರುವುದು
ಅಂಕೋಲಾದಿಂದ ಬೇಲೆಕೇರಿ ಗ್ರಾಮಕ್ಕೆ ತೆರಳುವ ಬಸ್ ರಶ್ ಆಗಿದ್ದರಿಂದ ವಿದ್ಯಾರ್ಥಿಗಳು ಬಸ್ ಏರಲು ಹರಸಾಹಸಪಡುತ್ತಿರುವುದು
ಜೊಯಿಡಾ ತಾಲ್ಲೂಕಿನ ಜಗಲಪೇಟ ಶಾಲೆಗೆ ಸಾಗಲು ಬಸ್ ವ್ಯವಸ್ಥೆ ಇಲ್ಲದ ಕಾರಣ ಕುಡಲಗಾಂವ ಗ್ರಾಮದಿಂದ ಎಂಟು ಕಿ.ಮೀ ದೂರ ಕಾಲ್ನಡಿಗೆಯಲ್ಲೇ ಸಾಗುತ್ತಿರುವ ವಿದ್ಯಾರ್ಥಿಗಳು. ಇಬ್ಬರು ಪುಟ್ಟ ಮಕ್ಕಳನ್ನು ಪಾಲಕರು ಭುಜದ ಮೇಲೆ ಹೊತ್ತು ಕರೆದೊಯ್ಯುತ್ತಿರುವುದು
ಜೊಯಿಡಾ ತಾಲ್ಲೂಕಿನ ಜಗಲಪೇಟ ಶಾಲೆಗೆ ಸಾಗಲು ಬಸ್ ವ್ಯವಸ್ಥೆ ಇಲ್ಲದ ಕಾರಣ ಕುಡಲಗಾಂವ ಗ್ರಾಮದಿಂದ ಎಂಟು ಕಿ.ಮೀ ದೂರ ಕಾಲ್ನಡಿಗೆಯಲ್ಲೇ ಸಾಗುತ್ತಿರುವ ವಿದ್ಯಾರ್ಥಿಗಳು. ಇಬ್ಬರು ಪುಟ್ಟ ಮಕ್ಕಳನ್ನು ಪಾಲಕರು ಭುಜದ ಮೇಲೆ ಹೊತ್ತು ಕರೆದೊಯ್ಯುತ್ತಿರುವುದು
ಶಿರಸಿ ವಿಭಾಗಕ್ಕೆ ಹೆಚ್ಚುವರಿ 45 ಬಸ್ ಒದಗಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಬಸ್ ಮಂಜೂರಾದ ನಂತರ ಆದ್ಯತೆ ಮೇರೆಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು
ಕೆ.ಎಚ್.ಶ್ರೀನಿವಾಸ್ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ
ಕೋವಿಡ್ ಮೊದಲು ಅಳ್ವೇಕೋಡಿಗೆ ನಿತ್ಯ 8 ಬಸ್ಸು ಸಂಚರಿಸುತ್ತಿದ್ದವು. ಈಗ ಅದನ್ನು ಮೂರಕ್ಕೆ ಕಡಿತಗೊಳಿಸಲಾಗಿದೆ
ಭಾಸ್ಕರ ಮೊಗೇರ ಅಳ್ವೇಕೋಡಿ
ಶಕ್ತಿ ಯೋಜನೆಯ ಪರಿಣಾಮದಿಂದ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು ದಟ್ಟಣೆಯಿಂದ ಕೂಡಿರುತ್ತಿದೆ. ಇದರಿಂದ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ನಿರಾಯಾಸವಾಗಿ ಪ್ರಯಾಣಿಸಲು ಕಷ್ಟವಾಗಿದೆ
ಮಂಜುನಾಥ ಹೊಳ್ಳ ಪಾಲಕ
ವಿದ್ಯಾರ್ಥಿಗಳಿಗೋಸ್ಕರ ಪ್ರತ್ಯೇಕ ಬಸ್ ಸಂಚರಿಸುವಂತೆ ವ್ಯವಸ್ಥೆ ಆದರೆ ಸೂಕ್ತ
ಸಂದೀಪ ಭೋಸ್ಲೆ ಹಳಿಯಾಳ ಕಾಲೇಜು ವಿದ್ಯಾರ್ಥಿ
ಬಸ್ ಏರಲು ಹರಸಾಹಸ
ಕೋವಿಡ್ ಪೂರ್ವದಲ್ಲಿ ಕಾರವಾರದಿಂದ ಜೊಯಿಡಾ ಮಾರ್ಗವಾಗಿ ಸಂಚರಿಸುತ್ತಿದ್ದ ಹಲವು ಬಸ್‍ಗಳ ಓಡಾಟ ಸ್ಥಗಿತವಾಗಿದೆ. ಅಣಶಿ ನುಜ್ಜಿ ಭಾಗದಿಂದ ಕುಂಬಾರವಾಡ ದಾಂಡೇಲಿ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಕುಂಡಲ ಸೇರಿ ಹಲವು ಗ್ರಾಮಗಳಿಗೆ ಬಸ್ ಸೌಕರ್ಯ ಇಲ್ಲದ ಪರಿಣಾಮ ಮಕ್ಕಳು ಹತ್ತಾರು ಕಿ.ಮೀ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ. ಉಳವಿ ಭಾಗದಿಂದ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಂಬಾರವಾಡದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬರುತ್ತಾರೆ. ಹೀಗೆ ಬರುವವರು ಬೈಲಹೊಂಗಲ ಬಸ್ಸಿಗೆ ಕಷ್ಟಪಟ್ಟು ಹತ್ತಿ ಬರಬೇಕಾಗಿದೆ. ಅನಮೋಡ ತಿನೈಘಾಟ ಭಾಗದ ವಿದ್ಯಾರ್ಥಿಗಳು ಖಾಸಗಿ ವಾಹನಗಳಲ್ಲಿ ಸಂಚರಿಸುವ ಅನಿವಾರ್ಯತೆಯಲ್ಲಿದ್ದಾರೆ. ‘ರಾಮನಗರ ಮಾರ್ಗವಾಗಿ ಗೋವಾಗೆ ಸಂಚರಿಸುವ ಬಸ್ಸುಗಳ ಸಂಖ್ಯೆ ಕಡಿಮೆಯಾಗಿದೆ. ಬಹುತೇಕ ಬಸ್ಸುಗಳನ್ನು ನಿಲ್ಲಿಸುತ್ತಿಲ್ಲ. ಇದರಿಂದ ಮಕ್ಕಳು ಶಿಕ್ಷಣಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ತಿನೈಘಾಟ್‍ನ ವಾಸುದೇವ ಸಾವಂತ ದೂರುತ್ತಾರೆ.
ಅನಿಯಮಿತ ಸಂಚಾರದಿಂದ ಸಮಸ್ಯೆ
ಹೊನ್ನಾವರ ತಾಲ್ಲೂಕಿನಲ್ಲಿ ಬಸ್‌ಗಳ ಅನಿಯಮಿತ ಸಂಚಾರ ಜನರ ಸಂಕಷ್ಟಕ್ಕೆ ಕಾರಣವಾಗಿದೆ. ತಾಲ್ಲೂಕಿನಲ್ಲಿ ಬಸ್ ಡಿಪೊ ಇಲ್ಲದಿರುವುದು ಸಮಸ್ಯೆಗಳನ್ನು ದ್ವಿಗುಣವಾಗಿಸಿದೆ. ‘ರಸ್ತೆ ಸರಿ ಇರದ ಕಾರಣ ಮಳೆಗಾಲ ಕಾಲಿಟ್ಟೊಡನೆ ಮಹಿಮೆಗೆ ಬಸ್ ಬರುವುದು ನಿಂತಿದೆ. ಬಸ್ ಹತ್ತಲು ನಿತ್ಯ 12 ಕಿ.ಮೀ ನಡೆದುಕೊಂಡು ಹೋಗಬೇಕಿದೆ’ ಎಂದು ಮಹಿಮೆಯ ರಾಜೇಶ ನಾಯ್ಕ ಅಳಲು ತೋಡಿಕೊಂಡರು. ‘ಕಡತೋಕಾ ಹೆಬ್ಬಾರನಕೇರಿ ಅರೇಅಂಗಡಿ ಮಾರ್ಗದಲ್ಲಿ ಹೆಚ್ಚಿನ ಬಸ್ ಬಿಡುವಂತೆ ಆಗ್ರಹಿಸಿ ಕಳೆದ ವರ್ಷ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಸಾರಿಗೆ ವ್ಯವಸ್ಥಾಪಕರಿಗೆ ಪತ್ರ ಬರೆದರೂ ಮನವಿಗೆ ಸ್ಪಂದಿಸಿಲ್ಲ’ ಎಂದು ಕಡತೋಕಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಭಟ್ಟ ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT