ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಮಾಜಾಳಿ ಬಂದರಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ

ಸಾಗರಮಾಲಾ ಯೋಜನೆಯಡಿ ನಿರ್ಮಾಣವಾಗಲಿದೆ ಮೀನುಗಾರಿಕಾ ಬಂದರು
Last Updated 2 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಮಾಜಾಳಿಯಲ್ಲಿ ₹ 250 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ಇದರೊಂದಿಗೆ ಕರಾವಳಿಯಲ್ಲಿ ಮತ್ತೊಂದು ಬಂದರು ನಿರ್ಮಾಣದ ಚಟುವಟಿಕೆಗಳು ಗರಿಗೆದರಲಿವೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸಾಗರಮಾಲಾ’ದ ಅಡಿಯಲ್ಲಿ ಬಂದರು ನಿರ್ಮಾಣವಾಗಲಿದೆ. ಕರ್ನಾಟಕ ಮೆರಿಟೈಮ್ ಬೋರ್ಡ್ ಮತ್ತು ಮೀನುಗಾರಿಕಾ ಇಲಾಖೆಯು ಯೋಜನೆಯನ್ನು ಜಂಟಿಯಾಗಿ ಜಾರಿ
ಮಾಡಲಿವೆ.

ಈ ಯೋಜನೆಯು ಜಾರಿಯಾದರೆ ಮಾಜಾಳಿ, ಮಧ್ಯ ದಂಡೇಬಾಗ, ದೇವಬಾಗ, ಬಾವಳ, ಹಿಪ್ಪಳಿ, ಚಿತ್ತಾಕುಲಾ, ದಾಂಡೇಬಾಗ, ನೆಚಕಿನ ಬಾಗ್, ಗಾಬಿತವಾಡ ಭಾಗದ ಮೀನುಗಾರರಿಗೆ ಅನುಕೂಲವಾಗಲಿದೆ. ಗೋವಾದ ಗಡಿಯ ಸಮೀಪವಿರುವ ಕಾರಣ ಇಲ್ಲಿನ ಮೀನುಗಾರರಿಗೆ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಅವಕಾಶವೂ ಆಗುವ ಸಾಧ್ಯತೆಯಿದೆ.

ಮಾಜಾಳಿಯಲ್ಲಿ ಪ್ರಸ್ತುತ ಮೀನುಗಾರಿಕಾ ದೋಣಿಗಳನ್ನು ಸಮರ್ಪಕವಾಗಿ ಲಂಗರು ಹಾಕಲು ಸೌಲಭ್ಯವಿಲ್ಲ. ಸಮುದ್ರ ದಡಕ್ಕೆ ಸಾಧ್ಯವಾದಷ್ಟು ಸಮೀಪದಲ್ಲಿ ದೋಣಿಗಳನ್ನು ಮೀನುಗಾರಿಕೆ ಹೋಗುವುದು, ನಂತರ ಹಿಡಿದ ಮೀನನ್ನು ದಡಕ್ಕೆ ಸಾಗಿಸಲಾಗುತ್ತಿದೆ. ಕಾರವಾರದ ಬೈತಖೋಲ್‌ ಬಂದರು, ಮಾಜಾಳಿಯಿಂದ ಸಾಕಷ್ಟು ದೂರದಲ್ಲಿದೆ. ಹಾಗಾಗಿ, ಇಲ್ಲೊಂದು ಮೀನುಗಾರಿಕಾ ಬಂದರು ನಿರ್ಮಿಸಬೇಕು ಎಂಬ ಬೇಡಿಕೆಯೂ ಇತ್ತು.

ಈ ನಡುವೆ, ಮಾಜಾಳಿಯಲ್ಲಿ ಬಂದರು ಮಾಡುವ ಬದಲು ಮಧ್ಯ ದಂಡೇಬಾಗ ಸೂಕ್ತ ಜಾಗ ಎಂಬ ಒತ್ತಾಯವೂ ಕೆಲವರಿಂದ ಕೇಳಿಬಂದಿತ್ತು. ಇದೇ ಪ್ರದೇಶವನ್ನೇ ಆಯ್ಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ವರ್ಷ ಮಾರ್ಚ್‌ನಲ್ಲಿ ಮನವಿ ಸಲ್ಲಿಕೆಯಾಗಿತ್ತು.

ಮಂಗಳೂರಿನಲ್ಲಿ ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರದ ಅನುಮೋದನೆ ಸಿಕ್ಕಿದ ವಿಚಾರವನ್ನು ತಿಳಿಸಿದರು. ಮಾಜಾಳಿಯಲ್ಲೇ ಹೊಸ ಬಂದರು ನಿರ್ಮಾಣವನ್ನು ಅವರು ಪ್ರಕಟಿಸಿದರು.

ಮಾಜಾಳಿ ಬಂದರು: ಅಂಕಿ ಅಂಶ

₹ 250 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೀನುಗಾರಿಕಾ ಬಂದರಿನಲ್ಲಿ 80 ದೋಣಿಗಳು ನಿಲ್ಲಬಹುದು. ಬಂದರಿನ ಉತ್ತರ ಭಾಗದಲ್ಲಿ 1,140 ಮೀಟರ್ ಹಾಗೂ ದಕ್ಷಿಣದಲ್ಲಿ 595 ಮೀಟರ್ ಉದ್ದದ ಅಲೆ ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ.

ಬಂದರಿನಲ್ಲಿ ಮೂರು ಮೀಟರ್ ಆಳ ಇರಲಿದ್ದು, ವರ್ಷಕ್ಕೆ ಸುಮಾರು 15.50 ಟನ್‌ಗಳಷ್ಟು ಮೀನು ವಹಿವಾಟು ಆಗುವ ನಿರೀಕ್ಷೆಯಿದೆ. ಕಾಮಗಾರಿಯ ಗುತ್ತಿಗೆಯ ಅವಧಿಯು ಮೂರು ವರ್ಷಗಳಿಗೆ ಇರಲಿದೆ. ಉದ್ದೇಶಿತ ಮಾಜಾಳಿ ಮೀನುಗಾರಿಕಾ ಬಂದರಿನ ಸುತ್ತಮುತ್ತ 4,716‌ ಮೀನುಗಾರರು ಇದ್ದಾರೆ ಎಂದು ಮೀನುಗಾರಿಕಾ ಇಲಾಖೆಯ ಅಂಕಿ ಅಂಶ ತಿಳಿಸುತ್ತದೆ.

–––––

* ಮಾಜಾಳಿಯಲ್ಲಿ ಬಂದರು ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ತಾತ್ವಿಕ ಅನುಮೋದನೆ ಸಿಕ್ಕಿದೆ. ಟೆಂಡರ್ ಕರೆಯುವುದು ಸೇರಿದಂತೆ ವಿವಿಧ ಪ್ರಕ್ರಿಯೆಗಳು ನಡೆಯಲಿವೆ.

– ತಾರಾನಾಥ ರಾಥೋಡ್, ಇ.ಇ, ಬಂದರು ಇಲಾಖೆ

* ಮಾಜಾಳಿಯಲ್ಲಿ ಬಂದರು ನಿರ್ಮಾಣವಾಗಬೇಕು ಎಂಬುದು ಹಲವು ವರ್ಷಗಳ ಕನಸಾಗಿತ್ತು. ಅನುಮೋದನೆ ಸಿಗುವ ಮೂಲಕ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಅವಕಾಶ ದೊರೆತಿದೆ.

– ರೂಪಾಲಿ ನಾಯ್ಕ, ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT