ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ: ರಸ್ತೆ, ನೀರಿನ ಕೊರತೆಗೆ ಬಳಲಿದ ಚಂದಾವರ

ಧಾರ್ಮಿಕ, ಪ್ರಾಕೃತಿಕವಾಗಿ ಪ್ರಸಿದ್ಧಿ ಪಡೆದ ಊರಿನಲ್ಲಿ ಹತ್ತಾರು ಸಮಸ್ಯೆ
Published 7 ಫೆಬ್ರುವರಿ 2024, 4:39 IST
Last Updated 7 ಫೆಬ್ರುವರಿ 2024, 4:39 IST
ಅಕ್ಷರ ಗಾತ್ರ

ಹೊನ್ನಾವರ: ಪ್ರಾಕೃತಿಕವಾಗಿ ಸುಂದರವಾಗಿರುವ ತಾಲ್ಲೂಕಿನ ಗಡಿ ಗ್ರಾಮ ಚಂದಾವರದಲ್ಲಿ ಸುಸಜ್ಜಿತ ರಸ್ತೆ, ನೀರಿಗೆ ಕೊರತೆ ಉಂಟಾಗಿದೆ ಎಂಬುದು ಜನರ ದೂರು.

ಚಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 22 ಮಜರೆಗಳು ಹಾಗೂ ನಾಲ್ಕು ಗ್ರಾಮಗಳಿವೆ. ಸುಮಾರು 8,950 ರಷ್ಟು ಜನಸಂಖ್ಯೆ ಇದೆ. ಪ್ರಸಿದ್ಧ ಹನುಮಂತ ದೇವಸ್ಥಾನ ಹಾಗೂ ಭಾವೈಕ್ಯದ ತಾಣವಾಗಿ ಹೆಸರಾದ ಸಂತ ಝೇವಿಯರ್ ಚರ್ಚ್ ಒಳಗೊಂಡ ಗ್ರಾಮಕ್ಕೆ ಬೇರೆ ಬೇರೆ ಕಡೆಗಳಿಂದಲೂ ನೂರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ.

ಕುಮಟಾ, ಹೊನ್ನಾವರ ಹಾಗೂ ಸಿದ್ದಾಪುರ ತಾಲ್ಲೂಕುಗಳನ್ನು ಬೆಸೆಯುವ ಕೂಡು ರಸ್ತೆಯು ಚಂದಾವರ ಪೇಟೆಯಲ್ಲಿ ಹಾದುಹೋಗುವುದರಿಂದ ಇಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಿದೆ.

‘ಐತಿಹಾಸಿಕ ಮಹತ್ವವನ್ನು ಪಡೆದಿರುವ ಗ್ರಾಮ ಕೆಲವು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಹಲವು ಹಳ್ಳಿ ರಸ್ತೆಗಳು ಇನ್ನೂ ದುರ್ಗಮವಾಗಿವೆ. ಉತ್ತಮ ರಸ್ತೆಯ ‘ವರ’ ನಮಗೆ ಇದುವರೆಗೂ ಪ್ರಾಪ್ತವಾಗಿಲ್ಲ’ ಎನ್ನುವುದು ಗ್ರಾಮದ ಪುರಾಣ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದ ಭಕ್ತರ ದೂರು.

ಸಾರಿಗೆ ಬಸ್‍ಗಳ ಕೊರತೆ ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಜನಸಾಮಾನ್ಯರನ್ನು ನಿತ್ಯ ಕಾಡುತ್ತಿದೆ. ಅನತಿ ದೂರದಲ್ಲೇ ಹರಿಯುವ ನದಿ, ಊರಿನ ಮಧ್ಯದಲ್ಲೇ ಹಾದು ಹೋಗಿರುವ ಹಳ್ಳಗಳು ಇವೆಯಾದರೂ ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಜನರು ಹೈರಾಣಾಗುತ್ತಿದ್ದಾರೆ.

‘15ನೇ ಹಣಕಾಸು ಯೋಜನೆಯಡಿ ಸುಮಾರು ₹1 ಲಕ್ಷ ವೆಚ್ಚದಲ್ಲಿ ಹಳ್ಳವೊಂದಕ್ಕೆ ಬಾಂದಾರ ನಿರ್ಮಿಸಲಾಗಿದ್ದು ಇದರಿಂದ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ನೀರು ಪೂರೈಸಲು ಸಾಧ್ಯವಾಗಿದೆ’ ಎಂದು ಚಂದಾವರ ಗ್ರಾಮ ಪಂಚಾಯಿತಿ ಪಿಡಿಒ ದಿನೇಶ ನಾಯ್ಕ ತಿಳಿಸಿದರು.

ಗ್ರಾಮದ ತೋಟವೊಂದರ ಅಡಿಕೆ ಮರಗಳು ಕಳೆದ ವರ್ಷ ಬೇಸಿಗೆಯಲ್ಲಿ ನೀರಿಲ್ಲದೇ ಒಣಗಿದ್ದ ದೃಶ್ಯ
ಗ್ರಾಮದ ತೋಟವೊಂದರ ಅಡಿಕೆ ಮರಗಳು ಕಳೆದ ವರ್ಷ ಬೇಸಿಗೆಯಲ್ಲಿ ನೀರಿಲ್ಲದೇ ಒಣಗಿದ್ದ ದೃಶ್ಯ
ಕಡ್ನೀರ ಗ್ರಾಮದ ಪುರಾಣ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದ ಕಚ್ಚಾ ರಸ್ತೆ
ಕಡ್ನೀರ ಗ್ರಾಮದ ಪುರಾಣ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದ ಕಚ್ಚಾ ರಸ್ತೆ
ಚಂದಾವರ ಗ್ರಾಮ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ನೀರಿನ ಕೊರತೆ ಸಮಸ್ಯೆ ನೀಗಿಸಲು ಗಮನ ಹರಿಸಲಾಗುತ್ತಿದೆ.
ದಿನಕರ ಶೆಟ್ಟಿ ಕುಮಟಾ ಶಾಸಕ

ದೋಸೆಕಟ್ಟು ವ್ಯವಸ್ಥಿತ ನಿರ್ಮಾಣಕ್ಕೆ ಒತ್ತಾಯ

ಕಡ್ನೀರು ಎಂಬ ಗ್ರಾಮ ಚಂದಾವರದ ಮೇಲ್ಭಾಗದಲ್ಲಿದೆ. ಕಡ್ನೀರಲ್ಲಿ ನೀರಿನ ತತ್ವಾರ ವರ್ಷವೂ ಕಂಡುಬರುತ್ತದೆ. ಸುಮಾರು 800 ಜನರು ವಾಸವಾಗಿರುವ ಈ ಹಳ್ಳಿಯಲ್ಲಿರುವ ಹಳ್ಳಕ್ಕೆ ‘ದೋಸೆಕಟ್ಟು’ ಎಂಬ ಬಾಂದಾರವನ್ನು ಹಳ್ಳಿಯ ಜನರೇ ಶ್ರಮದಾನ ಮಾಡಿ ನಿರ್ಮಿಸಿದ್ದಾರೆ. ಬಾಂದಾರ ನಿರ್ಮಿಸಿ ನೀರು ಹಿಡಿದಿಟ್ಟುಕೊಳ್ಳುವುದು ಜನರಿಗೆ ಹರಸಾಹಸವಾಗಿ ಪರಿಣಮಿಸಿದೆ. ಜತೆಗೆ ಪ್ರತಿ ಮಳೆಗಾಲದಲ್ಲಿ ಕಟ್ಟು ನೀರು ಪಾಲಾಗುತ್ತದೆ. ಶಾಶ್ವತ ಕಟ್ಟು ನಿರ್ಮಿಸಿಕೊಡಬೇಕು ಎಂಬ ಜನರ ಬೇಡಿಕೆಗೆ ಜನಪ್ರತಿನಿಧಿಗಳ ಸ್ಪಂದನೆ ದೊರೆತಿಲ್ಲ. ‘ಮಾರ್ಚ್ ನಂತರ ಮೂರು ತಿಂಗಳುಗಳ ಕಾಲ ತೋಟ-ಗದ್ದೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ದೋಸೆಕಟ್ಟು ಸರಿಯಾಗಿ ನಿರ್ಮಾಣಗೊಂಡರೆ ಹೇರಳ ನೀರು ಸಂಗ್ರಹವಾಗಿ ಗ್ರಾಮದ ಕೆಳಭಾಗದಲ್ಲಿಯೂ ಅಂತರ್ಜಲ ಹೆಚ್ಚಾಗುತ್ತದೆ. ಜನರಿಗೆ ಅನುಕೂಲ ಕಲ್ಪಿಸುವ ಇಂಥ ಸುಸ್ಥಿರ ಅಭಿವೃದ್ಧಿಗೆ ಅಧಿಕಾರಿಗಳು ಹಾಗೂ ಶಾಸಕರು ಅಗತ್ಯ ಗಮನ ಕೊಡಬೇಕಿದೆ’ ಎಂದು ಗ್ರಾಮದ ಪ್ರಗತಿಪರ ರೈತ ತಿಮ್ಮಪ್ಪ ನಾಯ್ಕ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT