ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು, ಸಂಗೀತ, ಸಾವಯವ ಊಟದ ಶಿಬಿರ

ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಆಶ್ರಯ
Last Updated 10 ಅಕ್ಟೋಬರ್ 2018, 14:53 IST
ಅಕ್ಷರ ಗಾತ್ರ

ಕುಮಟಾ:ನಿತ್ಯ ಹೊಳೆಯಲ್ಲಿ ಈಜು ಕಲಿಯುವುದು, ಆಗಾಗ ಸಮೀಪದ ಸುಂದರ ತಾಣಗಳಿಗೆ ಪ್ರವಾಸ ಹೋಗುವುದು, ಬೆಳಿಗ್ಗೆ–ಸಂಜೆ ಸಂಗೀತ, ಸಂಸ್ಕೃತ ಪಾಠ, ಅಕ್ಷರಗಳ ಶುದ್ಧ ಬಳಕೆಯ ಅಭ್ಯಾಸ, ಮಧ್ಯಾಹ್ನ ವಿಶೇಷ ಸಾವಯವ ಅಕ್ಕಿಯಿಂದ ತಯಾರಿಸಿದ ಊಟ ಸವಿಯುವುದು...

ಇದು ತಾಲ್ಲೂಕಿನ ಅಳಕೋಡ ಗ್ರಾಮ ಪಂಚಾಯ್ತಿಯ ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಡಾ. ಗಣಪತಿ ಭಟ್ಟ ಅವರು ಕೆಲ ದಿವಸಗಳಿಂದ ಸುತ್ತಲಿನ ಪುಟ್ಟ ಮಕ್ಕಳಿಗಾಗಿಯೇ ಹಮ್ಮಿಕೊಂಡಿರುವ ‘ಸಂಸ್ಕೃತಿ ಶಿಬಿರ’ದ ದಿನಚರಿ.

ಸಂಗೀತ, ಸಂಸ್ಕೃತ, ಜೀವನ ಶಿಕ್ಷಣ ಕಲಿಕೆಗೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡುತ್ತಿರುವ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಉಚಿತ ಶಿಬಿರ ಹಮ್ಮಿಕೊಂಡಿದೆ. ಇದರಲ್ಲಿ ಪಾಲ್ಗೊಂಡಿರುವ50 ವಿದ್ಯಾರ್ಥಿಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಶಿಬಿರದ ನಿರ್ದೇಶಕ ಡಾ.ಗಣಪತಿ ಭಟ್ಟ ಇಡೀ ದಿನ ಮಕ್ಕಳೊಂದಿಗೆ ಆಟ, ಪಾಠದಲ್ಲಿ ಕಾಲ ಕಳೆಯುತ್ತಾರೆ. ಶಿಬಿರದ ಎಲ್ಲ ಚಟುವಟಿಕೆಗಳನ್ನು ಪುಟ್ಟ ಮಕ್ಕಳೇ ನಿರ್ವಹಿಸುತ್ತಾರೆ. ಊಟದ ಸಮಯದಲ್ಲಿ ಕೊಂಚ ದೊಡ್ಡ ಮಕ್ಕಳು ಉಳಿದವರಿಗೆ ಊಟ ಬಡಿಸುತ್ತಾರೆ. ಉಳಿದವರು ಸರತಿಯ ಸಾಲಿನಲ್ಲಿ ನಿಂತು ಊಟ ಪಡೆದುಕೊಳ್ಳುತ್ತಾರೆ.

‘ಶಿಬಿರದ ಸಮೀಪವೇ ಚಂಡಿಕಾ ಹೊಳೆಗೆ ಮಕ್ಕಳನ್ನು ಈಜಲು ಕರೆದುಕೊಂಡು ಹೋಗುತ್ತೇವೆ. ಮೊದ ಮೊದಲು ನೀರಿಗಿಳಿಯಲು ಅಂಜುತ್ತಿದ್ದ ಮಕ್ಕಳು ನಾಲ್ಕೇ ದಿನದಲ್ಲಿ ಈಜು ಕಲಿತಿದ್ದಾರೆ. ನಿತ್ಯ ಸಾವಯವ ಅಕ್ಕಿಯ ಊಟ ನೀಡಲಾಗುತ್ತದೆ. ಸಂಗೀತ, ಸಂಸ್ಕೃತ ಕಾವ್ಯ ವಾಚನ, ಕನ್ನಡ ಶಬ್ದಗಳನ್ನು ಶುದ್ಧವಾಗಿ ಬಳಕೆ ಮಾಡುವುದು ಹಾಗೂ ಜೀವನ ಶಿಕ್ಷಣದ ಬಗ್ಗೆಯೂ ಜ್ಞಾನ ನೀಡಲಾಗುತ್ತದೆ’ ಎಂದು ಗಣಪತಿ ಭಟ್ಟ ವಿವರಿಸಿದರು.

ಸಮೀಪದ ಸಾಂತೂರು ಗ್ರಾಮದಲ್ಲಿ ಗುಡ್ಡದಿಂದ ಧುಮುಕುವ ನೀರಿನಿಂದ ವಿದ್ಯುತ್ ತಯಾರಾಗುವ ಕೇಂದ್ರ, ದೇವಸ್ಥಾನ ಮುಂತಾದ ಪ್ರದೇಶಗಳಿಗೆ ಪ್ರವಾಸಕ್ಕೆ ಕರೆದೊಯ್ಯೊತ್ತೇವೆ. ಶಿಬಿರ ನಡೆಸಲು ಕೆಲವು ರೈತರು ಸಾವಯವ ಅಕ್ಕಿ, ಇನ್ನೊಬ್ಬರು ಮಧ್ಯಾಹ್ನ ಚಹಾದೊಂದಿಗೆ ಸವಿಯಲುಬಿಸ್ಕತ್ ಮುಂತಾದ ಅಗತ್ಯ ಸಾಮಗ್ರಿ ದೇಣಿಗೆಯಾಗಿ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಹಾಗಾಗಿ ಶಿಬಿರದಲ್ಲಿ ಊಟ, ತಿಂಡಿ ಉಚಿತವಾಗಿ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT