ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುದಗಾಳಿ: ಕಾಡಿನ ನಡುವೆ ನೆಲೆನಿಂತ ವಿಠ್ಠಲನಿಗೆ ಇಂದು ಜಾತ್ರೆ ಸಂಭ್ರಮ

Last Updated 2 ಏಪ್ರಿಲ್ 2023, 0:00 IST
ಅಕ್ಷರ ಗಾತ್ರ

ಜೊಯಿಡಾ: ತಾಲ್ಲೂಕಿನ ಮಿನಿ ಪಂಡಾರಪುರ ಎಂದೇ ಖ್ಯಾತಿ ಹೊಂದಿರುವ ದುದಗಾಳಿಯ ವಿಠ್ಠಲ ರಖುಮಾಯಿ ದೇವರ ಜಾತ್ರೆ ಭಾನುವಾರ ನಡೆಯಲಿದೆ. ದಟ್ಟ ಕಾಡಿನ ನಡುವೆ ನೆಲೆನಿಂತ ದೇವರಿಗೆ ಪೂಜಿಸಿ, ಹರಕೆ ಅರ್ಪಿಸುವುದು ವಿಶೇಷ.

ಕೆಂಡ ಹಾಯುವ ವಿಶಿಷ್ಟ ಸಂಪ್ರದಾಯ ನಡೆಯುವ ತಾಲ್ಲೂಕಿನ ಏಕೈಕ ದೇವಸ್ಥಾನ ಇದಾಗಿದೆ. ಸುಮಾರು ಎರಡು ಕಿ.ಮೀ. ದೂರದಲ್ಲಿ ಕಾಡಿನ ಮಧ್ಯೆ ಇರುವ ದೇವರ ಕೆರೆಯಲ್ಲಿ ಪಲ್ಲಕ್ಕಿಯಲ್ಲಿನ ಮೂರ್ತಿಗಳಿಗೆ ಸ್ನಾನ ಮಾಡಿಸಿ ಭಕ್ತರು ಕೆಂಡ ಹಾಯುತ್ತಾರೆ. ಅದೇ ಕೆರೆಯ ನೀರಿನಿಂದ ಸ್ನಾನ ಮಾಡಿ ದೇವರಿಗೆ ಪೂಜೆ ನೈವೇದ್ಯ ಮಾಡಲಾಗುತ್ತದೆ.

ಅಗ್ನಿ ಕುಂಡವನ್ನು ದಾಟುವ ವಿಶಿಷ್ಟ ಪದ್ಧತಿ ದುದಗಾಳಿ ಕ್ಷೇತ್ರದಲ್ಲಿ ಮಾತ್ರ ಇದ್ದು, ಭಕ್ತರು ಜಾತ್ರೆಯ ಹಿಂದಿನ ದಿನ ಅಂದರೆ ಏಕಾದಶಿ ಹಾಗೂ ಜಾತ್ರೆಯ ದಿನ ಉಪವಾಸ ಮಾಡಿ ಗರ್ಭಗುಡಿಯ ಎದುರಿನಲ್ಲಿ ನಿರ್ಮಿಸಿರುವ ಬೆಂಕಿಕೆಂಡದ ರಾಶಿಯಲ್ಲಿ ದೇವರನ್ನು ಜಪಿಸುತ್ತಾ ಹಾದುಹೋಗುತ್ತಾರೆ.

‘ಜಾತ್ರೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ದಿಂಡಿಯೊಂದಿಗೆ ಜನರು ಬರುವುದರ ಜತೆಗೆ ಪಂಡರಾಪುರಕ್ಕೆ ಹೋಗಿ ಮಾಲೆ ಧರಿಸಿದವರು ತಪ್ಪದೇ ಇಲ್ಲಿಗೆ ಬರುತ್ತಾರೆ. ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯದಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಜೊತೆಗೆ ಮನರಂಜನೆಗಾಗಿ ನಾಟಕವನ್ನು ಸಹ ಮಾಡಲಾಗುತ್ತದೆ’ ಎನ್ನುತ್ತಾರೆ ಮಹಾಬಲೇಶ್ವರ ದೇಸಾಯಿ.

ರಾಮನವಮಿ ದಿನದಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿವೆ, ಜಾತ್ರೆಯ ಆರನೇ ದಿನ ಪಂಡರಾಪುರದ ಮಾದರಿಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಮಧ್ಯಾಹ್ನ ವಿಠ್ಠಲ ರಖುಮಾಯಿ ದೇವರನ್ನು ಪಲ್ಲಕ್ಕಿಯಲ್ಲಿ ಹರಿಪಾಠ ವಿಠ್ಠಲ ಭಜನೆಯೊಂದಿಗೆ ವನವಿಹಾರಕ್ಕೆ ಕೊಂಡೊಯ್ಯುವ ಪದ್ಧತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT